ಶಿಗ್ಗಾಂವಿ: ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿಯಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾದರೂ ಕ್ಷೇತ್ರದ ಸಮಸ್ಯೆಗಳು ಜೀವಂತವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಟೀಕಿಸಿದರು.
ಶುಕ್ರವಾರ ತಾಲೂಕಿನ ತರಲಘಟ್ಟ, ಮಮದಾಪುರ, ಕುನ್ನೂರು ಗ್ರಾಮಗಳಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇವಲ ಶಾಸಕರು ಪರಿಹರಿಸಬಹುದಾದ ಸಮಸ್ಯೆಗಳನ್ನು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದರೂ ಪರಿಹರಿಸಲು ಸಾಧ್ಯವಾಗಿಲ್ಲ. ಹಳ್ಳಿಗಳಲ್ಲಿ ಪ್ರವಾಸ ಮಾಡುವ ಸಮಯದಲ್ಲಿ ಜನ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಅನೇಕ ಹಳ್ಳಿಗಳಿಗೆ ಬಸ್ ಸಂಪರ್ಕ ಇಲ್ಲ, ಕಂದಾಯ ಗ್ರಾಮ ರಚನೆಯ ಬೇಡಿಕೆ ಬಂದಿವೆ. ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ ಎಂದರು.ಬೊಮ್ಮಾಯಿ ಅವರನ್ನು ಸತತವಾಗಿ ನಾಲ್ಕು ಬಾರಿ ಆಯ್ಕೆ ಮಾಡಿದ್ದೀರಿ, ಗೃಹಖಾತೆ, ಸಹಕಾರ ಖಾತೆ, ಜಲಸಂಪನ್ಮೂಲ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ. ಮುಖ್ಯಮಂತ್ರಿಯೂ ಆಗಿದ್ದಾರೆ. ಆದರೆ ಅವರಿಂದ ತಾವು ಪ್ರತಿನಿಧಿಸುವ ಕ್ಷೇತ್ರವನ್ನು ಅಭಿವೃದ್ಧಿಮಾಡಲು ಆಗಿಲ್ಲ. ಸವಣೂರು, ಶಿಗ್ಗಾಂವಿ, ಬಂಕಾಪುರ ಪಟ್ಟಣಗಳಲ್ಲಿ ಸಮರ್ಪಕ ಕುಡಿಯುವ ನೀರಿನ ಸೌಕರ್ಯ ಇಲ್ಲ ಎಂದು ವಾಗ್ದಾಳಿ ಮಾಡಿದರು.ಒಂದೇ ಬೆಳೆಯನ್ನು ಸತತವಾಗಿ ಬೆಳೆದರೆ ಭೂಮಿ ಫಲವತ್ತತೆ ಕಳೆದುಕೊಂಡು ನಂತರ ಇಳುವರಿ ಕಡಿಮೆಯಾಗುತ್ತದೆ. ಆಗ ರೈತರು ಬೆಳೆ ಬದಲಾವಣೆ ಮಾಡುತ್ತಾರೆ. ಇದೇ ರೀತಿ ಸತತವಾಗಿ ಆಯ್ಕೆಯಾಗುತ್ತಾ ಬಂದರೂ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡಿರುವ ಬೊಮ್ಮಾಯಿ ಈ ಬಾರಿ ಬೇಡ. ಉತ್ಸಾಹಿ ಯುವಕ, ಸದಾ ಜನರೊಂದಿಗೆ ಇರುವ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರಿಗೆ ಒಂದು ಅವಕಾಶ ಕೊಟ್ಟು ಈ ಬಾರಿ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.ಜನಪ್ರತಿನಿಧಿಗಳು ಯಾವಾಗಲು ನಿಮ್ಮ ಕೈಗೆ ಸಿಗುವಂತೆ ಇರಬೇಕು. ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ನೀವು ಬೆಂಗಳೂರಿಗೆ ಹೋಗಬೇಕು. ಪ್ರತಿನಿತ್ಯ ಸಿಗುವ ಪಠಾಣ್ ಬೇಕೋ? ಅಪರೂಪಕ್ಕೆ ಸಿಗುವ ಬೊಮ್ಮಾಯಿ ಬೇಕೋ? ಮತದಾರರು ಆಲೋಚನೆ ಮಾಡಬೇಕು ಎಂದರು.