ನಾಪತ್ತೆಯಾಗಿದ್ದ ಪ್ರೇಮಿಗಳಿಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

KannadaprabhaNewsNetwork | Published : Apr 23, 2025 12:38 AM

ಸಾರಾಂಶ

ಕಳೆದ ಏಳು ದಿನಗಳ ಹಿಂದೆ ನಾಪತ್ತೆಯಾಗಿದ್ದ ಪ್ರೇಮಿಗಳಿಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಹರಪನಹಳ್ಳಿ ಪಟ್ಟಣ ಸಮೀಪ ಅನಂತನಹಳ್ಳಿ ಗ್ರಾಮದ ಸರ್ಕಾರಿ ಐಟಿಐ ಕಾಲೇಜು ಹಿಂಭಾಗ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿವೆ.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಕಳೆದ ಏಳು ದಿನಗಳ ಹಿಂದೆ ನಾಪತ್ತೆಯಾಗಿದ್ದ ಪ್ರೇಮಿಗಳಿಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಹರಪನಹಳ್ಳಿ ಪಟ್ಟಣ ಸಮೀಪ ಅನಂತನಹಳ್ಳಿ ಗ್ರಾಮದ ಸರ್ಕಾರಿ ಐಟಿಐ ಕಾಲೇಜು ಹಿಂಭಾಗ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿವೆ.

ಜಿಟ್ಚನಕಟ್ಟಿ ಗ್ರಾಮದ ಮದ್ದಾನಸ್ವಾಮಿ (22) ಹಾಗೂ ಬಂಡ್ರಿ ಗ್ರಾಮದ ದೀಪಿಕಾ (18) ಪ್ರೇಮಿಗಳು.

ಮದ್ದಾನಸ್ವಾಮಿ ಹರಪನಹಳ್ಳಿಯ ಸಪಪೂ ಕಾಲೇಜಿನಲ್ಲಿ ಎರಡನೇ ಪಿಯು ಓದುತ್ತಿದ್ದು, ಏ.15ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ಸಂಜೆಯಾದರೂ ಬರಲಿಲ್ಲದ್ದಕ್ಕೆ ಆತನ ಸ್ನೇಹಿತರಿಗೆ ಪೋನ್‌ ಮಾಡಿ ಕೇಳಿದರೂ ಗೊತ್ತಾಗಿಲ್ಲ, ಆತನ ಪೋನ್‌ ಸ್ವಿಚ್‌ ಆಫ್‌ ಆಗಿತ್ತು.

16 ರಂದು ಬಂಡ್ರಿಯ ದೀಪಿಕಾಳ ಕಡೆಯ 4-5 ಜನರು ಯುವಕನ ಮನೆಗೆ ಬಂದು ನಿಮ್ಮ ಹುಡುಗ ದೀಪಿಕಾಳನ್ನು ಕರೆದುಕೊಂಡು ಹೋಗಿದ್ದಾನೆ, ಎಲ್ಲಿದ್ದಾನೆ ಎಂದು ಕೇಳಿ ಗಲಾಟೆ ಮಾಡಿ ನಮ್ಮ ಹಿರಿಯ ಪುತ್ರನ ಪೋನ್‌ ತೆಗೆದುಕೊಂಡು ಹೋಗಿ ನಂತರ ಮರಳಿಸಿದರು. ಹೀಗಿರುವಾಗ ನಿನ್ನೆ ಸಂಜೆ ಹರಪನಹಳ್ಳಿಯ ಅನಂತನಹಳ್ಳಿ ಬಳಿ ಕಾಲೇಜಿನ ಹಿಂಭಾಗ ಹುಡುಗ, ಹುಡುಗಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆ ಹೋಗಿ ನೋಡಿದಾಗ ಶ‍ವದ ಮೇಲಿನ ಬಟ್ಟೆಯ ಸಹಾಯದಿಂದ ನೇಣು ಬಿಗಿದು ನೇತಾಡುತ್ತಿರುವ ಶವ ನನ್ನ ಮಗನದೆ ಎಂದು ಆತನ ತಂದೆ ಖಚಿತಪಡಿಸಿದ್ದಾರೆ. ಆತನ ಜೊತೆಗಿರುವ ಇನ್ನೊಂದು ಹೆಣ್ಣು ಶವವು ಆತನು ಇಷ್ಟಪಟ್ಟಿದ್ದ ಬಂಡ್ರಿ ಗ್ರಾಮದ ದೀಪಿಕಾ ಎಂಬುವಳದ್ದು.

ಮೃತ ಮದ್ದಾನಸ್ವಾಮಿ ತಂದೆ ಜಿಟ್ಟನಕಟ್ಟಿ ಗ್ರಾಮದ ಪೂಜಾರ ಗೋಣೆಪ್ಪ ಈ ಸಂಬಂಧ ಹರಪನಹಳ್ಳಿ ಪೋಲೀಸ್‌ ಠಾಣೆಗೆ ದೂರು ನೀಡಿದ್ದು, ಇವರಿಬ್ಬರ ಸಾವಿನ ಬಗ್ಗೆ ನಮಗೆ ಸಂಶಯ ಇದ್ದು, ಇದು ಆತ್ಮಹತ್ಯೆಯೋ ಅಥವಾ ಬೇರೆ ರೀತಿಯಿಂದ ಸಾವಾಗಿದಿಯೋ ಎಂಬುದು ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ನನ್ನ ಪುತ್ರ ಮದ್ದಾನಸ್ವಾಮಿ ಸಾವಿನ ಬಗ್ಗೆ ಸಂಶಯ ಇದ್ದು, ಸಮಗ್ರ ತನಿಖೆ ಕೈಗೊಂಡು ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಬೇಕೆಂದು ಮದ್ದಾನಸ್ವಾಮಿ ತಂದೆ ಮನವಿ ಮಾಡಿದ್ದಾರೆ.

ಹರಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರು ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದು, ಇದೇ 15ರಂದು ಫಲಿತಾಂಶ ಪ್ರಕಟವಾದಾಗ ದೀಪಿಕಾ 438 ಅಂಕ ಹಾಗೂ ಮದ್ದಾನಸ್ವಾಮಿ 373 ಅಂಕ ಪಡೆದು ಇಬ್ಬರೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.

Share this article