ಕನ್ನಡಪ್ರಭ ವಾರ್ತೆ ಸರಗೂರು
ಗೈನಾ ರಮೇಶ್ @ ಔಟ್ ಲುಕ್ ಡಾಟ್ ಕಾಮ್ ಎಂಬ ಇಮೇಲ್ ಐಡಿಯಿಂದ ಬೆಳಗಿನ ಜಾವ ಸುಮಾರು 5ರ ಸಮಯದಲ್ಲಿ ಈ ಸಂದೇಶ ಕಳುಹಿಸಲಾಗಿದ್ದು, ಪ್ರತಿ ದಿನದಂತೆ ಕಚೇರಿ ಸಿಬ್ಬಂದಿ ಇಮೇಲ್ ಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಮದನ್ ಅವರಿಗೆ ಈ ಸಂದೇಶ ಗಮನಕ್ಕೆ ಬಂದಿದೆ.
ತಕ್ಷಣ ಈ ವಿಷಯವನ್ನು ಅವರು ಶಿರಸ್ತೇದಾರ್ ಮನೋಹರ್ ಅವರಿಗೆ ತಿಳಿಸಿದ್ದು, ಬಳಿಕ ತಹಸೀಲ್ದಾರ್ ಮೋಹನ್ ಕುಮಾರಿ ಅವರ ಗಮನಕ್ಕೆ ತಂದರು.ತಹಸೀಲ್ದಾರ್ ಅವರು ಕೂಡಲೇ ಈ ಬಗ್ಗೆ ಸರಗೂರು ಪೊಲೀಸ್ ಠಾಣೆಗೆ, ಹಾಗೆಯೇ ಉನ್ನತಾಧಿಕಾರಿಗಳಾದ ಎಸಿ, ಡಿಸಿ ಅವರಿಗೂ ಮಾಹಿತಿ ನೀಡಿದರು. ಇದರಿಂದ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ತಕ್ಷಣ ಸ್ಥಳಕ್ಕೆ ಧಾವಿಸಿ ಭದ್ರತಾ ಕ್ರಮಗಳನ್ನು ಕೈಗೊಂಡಿತು.
ಸರಗೂರು ಸಿಪಿಐ ಪ್ರಸನ್ನ ಕುಮಾರ್, ಎಸ್‌ಐಗಳಾದ ಕಿರಣ್, ಗೋಪಾಲ್, ಎಎಸ್ಐ ಕೃಷ್ಣಕುಮಾರ್ ಸೇರಿದಂತೆ ಸಿಬ್ಬಂದಿಗಳಾದ ಇಮ್ರಾನ್, ಆನಂದ್, ಕೃಷ್ಣಯ್ಯ, ಸುನಿಲ್ ಹಾಗೂ ಇತರೆ ಪೊಲೀಸ್ ಪಡೆಗಳು ಸ್ಥಳದಲ್ಲಿ ಹೆಚ್ಚಿನ ಬಂದೋಬಸ್ತ್ ವಹಿಸಿದ್ದರು.ಇದಲ್ಲದೆ ಮೈಸೂರಿನಿಂದ ವಿಧ್ವಂಸಕ ಕೃತ್ಯಗಳ ತಪಾಸಣಾ ದಳ ಹಾಗೂ ಶ್ವಾನದಳ ಸ್ಥಳಕ್ಕೆ ಆಗಮಿಸಿ ತಹಸೀಲ್ದಾರ್ ಕಚೇರಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮತ್ತು ಪಕ್ಕದ ಹೆಣ್ಣುಮಕ್ಕಳ ಹಾಸ್ಟೆಲ್ ನಲ್ಲಿಯೂ
ಸುದೀರ್ಘ ತಪಾಸಣೆ ನಡೆಸಿತು.ಕಾರ್ಯಾಚರಣೆಯಲ್ಲಿ ಎಆರ್ಎಸ್ಐ ರಾಘವೇಂದ್ರ, ಪುಟ್ಟರಾಜು, ರಾಜೇಶ್, ಮಂಜುನಾಥ್, ಬೈರನಾಯ್ಕ, ಚಾಲಕ ಮಂಜು ಹಾಗೂ ಶ್ವಾನ ಇಶಾ ಭಾಗವಹಿಸಿದ್ದರು.
ಸುದೀರ್ಘ ಪರಿಶೀಲನೆಯ ಬಳಿಕ ಯಾವುದೇ ಅಪಾಯಕಾರಿ ವಸ್ತುಗಳು ಪತ್ತೆಯಾಗಿಲ್ಲ ಎಂದು ತಪಾಸಣಾಧಿಕಾರಿಗಳು ಪೊಲೀಸ್ ಇಲಾಖೆಗೆ ಹಾಗೂ ತಹಸೀಲ್ದಾರ್ ಅವರಿಗೆ ಅಧಿಕೃತವಾಗಿ ತಿಳಿಸಿದರು. ಇದರಿಂದ ಸಾರ್ವಜನಿಕರು ಮತ್ತು ಸಿಬ್ಬಂದಿ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಟ್ಟರು.ಕಂದಾಯ ಇಲಾಖೆಯ ಗ್ರೇಡ್–2 ತಹಸೀಲ್ದಾರ್ ಪರಶಿವಮೂರ್ತಿ, ಶಿರಸ್ತೇದಾರ್ ಮನೋಹರ್, ಉಪ ತಹಸೀಲ್ದಾರ್ ಸುನಿಲ್, ಆರ್ಐಗಳಾದ ರವಿಚಂದ್ರನ್, ಮುಜೀಬ್, ಶ್ರೀನಿವಾಸ್, ಪಪಂ ಅಧ್ಯಕ್ಷೆ ಚೈತ್ರ ಸ್ವಾಮಿ, ಉಪಾಧ್ಯಕ್ಷ ಶಿವಕುಮಾರ್, ಸದಸ್ಯ ಶ್ರೀನಿವಾಸ್, ಅಕ್ರಮ–ಸಕ್ರಮ ಸಮಿತಿ ಸದಸ್ಯ ಶಿವಶಂಕರನ್ ಸೇರಿದಂತೆ ಅನೇಕ ಗಣ್ಯರು ಇದ್ದರು.
ಈ ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ಸಾವಿರಾರು ಸಾರ್ವಜನಿಕರು ತಹಸೀಲ್ದಾರ್ ಕಚೇರಿ ಮುಂಭಾಗ ಸೇರಿ ಆತಂಕದಿಂದ ಪರಿಸ್ಥಿತಿಯನ್ನು ವೀಕ್ಷಿಸಿದರು. ಘಟನೆ ಸಂಬಂಧ ಪೊಲೀಸರು ಇಮೇಲ್ ಮೂಲ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.