ಕನ್ನಡಪ್ರಭ ವಾರ್ತೆ ಬೆಳಗಾವಿ
ಏಳು ಜನ ಶಿಕ್ಷಕ ಸಪ್ತರ್ಷಿಗಳ ತ್ಯಾಗದ ಫಲವಾಗಿ 1916ರಲ್ಲಿ ಸ್ಥಾಪನೆಗೊಂಡಿರುವ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯು 109 ವರ್ಷಗಳ ಸಮಾಜಮುಖಿ ಪಯಣದಲ್ಲಿ ಗುಣಾತ್ಮಕ ಶಿಕ್ಷಣ ಹಾಗೂ ಆರೋಗ್ಯ ಸೇವೆಯನ್ನು ನೀಡುತ್ತಾ ಜಾಗತಿಕ ಮನ್ನಣೆಗೆ ಪಾತ್ರವಾಗಿರುವುದು ಜನಜನಿತ.ಇಂದು ಕೆಎಲ್‌ಇ ಸಂಸ್ಥೆಯ ಕರ್ನಾಟಕ-ಮಹಾರಾಷ್ಟ್ರ-ದೆಹಲಿ ಮೊದಲ್ಗೊಂಡು 310 ಅಂಗಸಂಸ್ಥೆಗಳನ್ನು ಮುನ್ನಡೆಸುತ್ತಿದೆ. 18000 ಸಿಬ್ಬಂದಿ ವರ್ಗ ಸೇವೆ ಸಲ್ಲಿಸುತ್ತಿದೆ. 1 ಲಕ್ಷ 45 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅದರಲ್ಲಿಯೂ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ. 16 ಅತ್ಯಾಧುನಿಕ ಆಸ್ಪತ್ರೆಗಳನ್ನು ಮುನ್ನಡೆಸುತ್ತಿರುವ ಸಂಸ್ಥೆಯು 4500ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ನೂತನವಾಗಿ ಕ್ಯಾನ್ಸರ್ ಆಸ್ಪತ್ರೆಯನ್ನು ರಾಷ್ಟ್ರಪತಿಗಳಿಂದ ಉದ್ಘಾಟಿಸಿದೆ. 2 ವೈದ್ಯಕೀಯ ಮಹಾವಿದ್ಯಾಲಯಗಳು, ಬೆಳಗಾವಿಯಲ್ಲಿ ವೈದ್ಯಕೀಯ ಡೀಮ್ಡ್ ವಿವಿ, ಹುಬ್ಬಳ್ಳಿಯಲ್ಲಿ ತಾಂತ್ರಿಕ ವಿವಿಗಳನ್ನು ಮುನ್ನಡೆಸುತ್ತಿದೆ. ಕೆಎಲ್‌ಇ ನಾಡಿನ ದೇಶದ ಹೆಮ್ಮೆಯ ಸಂಸ್ಥೆಗಳಲ್ಲಿ ಒಂದಾಗಿ ಬೆಳಗುತ್ತಿದೆ.ಕನ್ನಡ ಕೋಟೆ ಕೆಎಲ್‌ಇ:ಅದರಲ್ಲಿಯೂ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಕೆಎಲ್‌ಇ ಸಂಸ್ಥೆಯ ಕೊಡುಗೆ ಅಪಾರ ಅವಿಸ್ಮರಣೀಯ. ಸಂಸ್ಥೆಯು ಗಡಿ ಭಾಗದಲ್ಲಿ ಗ್ರಾಮೀಣ ರೈತ ಮಕ್ಕಳ ಕಲ್ಯಾಣಕ್ಕಾಗಿ ನೂರಾರು ಅಂಗಸಂಸ್ಥೆಗಳನ್ನು ಸ್ಥಾಪಿಸಿ, ಇಂದಿನ ಶಿಕ್ಷಣದ ಎಲ್ಲ ಅಗತ್ಯತೆಗಳನ್ನು ಪೂರೈಸಿದೆ. ಎಲ್ಲಕ್ಕೂ ಮಿಗಿಲಾಗಿ ಕನ್ನಡ ಭಾಷೆ-ಸಂಸ್ಕೃತಿ-ಪರಂಪರೆಯ ಅಸ್ಮಿತೆಯನ್ನು ನಾಡಿನ ಗಡಿ ಭಾಗದಲ್ಲಿ ಎತ್ತಿ ಹಿಡಿದಿರುವುದು ಸಮಸ್ತ ಕನ್ನಡಿಗರು ಹೆಮ್ಮೆ ಪಡುವ ಸಂಗತಿ. ಮರಾಠಿಮಯವಾಗಿದ್ದ ಬೆಳಗಾವಿ ಜಿಲ್ಲೆಯಲ್ಲಿ ಕಳೆದೊಂದು ಶತಮಾನದಿಂದ ಕೆ.ಎಲ್.ಇ ಸಂಸ್ಥೆಯು ಕನ್ನಡ ವಾತಾವರಣವನ್ನು ಗಟ್ಟಿಯಾಗಿ ಹುರಿಗೊಳಿಸಿದೆ. ಕನ್ನಡ ಭಾಷೆಯನ್ನು ಪೋಷಿಸಿದೆ, ಬೆಳೆಸಿದೆ, ವಿಸ್ತರಿಸಿದೆ. ಕನ್ನಡ ಮಾತೃಭಾಷೆಯ ಶಾಲೆಗಳನ್ನು ಸ್ಥಾಪಿಸಿ ಕನ್ನಡ ಭಾಷೆಯನ್ನು ಗಟ್ಟಿಗೊಳಿಸಿ ಶಕ್ತಿತುಂಬಿದೆ. ಗಡಿಯುದ್ದಕ್ಕೂ ಕನ್ನಡ ಡಿಂಡಿಮದ ಕಲರವ ಮೊಳಗಿಸಿ ವಿಶ್ವಮಾನ್ಯವಾಗಿದೆ.ಎಸ್.ಸಿ.ಪಾಟೀಲ ಕನ್ನಡ ಶಾಲೆ:
