ಬೆಂಗಳೂರು : ಅಪಘಾತದಲ್ಲಿ ಮೃತಪಡುವ ಅಥವಾ ಅಂಗವಿಕಲರಾಗುವ ಬಿಎಂಟಿಸಿ ಸಿಬ್ಬಂದಿ ಮತ್ತು ಅವರ ಕುಟುಂಬದ ಅನುಕೂಲಕ್ಕಾಗಿ ಸಿಬ್ಬಂದಿ ಅಪಘಾತ ವಿಮಾ ಪರಿಹಾರ ಮೊತ್ತವನ್ನು 1 ಕೋಟಿ ರು. ಹೆಚ್ಚಳ ಮಾಡಿ ನಿಗಮವು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.
ನಿಗಮದ ನೌಕರರ ಅಪಘಾತ ವಿಮೆ ನೀಡುವ ಕುರಿತಂತೆ ಕಳೆದ 2023ರಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಆ ವೇಳೆ ವಿಮಾ ಮೊತ್ತವನ್ನು 50 ಲಕ್ಷ ರು.ಗೆ ನಿಗದಿ ಮಾಡಲಾಗಿತ್ತು. ಇದೀಗ ಪರಿಷ್ಕೃತ ನೂತನ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. 50 ಲಕ್ಷ ರು. ವಿಮಾ ಮೊತ್ತವನ್ನು 1 ಕೋಟಿ ರು.ಗೆ ಹೆಚ್ಚಿಸಲಾಗಿದೆ. ನೌಕರರು ಅಪಘಾತದಲ್ಲಿ ಮೃತಪಟ್ಟ ಸಂದರ್ಭದಲ್ಲಿ ಅವರ ನಾಮನಿರ್ದೇಶಿತರಿಗೆ 1 ಕೋಟಿ ರು. ವಿಮಾ ಪರಿಹಾರ ಮೊತ್ತ ದೊರೆಯುವಂತೆ ಮಾಡಲಾಗುತ್ತದೆ.
ಇನ್ನು, ಶಾಶ್ವತ ಮತ್ತು ಭಾಗಶಃ ಅಂಗವಿಕಲತೆ ಹೊಂದಿದ ನೌಕರರ ಪೈಕಿ 25 ಸಾವಿರ ರು.ಗಿಂತ ಕಡಿಮೆ ವೇತನ ಪಡೆಯುವವರಿಗೆ 1 ಕೋಟಿ ರು. ವಿಮೆ ಮತ್ತು ಡೆಬಿಟ್ ಕಾರ್ಡ್ ಮೂಲಕ 4 ಲಕ್ಷ ರು. ಹಾಗೂ 25 ಸಾವಿರ ರು.ಗಿಂತ ಹೆಚ್ಚಿನ ವೇತನ ಪಡೆಯುವವರಿಗೆ 1 ಕೋಟಿ ರು. ವಿಮೆ ಜತೆಗೆ ಡೆಬಿಟ್ ಕಾರ್ಡ್ 15 ಲಕ್ಷ ರು. ಪರಿಹಾರ ನೀಡಲಾಗುತ್ತದೆ.
ನೂತನ ಒಡಂಬಡಿಕೆಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದ ಮೂರ್ತಿ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಎಚ್.ಟಿ. ವಾಸಪ್ಪ ಅವರು ಸಹಿ ಹಾಕಿದರು. ಬಿಎಂಟಿಸಿ ನಿರ್ದೇಶಕ ಅಬ್ದುಲ್ ಅಹದ್, ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪಿ.ವೈ. ನಾಯಕ್ ಇತರರಿದ್ದರು.