ಸಾರ್ವಜನಿಕರ ಆಸ್ತಿ ರಕ್ಷಣೆಯಲ್ಲಿ ಗದಗ ಪೊಲೀಸ್ ಇಲಾಖೆಯ ದಿಟ್ಟ ಹೆಜ್ಜೆ

KannadaprabhaNewsNetwork |  
Published : Mar 15, 2024, 01:18 AM ISTUpdated : Mar 15, 2024, 04:05 PM IST
ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿದರು.  | Kannada Prabha

ಸಾರಾಂಶ

ಪೊಲೀಸ್‌ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಸೌಜನ್ಯದಿಂದ ಕಾರ್ಯ ನಿರ್ವಹಿಸುವ ಮೂಲಕ ಆದರ್ಶ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಗದಗ: ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಗದಗ ಜಿಲ್ಲೆಯಲ್ಲಿ ಕಣ್ಗಾವಲು ವ್ಯವಸ್ಥೆ ಜಾರಿಗೊಳಿಸಿ ಜನರನ್ನು ಹಾಗೂ ಸಾರ್ವಜನಿಕ ಆಸ್ತಿ ರಕ್ಷಿಸುವಲ್ಲಿ ಪೊಲೀಸ್‌ ಇಲಾಖೆ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಕಾನೂನು, ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಅವರು ಗುರುವಾರ ನಗರದ ಶಹರ ಪೊಲೀಸ್ ಠಾಣೆ ಆವರಣದಲ್ಲಿ ಕೀಲಿ ಹಾಕಿದ ಮನೆಗಳ ಕಣ್ಗಾವಲು ವ್ಯವಸ್ಥೆ ಹಾಗೂ ಪೊಲೀಸ್ ಜಾಗೃತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮನೆಗಳ್ಳತನ ತಡೆಗೆ ರಾಜ್ಯದಲ್ಲಿಯೇ ಮೊಟ್ಟಮೊದಲ ಬಾರಿಗೆ ಕಣ್ಗಾವಲು ವ್ಯವಸ್ಥೆ ಆರಂಭಿಸಿ ಜನರ ಆಸ್ತಿ ಸಂರಕ್ಷಿಸಿ ಕಳ್ಳತನ ಮಾಡುವರಿಗೆ ತಕ್ಕ ಶಾಸ್ತಿ ಮಾಡುವ ಯೋಜನೆ ಇದಾಗಿದೆ. ಪೊಲೀಸ್ ಇಲಾಖೆ ಅತ್ಯಂತ ಕಾಳಜಿ ವಹಿಸಿ ಗಂಭೀರವಾಗಿ ಕಾರ್ಯ ಪ್ರವೃತ್ತರಾಗಿದ್ದು, ಈಗಾಗಲೇ ಯೋಜನೆಗೆ ಬೇಕಾದ ಅಗತ್ಯ ಉಪಕರಣ ಒದಗಿಸಲು ಪ್ರಾರಂಭಿಸಲಾಗಿದೆ. ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಈಗಾಗಲೇ ಥರ್ಡ ಐ ಯೋಜನೆ ಜಾರಿಗೊಳಿಸುವ ಮೂಲಕ ಜನಸಾಮಾನ್ಯರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ಜಾಗೃತಿ ಮೂಡಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಥರ್ಡ ಐ ಜಾರಿಯಿಂದ ಕಾನೂನು ಸುವ್ಯವಸ್ಥೆ ಸರಿಯಾದ ಕ್ರಮದಲ್ಲಿ ಸಾಗುತ್ತಿದ್ದು ಪ್ರಕರಣಗಳನ್ನು ಕಂಡು ಹಿಡಿಯಲು ಥರ್ಡ ಐ ಸಹಕಾರಿಯಾಗಿದೆ ಎಂದರು.

