ಅಡಕತ್ತರಿಯಲ್ಲಿ ನೀಲಿ ಮಾರ್ಗದ ಬೆಟ್ಟಹಲಸೂರು ಮೆಟ್ರೋ ನಿಲ್ದಾಣ

KannadaprabhaNewsNetwork | Published : Jun 5, 2024 12:32 AM

ಸಾರಾಂಶ

ನಮ್ಮ ಮೆಟ್ರೋ ಕೆ.ಆರ್‌.ಪುರ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗದಲ್ಲಿ ಖಾಸಗಿ ಕಂಪನಿಗಳ ಆರ್ಥಿಕ ಸಹಕಾರದಲ್ಲಿ ನಿರ್ಮಾಣವಾಗಬೇಕಾದ ಬೆಟ್ಟಹಲಸೂರು ಮೆಟ್ರೋ ನಿಲ್ದಾಣದ ವಿಚಾರ ಡೋಲಾಯಮಾನವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮ ಮೆಟ್ರೋ ಕೆ.ಆರ್‌.ಪುರ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಮಾರ್ಗದಲ್ಲಿ ಖಾಸಗಿ ಕಂಪನಿಗಳ ಆರ್ಥಿಕ ಸಹಕಾರದಲ್ಲಿ ನಿರ್ಮಾಣವಾಗಬೇಕಾದ ಬೆಟ್ಟಹಲಸೂರು ಮೆಟ್ರೋ ನಿಲ್ದಾಣದ ವಿಚಾರ ಡೋಲಾಯಮಾನವಾಗಿದೆ. ಇನ್ನು ಜಕ್ಕೂರು ಪ್ಲಾಂಟೇಶನ್ ನಿಲ್ದಾಣ ನಿರ್ಮಾಣ ಬಹುತೇಕ ಅಂತಿಮವಾಗಿದೆ.

ನೀಲಿ ಮಾರ್ಗದ ಡಿಪಿಆರ್‌ನಲ್ಲಿ ಬೆಟ್ಟಹಲಸೂರು, ಜಕ್ಕೂರು ನಿಲ್ದಾಣ ನಿರ್ಮಾಣ ವಿಚಾರ ಡಿಪಿಆರ್‌ನಲ್ಲಿ ಇರಲಿಲ್ಲ. ಇವೆರಡು ನಿಲ್ದಾಣವನ್ನು ಕಂಪನಿಗಳ ಬೇಡಿಕೆ, ಆಸಕ್ತಿ ಮೇರೆಗೆ ಸೇರ್ಪಡೆ ಮಾಡಲಾಗಿದ್ದರೆ, ಬಳಿಕ ಚಿಕ್ಕಜಾಲ ನಿಲ್ದಾಣವನ್ನು ಸ್ಥಳೀಯ ಜನರ ಒತ್ತಾಯದ ಮೇರೆಗೆ ಸೇರ್ಪಡೆ ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಒಟ್ಟು ₹140 ಕೋಟಿ ವೆಚ್ಚದಲ್ಲಿ ಬೆಟ್ಟಹಲಸೂರು ಮೆಟ್ರೋ ನಿಲ್ದಾಣ ನಿರ್ಮಾಣ ಆಗಬೇಕಿತ್ತು. ಈ ಸಂಬಂಧ 2020ರಲ್ಲೇ ಬಿಎಂಆರ್‌ಸಿಎಲ್‌ ಜೊತೆಗೆ ಎಂಬೆಸ್ಸಿ ಗ್ರೂಪ್‌ ಹಣಕಾಸು ನೀಡುವ ಒಪ್ಪಂದವಾಗಿತ್ತು. ನಿಲ್ದಾಣದಿಂದ ಎಂಬೆಸ್ಸಿ ಕಾಂಪ್ಲೆಕ್ಸ್‌ಗೆ ನಿವಾಸಿಗಳಿಗೆ ಅನುಕೂಲ ಆಗುವಂತೆ ವಿಶೇಷ ಪ್ರವೇಶ ಮಾರ್ಗವನ್ನೂ ನಿರ್ಮಿಸುವ ವಿಚಾರ ಇಲ್ಲಿತ್ತು.