ಈ ದಿಸೆಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿಯಲ್ಲಿ ಕೆಎಲ್‌ಇ ಸಂಸ್ಥೆಯು ಪೂರ್ವ ಪ್ರಾಥಮಿಕದಿಂದ ಹಿಡಿದು ಪದವಿ ಶಿಕ್ಷಣದವರೆಗೆ 9 ಪ್ರಮುಖ ಅಂಗಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ಅದರಲ್ಲಿ ಅಂಕಲಿ ಗ್ರಾಮದಲ್ಲಿ ಸಂಸ್ಥೆಯು ಎಸ್.ಸಿ.ಪಾಟೀಲ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯನ್ನು 1989 ರಲ್ಲಿ ಸ್ಥಾಪಿಸಿತು. ಗಡಿಭಾಗದಲ್ಲಿ ಕನ್ನಡ ಶಾಲೆಗಳನ್ನು ಸುವ್ಯವಸ್ಥಿತವಾಗಿ ಕಟ್ಟಿ, ಉಳಿಸಿ, ಗುಣಾತ್ಮಕವಾದ ಶಿಕ್ಷಣವನ್ನು ನೀಡುವುದು ದುಸ್ತರವಾದ ಸಂದರ್ಭದಲ್ಲಿ ಸರ್ಕಾರವೂ ಸಾಧಿಸದ್ದನ್ನು ಕೆಎಲ್‌ಇ ಸಂಸ್ಥೆಯು ಶೇ.100ರಷ್ಟು ಸಾಧಿಸಿ ತೋರಿಸಿದೆ ಎಂಬುದಕ್ಕೆ ಸಾಕ್ಷಿಯಾಗಿರುವ ಎಸ್.ಸಿ.ಪಾಟೀಲ ಕನ್ನಡ ಮಾಧ್ಯಮ ಶಾಲೆಯು ಅತ್ಯಾಧುನಿಕ ಮೂಲ ಸೌಕರ್ಯಗಳನ್ನು ಹೊಂದಿರುವ ಶಾಲೆ. ಶಿಶುವಿಹಾರದಿಂದ 7ನೇ ತರಗತಿವರೆಗೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ನೀಡುತ್ತಿದೆ. ಕೆಎಲ್‌ಇ ಸಂಸ್ಥೆಯು ₹4.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಿಸಿ ಗಡಿ ಭಾಗದಲ್ಲಿ ಕನ್ನಡ ಪ್ರಜ್ಞೆಗೆ ಸಾಕ್ಷಿಯಾಗಿ ನಿಂತಿದೆ. ಸುಸಜ್ಜಿತ ಕಟ್ಟಡ:ಪ್ರಸ್ತುತ ಶಾಲೆಯಲ್ಲಿ ಉತ್ತಮ ವರ್ಗಕೋಣೆಗಳು, ಪ್ರಯೋಗಾಲಯಗಳು, ಗ್ರಂಥಾಲಯ, ಆಟದ ಮೈದಾನ, ಬಾಲಕ ಬಾಲಕಿಯರಿಗೆ ಪ್ರತ್ಯೇಕವಾದ ಶೌಚಾಲಯ, ಶಾಲಾ ಬಸ್ಸಿನ ಸೌಕರ್ಯ, ಪರಿಸರ ಸ್ನೇಹಿ ವಾತಾವರಣ, ಕಣ್ಮನ ಸೆಳೆಯುವ ಉದ್ಯಾನ, ವಿಶಾಲವಾದ ಪ್ರಾಂಗಣ ಒದಗಿಸಲಾಗಿದೆ. ಡಾ. ಪ್ರಭಾಕರ ಕೋರೆಯವರ ಹಾಗೂ ಆಡಳಿತ ಮಂಡಳಿಯವರ ಇಚ್ಛಾಶಕ್ತಿಯಿಂದ ರೂಪಗೊಂಡಿರುವ ಶಾಲೆ ಅಸಂಖ್ಯ ಕನ್ನಡ ವಿದ್ಯಾರ್ಥಿಗಳ ಬದುಕನ್ನು ರೂಪಿಸಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ವಿಜ್ಞಾನಿಗಳಾಗಿ, ತಂತ್ರಜ್ಞರಾಗಿ, ಕಲಾವಿದರಾಗಿ, ಉದ್ಯಮಿಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಸಂಸ್ಥೆಯ ಹೆಮ್ಮೆ ವಿಷಯ.ಈ ಭವ್ಯ ಶಾಲೆಯ ನೂತನ ಕಟ್ಟಡದ ಉದ್ಘಾಟಣೆ ಸಮಾರಂಭವು ಭಾನುವಾರ ದಿನಾಂಕ 18 ಮೇ, 2025ರಂದು ಜರುಗುತ್ತಿರುವುದು, ಈ ಸಮಾರಂಭಕ್ಕೆ ನಾವೆಲ್ಲ ಸಾಕ್ಷಿಯಾಗುತ್ತಿರುವುದು ಒಂದು ಐತಿಹಾಸಿಕ ಮೈಲುಗಲ್ಲು.