ಪೊಲೀಸ್‌ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಸೌಜನ್ಯದಿಂದ ಕಾರ್ಯ ನಿರ್ವಹಿಸುವ ಮೂಲಕ ಆದರ್ಶ ಸಮಾಜ ನಿರ್ಮಾಣಕ್ಕೆ ಮುಂದಾಗಲಿ.ಪೊಲೀಸ್‌ ಇಲಾಖೆಯಲ್ಲಿನ ತಾಂತ್ರಿಕ ಆಧುನೀಕರಣಕ್ಕೆ ಅಗತ್ಯವಿರುವ ಸಂಪೂರ್ಣ ಬೆಂಬಲ ನೀಡಲಾಗುವುದು, ಸಮಾಜದಲ್ಲಿ ಶಾಂತಿ, ಸುರಕ್ಷತೆ, ಸಮಾಧಾನ ತರಲು ಪೊಲೀಸ್‌ ಇಲಾಖೆ ಅಧಿಕಾರಿಗಳು ಜನಸ್ನೇಹಿ ಕಾರ್ಯಗಳ ಮೂಲಕ ಮಾಡಬಹುದಾಗಿದೆ. ಪೊಲೀಸರೂ ಸಹ ಸಮಾಜ ಸೇವಕರು, ನೀವು ಮಾಡುವ ಒಳ್ಳೆಯ ಕಾರ್ಯ ಸರ್ಕಾರಕ್ಕೆ ಕೀರ್ತಿ ತರಲಿದೆ ಎಂದರು.

ಎಸ್ಪಿ ಬಿ.ಎಸ್.ನೇಮಗೌಡ ಮಾತನಾಡಿ, ಜಿಲ್ಲೆಯಲ್ಲಿ ಅಪರಾಧ ತಡೆಗಟ್ಟಲು ಕಣ್ಗಾವಲು ವ್ಯವಸ್ಥೆಯಿಂದ ಬೀಗ ಹಾಕಿದ ಮನೆಗಳ ಮೇಲೆ ನಿಗಾವಹಿಸಲು ಉಪಯುಕ್ತವಾಗಿದೆ. ಸಹಾಯವಾಣಿ 9480021100 ಸಂಖ್ಯೆಗೆ help ಎಂದು ವಾಟ್ಸಪ್ ಮಾಡಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಪೊಲೀಸ್ ಜಾಗೃತಿ ವಾಹನ ಮೂಲಕ ಮನೆಗಳ್ಳತನ, ಸರ ಕಳ್ಳತನ, ವಾಹನ ಕಳವು, ಮಾದಕ ವಸ್ತುಗಳ ದುರ್ಬಳಕೆ, ಸಂಚಾರಿ ನಿಯಮದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಗದಗ ಜಿಲ್ಲಾ ಪೊಲೀಸ ಇಲಾಖೆ ಸದಾ ಸಿದ್ಧವಾಗಿದೆ.ಸೈಬರ್ ಅಪರಾಧಗಳು ನಡೆದಲ್ಲಿ ಸಹಾಯವಾಣಿ ಸಂಖ್ಯೆ 1930 ತುರ್ತು ಸಂದರ್ಭದಲ್ಲಿ ತುರ್ತು ಸಹಾಯವಾಣಿ 112 ಗೆ ಸಾರ್ವಜನಿಕರು ಕರೆ ಮಾಡಿ ಸಹಾಯ ಪಡೆಯುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ ಅಧೀಕ್ಷಕ ಎಂ.ಬಿ. ಸಂಕದ ಸೇರಿದಂತೆ ಪೊಲೀಸ ಇಲಾಖೆಯ ಹಿರಿಯ ಅಧಿಕಾರಿಗಳು, ಡಾ.ನಾಗನೂರ, ಎಸ್.ಎನ್.ಬಳ್ಳಾರಿ, ಅಶೋಕ ಮಂದಾಲಿ, ಭಾಷಾ ಮಲ್ಲಸಮುದ್ರ ಮುಂತಾದವರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