ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ 2348 ಸೀಟುಗಳ ಬ್ಲಾಕಿಂಗ್‌ ಕೇಸ್‌: 3 ವಿಶೇಷ ತಂಡ ರಚನೆ

KannadaprabhaNewsNetwork | Updated : Nov 21 2024, 04:42 AM IST

ಸಾರಾಂಶ

ರಾಜ್ಯ ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ 2348 ಸೀಟುಗಳ ಬ್ಲಾಕಿಂಗ್‌ ಪ್ರಕರಣ ಸಂಬಂಧ ತನಿಖೆಗೆ ಮೂರು ವಿಶೇಷ ತಂಡಗಳನ್ನು ಉತ್ತರ ವಿಭಾಗದ ಡಿಸಿಪಿ ಸೈದಲು ಅಡಾವತ್ ನೇಮಿಸಿದ್ದಾರೆ.

 ಬೆಂಗಳೂರು : ರಾಜ್ಯ ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ 2348 ಸೀಟುಗಳ ಬ್ಲಾಕಿಂಗ್‌ ಪ್ರಕರಣ ಸಂಬಂಧ ತನಿಖೆಗೆ ಮೂರು ವಿಶೇಷ ತಂಡಗಳನ್ನು ಉತ್ತರ ವಿಭಾಗದ ಡಿಸಿಪಿ ಸೈದಲು ಅಡಾವತ್ ನೇಮಿಸಿದ್ದಾರೆ.

ಈ ತಂಡ ರಚನೆ ಬೆನ್ನಲ್ಲೇ ವಿಶೇಷ ತಂಡಗಳು ಕಾರ್ಯಾಚರಣೆಗಿಳಿದಿದ್ದು, ಈಗಾಗಲೇ ಅಕ್ರಮದಲ್ಲಿ ಪಾಲ್ಗೊಂಡಿವೆ ಎಂಬ ಆರೋಪಕ್ಕೆ ತುತ್ತಾಗಿರುವ ಖಾಸಗಿ ಕಾಲೇಜುಗಳಿಗೆ ಯುಜಿಸಿ-ಬಿಇ ಸೀಟು ಮರಳಿಸಿದ ವಿದ್ಯಾರ್ಥಿಗಳ ಮಾಹಿತಿ ನೀಡುವಂತೆ ಪೊಲೀಸರು ಸೂಚಿಸಿದ್ದಾರೆ. ಹಾಗೆಯೇ ಸೀಟುಗಳ ಪ್ರವೇಶಾತಿ ಪ್ರಕ್ರಿಯೆ ಕುರಿತು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೂ (ಕೆಇಎ) ಮಾಹಿತಿ ಕೋರಿ ಪೊಲೀಸರು ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ವಾರ ಸೀಟ್ ಬ್ಲಾಕಿಂಗ್ ವಿಚಾರವಾಗಿ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಕೆಇಎ ಕಾರ್ಯದರ್ಶಿ ನೀಡಿದ್ದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು. ಈ ಹಿನ್ನೆಲೆ ಡಿಸಿಪಿ ಸೈದುಲು ಅಡಾವತ್ ಅವರು, ಮಲ್ಲೇಶ್ವರ ಉಪ ವಿಭಾಗದ ಎಸಿಪಿ ಕೃಷ್ಣಮೂರ್ತಿ ಸಾರಥ್ಯದಲ್ಲಿ ಮಹಾಲಕ್ಷ್ಮೀ ಲೇಔಟ್‌, ಮಲ್ಲೇಶ್ವರ ಹಾಗೂ ನಂದಿನಿ ಲೇಔಟ್‌ ಠಾಣೆಗಳ ಇನ್ಸ್‌ಪೆಕ್ಟರ್‌ಗಳನ್ನೊಳಗೊಂಡ ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಕೆಇಎ ನಡೆಸಿದ ಕೌನ್ಸೆಲಿಂಗ್‌ನಲ್ಲಿ ಕೆಲವು ಪ್ರತಿಷ್ಠಿತ ಕಾಲೇಜುಗಳಲ್ಲೇ ಭಾರೀ ಬೇಡಿಕೆಯ ಎಂಜಿನಿಯರಿಂಗ್‌ ಕೋರ್ಸುಗಳಿಗೆ ಅವಕಾಶ ಲಭಿಸಿದರೂ ಹಲವು ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ಹಿಂದೇಟು ಹಾಕಿರುವುದು ಬಯಲಾಗಿತ್ತು. ಹೀಗಾಗಿ ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು, ವಿದ್ಯಾರ್ಥಿಗಳ ಪ್ರವೇಶಾತಿ ತ್ಯಜಿಸಿರುವ ಹಿಂದೆ ಸೀಟ್ ಬ್ಲಾಕಿಂಗ್ ದಂಧೆ ಇರುವ ಬಗ್ಗೆ ಶಂಕಿಸಿದ್ದರು.

ಖಾಸಗಿ ಕಾಲೇಜುಗಳಿಗೆ ತನಿಖೆ ಬಿಸಿ

ಈ ಸೀಟ್ ಬ್ಲಾಕಿಂಗ್ ಜಾಲದ ಹಿಂದೆ ರಾಜ್ಯದ ಪ್ರತಿಷ್ಠಿತ ಖಾಸಗಿ ಎಂಜಿನಿಯರ್‌ ಕಾಲೇಜುಗಳ ಆಡಳಿತ ಮಂಡಳಿ ಇರುವ ಬಗ್ಗೆ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಆರೋಪಕ್ಕೊಳಗಾಗಿರುವ ಆಡಳಿತ ಮಂಡಳಿಗಳಿಗೆ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳ ಪ್ರವೇಶಾತಿ ಹಾಗೂ ಸೀಟು ಮರಳಿಸಿದ ವಿದ್ಯಾರ್ಥಿಗಳ ವಿವರ ಲಭ್ಯವಾದ ನಂತರ ಆ ಮಾಹಿತಿ ಮುಂದಿಟ್ಟು ಆಡಳಿತ ಮಂಡಳಿಗಳಿಗೆ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.

Share this article