ಬೀಡಿ ಉದ್ಯಮಿಗೆ ಸಿನೆಮಾ ಮಾದರಿಯಲ್ಲಿ ನಕಲಿ ಇ.ಡಿ. ಅಧಿಕಾರಿಗಳ ದಾಳಿ : ₹30 ಲಕ್ಷ ಲೂಟಿ

KannadaprabhaNewsNetwork |  
Published : Jan 05, 2025, 01:30 AM ISTUpdated : Jan 05, 2025, 08:48 AM IST
ಸುಲೈಮಾನ್‌ ಹಾಜಿ ಅವರ ಮನೆ. | Kannada Prabha

ಸಾರಾಂಶ

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ನಟನೆಯ ‘ಸ್ಪೆಷಲ್‌ 26’ ಸಿನೆಮಾ ಮಾದರಿಯಲ್ಲಿ ನಕಲಿ ಇ.ಡಿ. (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ನಡೆಸಿ ಬರೋಬ್ಬರಿ ₹30 ಲಕ್ಷ ಲೂಟಿ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಬೋಳಂತೂರು ಎಂಬಲ್ಲಿ ನಡೆದಿದೆ. ಈ ಘಟನೆಯು ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.

  ಬಂಟ್ವಾಳ : ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ನಟನೆಯ ‘ಸ್ಪೆಷಲ್‌ 26’ ಸಿನೆಮಾ ಮಾದರಿಯಲ್ಲಿ ನಕಲಿ ಇ.ಡಿ. (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ದಾಳಿ ನಡೆಸಿ ಬರೋಬ್ಬರಿ ₹30 ಲಕ್ಷ ಲೂಟಿ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಬೋಳಂತೂರು ಎಂಬಲ್ಲಿ ನಡೆದಿದೆ. ಈ ಘಟನೆಯು ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಬೋಳಂತೂರು ಸಮೀಪದ ನಾರ್ಶ ನಿವಾಸಿ ಸಿಂಗಾರಿ ಬೀಡಿ ಸಂಸ್ಥೆಯ ಮಾಲೀಕ ಸುಲೈಮಾನ್ ಹಾಜಿ ಎಂಬುವರ ಮನೆಯಲ್ಲಿ ಕೃತ್ಯ ನಡೆದಿದೆ. ದಾಳಿಕೋರರು ನಕಲಿ ಎಂದು ಗೊತ್ತಾಗುತ್ತಿದ್ದಂತೆಯೇ ಅವರ ಪುತ್ರ ಮಹಮ್ಮದ್ ಇಕ್ಬಾಲ್ ವಿಟ್ಲ ಠಾಣೆಗೆ ದೂರು‌ ನೀಡಿದ್ದಾರೆ.

ಘಟನೆ ನಡೆದಿದ್ದು ಹೇಗೆ?:ಶುಕ್ರವಾರ ರಾತ್ರಿ ತಮಿಳುನಾಡು ನೋಂದಣಿಯ ಕಾರಿನಲ್ಲಿ 6 ಜನ ಅಪರಿಚಿತ ವ್ಯಕ್ತಿಗಳು ಸುಲೈಮಾನ್‌ ಅವರ ಮನೆಗೆ ಆಗಮಿಸಿ, ತಮ್ಮನ್ನು ಇ.ಡಿ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಈ ಕೃತ್ಯವೆಸಗಿದ್ದಾರೆ.

ಮನೆಯನ್ನು ಪರಿಶೀಲಿಸಲು ಆದೇಶ ಇರುವುದಾಗಿ ತಿಳಿಸಿ ಮನೆಯೊಳಗೆ ಮೊದಲು ಪ್ರವೇಶಿಸಿದ್ದಾರೆ. ಮನೆ ಮಂದಿಯ 5 ಮೊಬೈಲ್‌ಗಳನ್ನು ತಮ್ಮ ವಶಕ್ಕೆ ಪಡೆದು ಬಳಿಕ ಮನೆಯನ್ನು ಹುಡುಕಾಡಿದ್ದಾರೆ. ಈ ವೇಳೆ ಸುಲೈಮಾನ್‌ ಕೋಣೆಯ ಕಪಾಟಿನಲ್ಲಿ ವ್ಯವಹಾರಕ್ಕಾಗಿ ಇಟ್ಟಿದ್ದ ಸುಮಾರು ₹25 ರಿಂದ 30 ಲಕ್ಷವನ್ನು ಪಡೆದುಕೊಂಡು, ‘ಇಷ್ಟು ಹಣವನ್ನು ನಿಮ್ಮಲ್ಲಿ ಇಟ್ಟುಕೊಳ್ಳಲು ಅವಕಾಶವಿಲ್ಲ, ನಿಮ್ಮನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳುತ್ತೇನೆ’ ಎಂಬುದಾಗಿ ಹೇಳಿದ್ದಾರೆ. 

