ಕನಕಗಿರಿ: ತಾಲೂಕಿನ ಗೌರಿಪುರ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕಾಮಗಾರಿಯಲ್ಲಿ ಜನರಿಗೆ ಕೆಲಸ ನೀಡದೆ ಬೋಗಸ್ ಬಿಲ್ ಎತ್ತುವಳಿ ಮಾಡಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ್ ಭೇಟಿ ನೀಡಿ, ಪರಿಶೀಲಿಸಿದರು.
೨೦೨೪-೨೫ನೇ ಸಾಲಿನಲ್ಲಿ ನರೇಗಾದಡಿ ಚಿಕ್ಕವಡ್ರಕಲ್ (ರಾಮಣ್ಣ ಭೋವಿ ಹೊಲದಿಂದ ಮುಖ್ಯರಸ್ತೆ ವರೆಗೆ) ಹಾಗೂ ದೇವಲಾಪುರದಲ್ಲಿ (ನಿಂಗಪ್ಪ ದಳಪತಿ ಜಮೀನಿನಿಂದ ಚಿಕ್ಕವಡ್ರಕಲ್ ರಸ್ತೆಯ ವರೆಗೆ) ಗ್ರಾಮದ ನಾಲಾ ಹೂಳೆತ್ತುವ ಎರಡು ಕಾಮಗಾರಿಗಳಿಗೆ ₹೧೯.೫ ಲಕ್ಷ ಅನುದಾನ ಮೀಸಲಿಡಲಾಗಿತ್ತು. ಆದರೆ, ಕೆಲವು ಗ್ರಾಪಂ ಸದಸ್ಯರು ಹಾಗೂ ಗ್ರಾಪಂ ಅಧಿಕಾರಿಗಳು ಕಾಮಗಾರಿಯಲ್ಲಿ ಭಾಗಿಯಾಗಿ ಕೂಲಿಕಾರರಿಗೆ ಕೆಲಸ ನೀಡದೆ ಬೋಗಸ್ ಹಣ ಎತ್ತುವಳಿ ಮಾಡಿದ್ದಾರೆ ಎಂದು ಗ್ರಾಮಸ್ಥರ ದೂರಿನನ್ವಯ ೨೦೨೪ರ ಡಿ. ೯ರಂದು ತಾಪಂ ನರೇಗಾ ಸಹಾಯಕ ನಿರ್ದೇಶಕಿ ಶೆರಪೊನ್ನಿಸಾ ಬೇಗಂ ಭೇಟಿ ನೀಡಿ ವರದಿ ಪಡೆದಿದ್ದರಲ್ಲದೇ, ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆಯೂ ನಡೆಸಿದ್ದರು. ಆಗ ಕಾಮಗಾರಿ ನಡೆಯದೆ ಇರುವುದು ಬೆಳಕಿಗೆ ಬಂದಿತ್ತು.ತಪ್ಪಿತಸ್ಥರ ಮೇಲೆ ಕ್ರಮವಾಗದಿರುವುದಕ್ಕೆ ಆಕ್ರೋಶಗೊಂಡ ಸ್ಥಳೀಯರು ಜಿಪಂಗೆ ದೂರು ಸಲ್ಲಿಸಿದ್ದರು. ಶುಕ್ರವಾರ ಗ್ರಾಪಂಗೆ ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ್ ಅವರು ದಿಢೀರ್ ಭೇಟಿ ನೀಡಿ ದೂರುದಾರರಿಂದ ಮಾಹಿತಿ ಸಂಗ್ರಹಿಸಿದರು. ಆನಂತರ ಸ್ಥಳಕ್ಕೆ ದಾಖಲೆಗಳೊಂದಿಗೆ ತೆರಳಿದಾಗ ಕಾಮಗಾರಿ ನಡೆಯದಿರುವುದು ಗಮನಕ್ಕೆ ಬಂದಿತು.
ತಬ್ಬಿಬ್ಬಾದ ಪಿಡಿ: ಕಾಮಗಾರಿ ಹೆಸರಿನ ಸ್ಥಳದಲ್ಲಿ ಕಾಮಗಾರಿ ನಡೆಯದಿರುವುದು ಕಂಡು ಪಿಡಿ ಪ್ರಕಾಶ ವಡ್ಡರ್ ತಬ್ಬಿಬ್ಬಾದರು. ಆಗ ಪಿಡಿಒ, ಜೆಇ ಕಾಮಗಾರಿಯನ್ನು ಬೇರೆಡೆ ನಡೆಸಲಾಗಿದೆ ಎಂದು ತಿಳಿಸಿದರು. ಒಂದು ಕಡೆ ಕೆಲಸ ಇನ್ನೊಂದು ಕಡೆ ಹೆಸರು ಉಲ್ಲೇಖಿಸುವುದು ನಿಯಮಬಾಹಿರವಾಗಲಿದೆ. ಅಧಿಕಾರಿಗಳ ಜತೆಗೆ ಬಂದಿದ್ದ ದೂರದಾರರು ೨೦೨೩-೨೪ರ ಕಾಮಗಾರಿಯನ್ನು ನಿಮಗೆ ತೋರಿಸುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ. ಅಲ್ಲದೇ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಬಿಲ್ ಪಾವತಿಸಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ ಎಂದರು.ಆನಂತರ ಪತ್ರಕರ್ತರ ಜತೆ ಪಿಡಿ ಪ್ರಕಾಶ ವಡ್ಡರ್ ಮಾತನಾಡಿ, ದೂರುದಾರರು ನೀಡಿದ ದೂರಿನನ್ವಯ ಸ್ಥಳ ಪರಿಶೀಲನೆ ನಡೆಸಲಾಗಿದೆ. ಸ್ಥಳದಲ್ಲಿ ಕಾಮಗಾರಿಯಿಲ್ಲದಿರುವುದು ಗೊತ್ತಾಗಿದೆ. ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸುತ್ತೇವೆ ಎಂದರು.
ಈ ಹಿಂದೆ ತಾಪಂ ನರೇಗಾ ಸಹಾಯಕ ನಿರ್ದೇಶಕಿ ಶರಪೊನ್ನಿಸಾ ಬೇಗಂ ಭೇಟಿ ನೀಡಿದ್ದಾಗ, ಹಳೆಯ ವರ್ಷದ ಕಾಮಗಾರಿ ಹಳೆಯ ಕಾಮಗಾರಿಯನ್ನೇ ತೋರಿಸಿ ಹಗರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ. ಇದಕ್ಕೆ ಅವಕಾಶ ನೀಡದೇ ನರೇಗಾ ಹಣವನ್ನು ದುರ್ಬಳಕೆ ಮಾಡಿಕೊಂಡವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದರು.ತಾಪಂ ಇಒ ರಾಜಶೇಖರ, ದೂರುದಾರರಾದ ಯಮನೂರಪ್ಪ ಜೀರಾಳ, ಅಮರೇಶ ಜೀರಾಳ, ಅಮರೇಶ ವಂಕಲಕುಂಟಿ, ಗ್ರಾಪಂ ಸದಸ್ಯ ಕೃಷ್ಣ ಭೋವಿ, ತಾಪಂ ಇಒ ರಾಜಶೇಖರ, ಪಿಡಿಒ ಅಮರೇಶ ರಾಠೋಡ ಇತರರಿದ್ದರು.