ಬಳ್ಳಾರಿ: ಪುಸ್ತಕಕ್ಕಿಂತ ಅತ್ಯುತ್ತಮ ಒಡನಾಡಿ ಮತ್ತೊಬ್ಬರಿಲ್ಲ. ಏಕಾಂತ ವ್ಯಕ್ತಿಗೂ ಲೋಕ ಪರಿಚಯಿಸುವ ಪುಸ್ತಕಗಳು, ಓದುಗನಲ್ಲಿ ಧನಾತ್ಮಕ ಮೌಲ್ಯಗಳನ್ನು ಬಿತ್ತುತ್ತವೆ ಎಂದು ಲೇಖಕ ಸಿದ್ಧರಾಮ ಕಲ್ಮಠ ಹೇಳಿದರು.
ನಗರದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ಕನ್ನಡ ಸಾಂಸ್ಕೃತಿಕ ಪರಿಷತ್ತು ಹಮ್ಮಿಕೊಂಡಿದ್ದ ಕನ್ನಡ ಅಭಿಮಾನ-ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಹಿಂದೆ ಪುಸ್ತಕಗಳ ಪಾತ್ರವಿದೆ. ಹೆಚ್ಚು ಗ್ರಂಥಾಲಯಗಳಿದ್ದು, ಓದಿದವರು ಸಾಧಕರಾಗಿದ್ದಾರೆ. ಚಿಂತಕ, ಲೇಖಕ, ವಿಜ್ಞಾನಿ, ಕವಿ, ಪತ್ರಕರ್ತ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಗ್ರಂಥಾಲಯವನ್ನು ಬಳಸಿಕೊಂಡವರಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಪಠ್ಯದ ಜತೆಗೆ ಗ್ರಂಥಾಲಯದಲ್ಲಿನ ಪುಸ್ತಕಗಳ ಅಧ್ಯಯನಕ್ಕೆ ಮೊರೆ ಹೋಗಬೇಕು. ಓದಿ ಓದಿ ಸಾಧನೆ ಹಾದಿಯನ್ನು ಸುಗಮಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ಸಾಂಸ್ಕೃತಿಕ ಪರಿಷತ್ತು ಕನ್ನಡ ಅಭಿಮಾನ-ಅಭಿಯಾನ ವಿಶೇಷ ಯೋಜನೆ ರೂಪಿಸಿಕೊಂಡಿದ್ದು ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡುವ ಕೈಂಕರ್ಯವನ್ನು ಆರಂಭಿಸಿದೆ. ಕರ್ನಾಟಕ ಏಕೀಕರಣದಲ್ಲಿ ಹುತಾತ್ಮರಾದ ಪೈಲ್ವಾನ್ ಪಿಂಜಾರ್ ರಂಜಾನ್‌ಸಾಬ್ ಅವರ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಮಾಜಮುಖಿ ಚಿಂತಕ ಬಾದಾಮಿ ಶಿವಲಿಂಗ ನಾಯಕ, ಲೇಖಕ ಸಿದ್ಧರಾಮ ಕಲ್ಮಠ ಅವರು ಬರೆದ ಕರ್ನಾಟಕ ಏಕೀಕರಣದ ಏಕೈಕ ಹುತಾತ್ಮ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ ಅವರ ಕೃತಿ ಅತ್ಯಂತ ಮೌಲ್ವಿಕವಾಗಿದೆ. ಈ ಕೃತಿಯು ಒಬ್ಬ ವ್ಯಕ್ತಿ ಹುತಾತ್ಮನಾದ ಕತೆಯೇ ಆದರೂ ಇದು ಏಕೀಕರಣ ಮತ್ತು ಕನ್ನಡ ಹೋರಾಟದ ಕಥನವನ್ನು ನಿರೂಪಿಸುವುದರಿಂದ ಭಿನ್ನವಾದ ಕೃತಿ ಎನಿಸಿದೆ. ಇದನ್ನು ಜಿಲ್ಲೆಯ ಕಾಲೇಜು ಎಲ್ಲ ವಿದ್ಯಾರ್ಥಿಗಳಿಗೆ ತಲುಪಿಸಬೇಕು ಎಂಬ ಆಶಯ ನಮ್ಮದಾಗಿದೆ. ವಿದ್ಯಾರ್ಥಿಗಳಿಗೆ ನಾಡಿನ ಬಗ್ಗೆ ಹೆಮ್ಮೆ ಮೂಡಿಸಲು ಪುಸ್ತಕ ವಿತರಣೆಯ ಕಾರ್ಯಕ್ಕೆ ಮುಂದಾಗಿದ್ದೇವೆ. ಹೀಗಾಗಿಯೇ ಅಭಿಯಾನ ಆರಂಭಿಸಲಾಗಿದೆ ಎಂದರು. ಸಮಾಜಸೇವಕರು ಹಾಗೂ ಜನಮುಖಿ ಚಿಂತಕರೂ ಆಗಿರುವ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೊರ್ಲಗುಂದಿ ವಿ. ದೊಡ್ಡ ಕೇಶವರೆಡ್ಡಿ ಅವರು ಉಚಿತ ಪುಸ್ತಕ ವಿತರಣೆಗಾಗಿ ಪರಿಷತ್ ಜತೆಗೆ ಕೈ ಜೋಡಿಸಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ಹಿರೇಮಠ ಅವರು, ಕಾಶ್ಮೀರದಲ್ಲಿ ಉಗ್ರರು ನಡೆಸಿದ ಹಿಂಸಾಚಾರ ಜೀವ ಕಲುಕುತ್ತಿದೆ. ನಾವು ಮಾಡುವ ಕೆಲಸವೇ ನಮ್ಮ ವ್ಯಕ್ತಿತ್ವ ರೂಪಿಸುತ್ತದೆಯೇ, ಜಾತಿ ಧರ್ಮದಿಂದಲ್ಲ ಎಂದರು.ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೊರ್ಲಗುಂದಿ ವಿ. ದೊಡ್ಡ ಕೇಶವ ರೆಡ್ಡಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಿದರು. ಕನ್ನಡ ಪರ ಸಂಘಟನೆಯ ಸಿದ್ಮಲ್ ಮಂಜುನಾಥ, ಮಹೇಶ್ ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕ ಜಯಣ್ಣ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಎಸ್.ಎಂ. ಹಿರೇಮಠ ಅವರು ಜಾಗೃತಿ ಗೀತೆಗಳನ್ನು ಹಾಡಿದರು.