ನಾನು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದೇನೆ. ಕ್ಷೇತ್ರದ ಯಾವುದೇ ಮತದಾರರಿಗೆ ಫೋನ್ ಮಾಡಿ, ನಿಮ್ಮ ಕ್ಷೇತ್ರ ಹೇಗಿದೆ? ಎಂದು ಕೇಳಿ ನೋಡಿ, ಯಾರಾದರೂ ನನ್ನ ಬಗ್ಗೆ ದೂರು ನೀಡಿದರೆ ನನಗೆ ಹೇಳಿ. ಮತದಾರರಿಂದ ಯಾವುದೇ ದೂರು ಬಾರದಂತೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ವಂಶಪಾರಂಪರ್ಯ ರಾಜಕಾರಣವನ್ನು ವಿರೋಧ ಮಾಡುತ್ತಾರೆ. ಆದರೆ ಅವರದೇ ಪಕ್ಷದ ಎಸ್.ಆರ್. ಬೊಮ್ಮಾಯಿ ಅವರು ಕುಟುಂಬದಲ್ಲಿ ಈಗ ಮೂರನೇ ತಲೆಮಾರಿನ ರಾಜಕಾರಣ ಆರಂಭವಾಗಿದೆ. ಎಸ್.ಆರ್. ಬೊಮ್ಮಾಯಿ ಸಿಎಂ ಆಗಿದ್ದರು. ಬಸವರಾಜ ಬೊಮ್ಮಾಯಿ ಕೂಡ ಸಿಎಂ ಆದರು. ಈಗ ಅವರು ಮಗ ಭರತ್ ಬೊಮ್ಮಾಯಿ ಅವರನ್ನು ವಿಧಾನಸಭಾ ಚುನಾವಣೆ ಕಣಕ್ಕೆ ಇಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಭರತ್ ಬೊಮ್ಮಾಯಿ ಮಕ್ಕಳು ರಾಜಕೀಯಕ್ಕೆ ಬಂದರೆ ಆಶ್ಚರ್ಯ ಇಲ್ಲ. ಎಲ್ಲಿವರೆಗೆ, ಸಮಸ್ಯೆಗೆ ಸ್ಪಂದಿಸದ ಒಂದೇ ಕುಟುಂಬವನ್ನು ಸಹಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು.ಸುಳ್ಳು ಹೇಳಿ ನಂಬಿಸಿ ಮೋಸ ಮಾಡುವ ಗುಣ ಬಿಜೆಪಿ ನಾಯಕರದ್ದು, ಕೊನೆಯ ಎರಡು ದಿನ ಹಣ ಹಂಚಿ ಮತ ಪಡೆಯಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಯಾವುದೇ ಆಮಿಷಗಳಿಗೆ ಬಲಿಯಾಗದೆ ಜನಪರ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಬೆಂಬಲಿಸಿ ಎಂದರು.ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ಅವರು ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳು ಅನೇಕ ಕುಟುಂಬಗಳಿಗೆ ಆಸರೆಯಾಗಿವೆ. ಆರ್ಥಿಕ ಸ್ಥಿತಿ ಕೂಡ ಸುಧಾರಣೆಯಾಗಿದೆ. ಬಡವರ ಪರವಾಗಿ ಇರುವ ಪಕ್ಷ ಕಾಂಗ್ರೆಸ್ ಎಂದು ಬಣ್ಣಿಸಿದರು. ಕಾಂಗ್ರೆಸ್ ಬಡವರ ಪಕ್ಷ, ಬಿಜೆಪಿ ಎಂದಿಗೂ ಬಡವರ ಪರವಾಗಿ ಆಲೋಚನೆ ಮಾಡಿಲ್ಲ. ಅವರೇನಿದ್ದರೂ ಶ್ರೀಮಂತರ ಪರವಾಗಿದ್ದಾರೆ ಎಂದರು.ಶಾಸಕ ವಿನಯ್ ಕುಲಕರ್ಣಿ ಮಾತನಾಡಿ, ನುಡಿದಂತೆ ನಡೆದ ಸರ್ಕಾರ ನಮ್ಮದು. ಸಿದ್ದರಾಮಯ್ಯ ಕೊಟ್ಟ ಮಾತುಗಳನ್ನು ಈಡೇರಿಸಿದ್ದಾರೆ. ಶೋಷಿತರ ಪರವಾಗಿ ಇದ್ದಾರೆ ಎಂದರು.ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ್, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಅಹ್ಮದ್ ಪಠಾಣ್, ಪಾರಸ್‌ಮಲ್ ಜೈನ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.