‘ವಶಕ್ಕೆ ಪಡೆದಿರುವ ಹಣಕ್ಕೆ ಸೂಕ್ತ ದಾಖಲೆಗಳನ್ನು ನೀಡಿ, ಹಣವನ್ನು ಬೆಂಗಳೂರಿನಲ್ಲಿರುವ ಕಚೇರಿಯಿಂದ ಪಡೆದುಕೊಳ್ಳಿ’ ಎಂದು ಹೇಳಿದ್ದಾರೆ.ಬಳಿಕ ನಲಿ ಇ.ಡಿ. ಅಧಿಕಾರಿಗಳ ತಂಡ ಚಿನ್ನಾಭರಣ ಎಷ್ಟಿದೆ ಎಂದು ತೋರಿಸಿ ಎಂದು ಹೇಳಿ, ಮುಂದಿನ ಮತ್ತು ಹಿಂದಿನ ಮನೆಯ ಬಾಗಿಲು ಬಂದ್ ಮಾಡಿ ಶೋಧ ಆರಂಭಿಸಿದ್ದಾರೆ. ಚಿನ್ನಾಭರಣಗಳನ್ನು ಅಲ್ಲೇ ಬಿಟ್ಟು ಹಣ ಹಾಗೂ ಮೊಬೈಲ್‌ ಅನ್ನು ತಮ್ಮಲ್ಲೇ ಇರಿಸಿಕೊಂಡು, ‘ನಮ್ಮ ಜೊತೆ ಹಿಂದಿನಿಂದ ಬನ್ನಿ, ತನಿಖೆ ಬಳಿಕ ಮೊಬೈಲ್‌ ಕೊಡುತ್ತೇವೆ’ ಎಂದು ನಂಬಿಸಿ ತೆರಳಿದ್ದಾರೆ. 

ಅವರ ಮಾತು ನಂಬಿದ ಸುಲೈಮಾನ್‌ ಕಾರಿನಲ್ಲಿ, ಅವರ ಪುತ್ರ ಸ್ಕೂಟರ್‌ನಲ್ಲಿ ಅವರನ್ನು ಹಿಂಬಾಲಿಸಿದ್ದಾರೆ. ನಾರ್ಶದಿಂದ ಬೋಳಂತೂರು ರಸ್ತೆ ಮೂಲಕ ಕಲ್ಲಡ್ಕದ ಕಡೆಗೆ ಆರೋಪಿಗಳ ಎರ್ಟಿಗಾ ಕಾರು ಸಂಚರಿಸಿದೆ.ಬೋಳಂತೂರು ತುಳಸೀವನ ಭಜನಾ ಮಂದಿರ ತಲುಪುತ್ತಿದ್ದಂತೆ ಕಾರು ಕಾಣೆ ಆಗಿದೆ. ಕಾರು ಕಾಣದೇ ಇದ್ದಾಗ ಸುಲೈಮಾನ್‌ ಪುತ್ರ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಬಂದಿದ್ದು, ಸಂಶಯಗೊಂಡು ಕಲ್ಲಡ್ಕದ ತನಕ ಹೋಗಿ ಹುಡುಕಾಡಿದರೂ ಕಾರು ಪತ್ತೆಯಾಗಿಲ್ಲ.

ಈ ಬಗ್ಗೆ ಸುಲೈಮಾನ್‌ ಅವರ ಮಗ ಮಹಮ್ಮದ್‌ ಇಕ್ಬಾಲ್‌ ತಮ್ಮ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದಾಗ, ವಂಚಕರು ಇ.ಡಿ ಅಧಿಕಾರಿಗಳಂತೆ ನಟಿಸಿ ಲೂಟಿ ಮಾಡಿರುವುದು ಅರಿವಿಗೆ ಬಂದಿದೆ.

6 ಜನರ ತಂಡ:ಇ.ಡಿ. ಅಧಿಕಾರಿಗಳ ಹೆಸರಿನಲ್ಲಿ ನಕಲಿ ದಾಳಿ‌ ನಡೆಸಿದ ತಂಡದಲ್ಲಿ 6 ಜನರು ಇದ್ದರೆಂದು ಹೇಳಲಾಗಿದೆ. ಸುಲೈಮಾನ್ ಹಾಜಿ ಮನೆಯವರನ್ನು ನಿರಂತರ 2 ಗಂಟೆಗಳ ವಿಚಾರಣೆ ನಡೆಸಿ ಬೀಡಿ ಉದ್ಯಮ ಹಾಗೂ ಹಣಕಾಸು ವಹಿವಾಟಿನ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಮನೆಯಲ್ಲಿ ಯಾವುದೇ ಸಿಸಿ ಟಿವಿ ಕ್ಯಾಮರಾ ಇಲ್ಲದ ಕಾರಣ ಆರೋಪಿಗಳ ಪತ್ತೆ ಕಾರ್ಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಸುಲೈಮಾನ್‌ ಪುತ್ರ ಮಹಮ್ಮದ್‌ ಇಕ್ಬಾಲ್‌ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