ಗುಜರಿ ಗೋದಾಮಿನಲ್ಲಿ ಗೋವುಗಳ ಮೂಳೆ ಸಂಗ್ರಹ...!

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ಗುಜರಿ ಹೆಸರಿನಲ್ಲಿ ಗೋದಾಮು ನಿರ್ಮಿಸಿ ಅಕ್ರಮ ದಂಧೆ, ಮೂಳೆಗಳ ಮೇಲೆ ನೊಣಗಳ ಸಾಗರ, ದುರ್ವಾಸನೆ, ತೂಬಿನಕೆರೆ ನಿರ್ಜನ ಪ್ರದೇಶದಲ್ಲಿ ತಲೆಎತ್ತಿದ್ದ ಗೋದಾಮು, ಬಜರಂಗದಳದ ಕಾರ್ಯಕರ್ತರು ಸ್ಥಳದ ಮೇಲೆ ದಾಳಿ ನಡೆಸಿ ಪತ್ತೆಹಚ್ಚಿದ್ದಾರೆ

ಕನ್ನಡಪ್ರಭ ವಾರ್ತೆ ಮಂಡ್ಯಗುಜರಿ ಹೆಸರಿನಲ್ಲಿ ನಿರ್ಮಿಸಿದ್ದ ಗೋದಾಮಿನೊಳಗೆ ಗೋವುಗಳ ಮೂಳೆಗಳು ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿರುವ ಮೂಳೆಗಳ ಮೇಲೆ ನೊಣಗಳು ರಾಶಿ ರಾಶಿ ತುಂಬಿಕೊಂಡಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ದುರ್ವಾಸನೆ ಬೀರುತ್ತಿದೆ. ತಾಲೂಕಿನ ತೂಬಿನಕೆರೆ ಬಳಿಯ ನಿರ್ಜನ ಪ್ರದೇಶದಲ್ಲಿ ಗೋದಾಮು ನಿರ್ಮಾಣಗೊಂಡಿದ್ದು, ಸ್ಥಳೀಯ ಗ್ರಾಮಸ್ಥರು ಈ ಕುರಿತು ದೂರು ನೀಡಿದ್ದರು. ಬಜರಂಗದಳದ ಕಾರ್ಯಕರ್ತರು ಸ್ಥಳದ ಮೇಲೆ ದಾಳಿ ನಡೆಸಿ ಪತ್ತೆಹಚ್ಚಿದ್ದಾರೆ.

ತೂಬಿನಕೆರೆ ಗ್ರಾಮದ ಲಿಂಗರಾಜು ಅವರ ಜಮೀನನ್ನು ಬಾಡಿಗೆಗೆ ಪಡೆದಿದ್ದ ದಂಧೆಕೋರರು ಗುಜರಿ ಅಂಗಡಿ ನಡೆಸುವುದಕ್ಕೆ ಅನುಮತಿ ಪಡೆದುಕೊಂಡಿದ್ದರು. ಆದರೆ, ಈ ಗೋದಾಮನ್ನು ಗೋವುಗಳ ಮೂಳೆ ಶೇಖರಣೆಗೆ ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದರು. ಮೂಳೆಗಳ ಶೇಖರಣೆಯಿಂದ ಸುತ್ತಮುತ್ತಲ ಪ್ರದೇಶದಲ್ಲಿ ದುರ್ವಾಸನೆ ಹೆಚ್ಚಾಗಿತ್ತು. ನೊಣಗಳ ಹಾವಳಿ ತೀವ್ರವಾಗಿತ್ತು. ಇದು ಅಕ್ಕ-ಪಕ್ಕದ ಗ್ರಾಮಸ್ಥರಲ್ಲಿ ಅನುಮಾನ ಮೂಡುವಂತೆ ಮಾಡಿತ್ತು.

ಜಮೀನಿನ ಮಾಲೀಕ ಲಿಂಗರಾಜು ಆಲೆಮನೆಯಲ್ಲಿಯೇ ಮೂಳೆಗಳ ಪೌಡರ್ ತಯಾರಿಸಿ ಸಾಗಿಸುತ್ತಿದ್ದರೆಂಬ ಆರೋಪವೂ ಕೇಳಿಬಂದಿದೆ. ಈ ವಿಷಯವಾಗಿ ಪೊಲೀಸರು, ಗ್ರಾಪಂ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲವೆಂದು ಸ್ಥಳೀಯ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಸಂಜೆ ಪತ್ತೆಯಾಗಿದ್ದ ಮೂಳೆಗಳ ರಾಶಿ ಬೆಳಗಾಗುವುದರೊಳಗೆ ನಾಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ಪೊಲೀಸರು, ಸ್ಥಳೀಯ ಅಧಿಕಾರಿಗಳ ಶಾಮೀಲಾಗಿರುವ ಅನುಮಾನಗಳು ವ್ಯಕ್ತವಾಗಿವೆ. ಬಜರಂಗ ದಳದವರು ಪ್ರಕರಣ ಪತ್ತೆ ಹಚ್ಚಿದ ನಂತರ ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಪೊಲೀಸರು ಭೇಟಿ ನೀಡಿದರೂ ಮೂಳೆ ಸಂಗ್ರಹಿಸಿದ್ದ ಗೋದಾಮನ್ನು ಜಪ್ತಿ ಮಾಡಿಲ್ಲ. ಪ್ರಕರಣವನ್ನೂ ದಾಖಲಿಸಿಲ್ಲ. ಪೊಲೀಸರ ನಿರ್ಲಕ್ಷ್ಯದಿಂದ ರಾತ್ರೋರಾತ್ರಿ ಕಳ್ಳ ದಾರಿಯಲ್ಲಿ ಮೂಳೆಗಳನ್ನು ಅಕ್ರಮ ಸಾಗಣೆ ಮಾಡಿರುವ ಆರೋಪ ವ್ಯಕ್ತವಾಗಿದೆ.

ಗೋದಾಮಿನಿಂದ ಬರುತ್ತಿದ್ದ ದುರ್ವಾಸನೆಯನ್ನು ಕಂಡು ಸ್ಥಳೀಯ ಗ್ರಾಮಸ್ಥರು ಅದನ್ನು ತೆರವುಗೊಳಿಸುವಂತೆ ಡಿ.೧೩ರಂದೇ ಗ್ರಾಪಂಗೆ ದೂರು ನೀಡಿದ್ದರು. ದೂರು ಆಧರಿಸಿ ಜಾಗದ ಮಾಲೀಕರಿಗೆ ನೋಟಿಸ್ ಕೊಟ್ಟು ಗ್ರಾಪಂ ಅಧಿಕಾರಿಗಳು ಕೈಚೆಲ್ಲಿದ್ದರು. ಸ್ಥಳೀಯ ಗ್ರಾಪಂನಿಂದ ಅನುಮತಿ ಪಡೆಯದೆ ಗುಜರಿ ನಿರ್ಮಾಣ ಮಾಡಿರುವುದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ.ಗೋದಾಮನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಡಿ.೧೩ರಂದು ದೂರು ನೀಡಿದ್ದರು. ಅದರಂತೆ ತೆರವುಗೊಳಿಸಲು ಮಾಲೀಕರಿಗೆ ನೋಟಿಸ್ ನೀಡಿದ್ದೆವು. ನೋಟಿಸ್ ನಂತರವೂ ತೆರವುಗೊಳಿಸಿದ್ದರಿಂದ ಮಂಡ್ಯ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದೆವು.

- ಸ್ವಾಮಿ, ಪಿಡಿಒ, ತೂಬಿನಕೆರೆ ಗ್ರಾಪಂ

Share this article