ಆದರೆ, 2022ರಲ್ಲಿ ನಿಲ್ದಾಣ ನಿರ್ಮಿಸುವ ವಿಚಾರದಿಂದ ಹಿಂದೆ ಸರಿಯುವುದಾಗಿ ಎಂಬೆಸ್ಸಿ ತಿಳಿಸಿತು. ಪುನಃ 2023ರಲ್ಲಿ ಬಿಎಂಆರ್‌ಸಿಎಲ್‌ ಸಂಪರ್ಕಿಸಿ ಬೆಟ್ಟಹಲಸೂರು ನಿಲ್ದಾಣ ಕಟ್ಟಡಕ್ಕೆ ಆರ್ಥಿಕ ಕೊಡುಗೆ ನೀಡುವುದಾಗಿ ಹೇಳಿ ₹1 ಕೋಟಿ ಮುಂಗಡವಾಗಿ ನೀಡಿತ್ತು. ಮತ್ತೆ ಅಲ್ಲಿಂದ ಬಿಎಂಆರ್‌ಸಿಎಲ್‌ ಸಂಸ್ಥೆಯನ್ನು ಕಂಪನಿ ಸಂಪರ್ಕಿಸಿಲ್ಲ ಎಂದು ಮೆಟ್ರೋದ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಮೇ 29ರಂದು ಬಿಎಂಆರ್‌ಸಿಎಲ್‌ ಮೆಟ್ರೋ ಸಹವರ್ತಿಗಳ ಸಭೆಯನ್ನು ಕರೆದಾಗಲೂ ಕಂಪನಿ ಸಂಪರ್ಕಕ್ಕೆ ಬಂದಿಲ್ಲ. ಆದರೆ ನಿಲ್ದಾಣ ನಿರ್ಮಾಣಕ್ಕೆ ಸಹಕಾರ ನೀಡುವುದಿಲ್ಲ ಎಂದೂ ಹೇಳಿಲ್ಲ. ಅವರು ಅಂತಿಮವಾಗಿ ಖಚಿತ ಹೇಳಿಕೆ ನೀಡದೆ ಈ ಬಗ್ಗೆ ಯಾವುದೇ ತೀರ್ಮಾನ ಆಗಲ್ಲ. ಸದ್ಯ ಈ ವಿಚಾರ ತ್ರಿಶಂಕುವಾಗಿ ಉಳಿದಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ಜಕ್ಕೂರು ಪ್ಲಾಂಟೇಶನ್‌ ನಿಲ್ದಾಣಕ್ಕೆ 140 ಕೋಟಿ

ಉಳಿದಂತೆ, ಜಕ್ಕೂರು ಕ್ರಾಸ್‌ ಹಾಗೂ ಯಲಹಂಕ ನಡುವಿನ ಜಕ್ಕೂರು ಪ್ಲಾಂಟೇಶನ್‌ ಮೆಟ್ರೋ ಸ್ಟೇಷನ್‌ ನಿರ್ಮಾಣಕ್ಕೆ ಬಾಗ್‌ಮನೆ, ಸೆಂಚೂರಿ ಗ್ರೂಪ್‌ಗಳು ₹120 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಬಹುತೇಕ ಒಪ್ಪಿವೆ. ಆದರೆ, ಸ್ಥಳ ಮತ್ತು ನಿಲ್ದಾಣಕ್ಕೆ ಯಾವ ಹೆಸರಿಡಬೇಕು ಎಂಬುದರ ಬಗ್ಗೆ ಕೆಲ ಭಿನ್ನಾಭಿಪ್ರಾಯ ಇದೆ. ಅದರ ಬಗ್ಗೆ ಒಮ್ಮತಕ್ಕೆ ಬರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article