ಸೈನಿಕರು ದೇಶವನ್ನು ಕಾಯುವ ಕೆಲಸ ಮಾಡಿದರೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಕನ್ನಡವನ್ನು ಕಾಯುವ ಕೆಲಸ ಮಾಡುತ್ತಿದೆ. ಇದರೊಂದಿಗೆ ಸಾಂಸ್ಕೃತಿಕ ನೆಲೆಗಟ್ಟುಗಳನ್ನು ಪ್ರಚುರಪಡಿಸುವ ಕಾಯಕ ಮಾಡುತ್ತಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಸೈನಿಕರು ದೇಶವನ್ನು ಕಾಯುವ ಕೆಲಸ ಮಾಡಿದರೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಕನ್ನಡವನ್ನು ಕಾಯುವ ಕೆಲಸ ಮಾಡುತ್ತಿದೆ. ಇದರೊಂದಿಗೆ ಸಾಂಸ್ಕೃತಿಕ ನೆಲೆಗಟ್ಟುಗಳನ್ನು ಪ್ರಚುರಪಡಿಸುವ ಕಾಯಕ ಮಾಡುತ್ತಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಹೇಳಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ದ.ಕ. ಜಿಲ್ಲಾಡಳಿತ, ನೃತ್ಯೋಪಾಸನಾ ಕಲಾ ಅಕಾಡೆಮಿ ಪುತ್ತೂರು ಸಹಯೋಗದಲ್ಲಿ ಶನಿವಾರ ಸಂಜೆ ಪುತ್ತೂರಿನ ಶ್ರಿ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿರುವ ದೇವರಮಾರು ಗದ್ದೆಯಲ್ಲಿ ಗಡಿ- ಸಂಸ್ಕೃತಿ ಉತ್ಸವದ ಅಂಗವಾಗಿ ನಡೆದ ‘ಕಲಾರ್ಣವ-೨೦೨೫’ ಭಾವ-ರಾಗ-ತಾಳ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಭರತನಾಟ್ಯವು ಸಂಗೀತ ಕಲೆಗಳ ಕಣ್ಣು ಇದ್ದಂತೆ. ಯುವ ಸಮೂಹವು ಲಹರಿ ಪದಾರ್ಥ, ಸೈಬರ್‌ಕ್ರೆಮ್ ಗಳಂತಹ ಪಿಡುಗುಗಳಿಗೆ ಆಕರ್ಷಿತರಾಗುತ್ತಿದ್ದು, ಇಂತಹ ಕಲಾ ಸಂಸ್ಕೃತಿಗಳಿಂದ ವಿಮುಖರಾಗುತ್ತಿದ್ದಾರೆ. ಕಲೆ ಇದ್ದಲ್ಲಿ ಕಲಹ ಇಲ್ಲ ಎಂಬ ಮಾತಿನಂತೆ ಯುವ ಸಮುದಾಯಕ್ಕೆ ಇಂತಹ ಕಾರ್‍ಯಕ್ರಮಗಳು ಪ್ರೇರಣೆದಾಯಿಯಾಗಿವೆ. ನೃತ್ಯೋಪಾಸನಾ ಕಲಾ ಅಕಾಡಮಿ ಕಳೆದ ಹಲವಾರು ವರ್ಷಗಳಿಂದ ಉತ್ತಮ ಪ್ರಯತ್ನ ನಡೆಸುತ್ತಿದೆ. ಕನ್ನಡ ಬೆಳೆಯುವಲ್ಲಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಇನ್ನಷ್ಟು ಪ್ರಯತ್ನಗಳಾಗಲಿ ಎಂದು ಹಾರೈಸಿದರು. ಕಾರ್‍ಯಕ್ರಮ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ತುಳು ಭಾಷೆಯನ್ನು ಕರ್ನಾಟಕದ ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸುವ ನಿಟ್ಟಿನಲ್ಲಿ ತಾನು ಮೊದಲ ಅಧಿವೇಶದಿಂದ ಆರಂಭಗೊಂಡು ಮೊನ್ನೆ ನಡೆದ ೧೪ನೇ ಅಧಿವೇಶನದ ತನಕ ನಿರಂತರ ಪ್ರಯತ್ನ ಮಾಡಿಕೊಂಡು ಬಂದಿದ್ದೇನೆ. ಈ ಹಿನ್ನಲೆಯಲ್ಲಿ ಆಂಧ್ರಪ್ರದೇಶದಲ್ಲಿ ೨ನೇ ಭಾಷಾ ಪ್ರಕ್ರಿಯೆ ಮಾಡಲಾದ ವಿಧಾನವನ್ನು ಅಧ್ಯಯನ ಮಾಡಲು ಪರಿಣಿತರ ತಂಡ ಕಳುಹಿಸಲಾಗಿದ್ದು, ಕೊನೆಯ ಹಂತದಲ್ಲಿದೆ. ಗಡಿನಾಡಿನ ತುಳು ಭಾಷೆಗೆ ಮಾನ್ಯತೆ ದೊರಕಿಸುವಲ್ಲಿ ಸರಕಾರದ ಮಟ್ಟದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರವೂ ಸಹಕರಿಸಬೇಕು. ಪುತ್ತೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ೯ ಸೆಂಟ್ಸ್ ಜಾಗ ಹೊಂದಿದೆ. ಇದರಲ್ಲಿ ಕನ್ನಡ ಭವನ ನಿರ್ಮಿಸಲು ೨ ಕೋಟಿ ರು. ಅನುದಾನ ಹಾಗೂ ಪರ್ಲಡ್ಕದಲ್ಲಿರುವ ಡಾ. ಕೆ. ಶಿವರಾಮ ಕಾರಂತರ ಕರ್ಮಭೂಮಿಯಾದ ಬಾಲವನ ಅಭಿವೃದ್ಧಿಗೆ ೨ ಕೋಟಿ ರು. ನೀಡಬೇಕು ಎಂದು ಆಗ್ರಹಿಸಿದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ಗಡಿ ಭಾಗದ ಕನ್ನಡಿಗರ ರಕ್ಷಣೆ ಉದ್ದೇಶದೊಂದಿಗೆ ಗಡಿ ಅಭಿವೃದ್ಧಿ ಪ್ರಾಧಿಕಾರ ಹುಟ್ಟಿಕೊಂಡಿದ್ದು, ಪ್ರಾಧಿಕಾರದ ವತಿಯಿಂದ ೬ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ೬೫೮ ಕನ್ನಡ ಶಾಲೆಗಳ ನಡೆಸಲ್ಪಡುತ್ತಿದೆ. ೧೩ ಲಕ್ಷದ ೯ ಸಾವಿರ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಗೋವಾದಲ್ಲಿ ೪ ಲಕ್ಷ, ಮಹಾರಾಷ್ಟ ಗಡಿಯಲ್ಲಿ ಶೇ.೯೦ ಕನ್ನಡ ಭಾಷಿಕರಿದ್ದಾರೆ. ಆಂದ್ರ, ತೆಲಗಾಣ, ತಮಿಳುನಾಡು, ಕಡೆಗಳಲ್ಲಿಯೂ ಕನ್ನಡ ಭಾಷಿಗರು ಸಾಕಷ್ಟಿದ್ದಾರೆ. ಹೊರ ರಾಜ್ಯದಲ್ಲಿರುವ ಕನ್ನಡ ಶಾಲೆಗಳನ್ನು ಉಳಿಸಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ. ಜತೆಗೆ ರಾಜ್ಯದೊಳಗಿನ ೧೭ ಸಾವಿರ ಕನ್ನಡ ಶಾಲೆಗಳನ್ನು ಉಳಿಸುವ ಪ್ರಯತ್ನ ಸರ್ಕಾರದ ಕಡೆಯಿಂದ ನಡೆಯುತ್ತಿದೆ.ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ತಹಸೀಲ್ದಾರ್ ವಿ.ಎಸ್. ಕೂಡಲಗಿ ಉಪಸ್ಥಿತರಿದ್ದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್‍ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಅವರು ಗಡಿ ಅಭಿವೃದ್ಧಿ ಪ್ರಾಧಿಕಾರವು ಗಡಿ ಪ್ರದೇಶದ ಅನೇಕ ಅಭಿವೃದ್ಧಿ ಕಾರ್‍ಯಗಳಿಗೆ ಅನುದಾನ ನೀಡಿದೆ. ಮಂಗಳೂರಿನಲ್ಲಿ ತುಳು ಭವನ, ಬ್ಯಾರಿ ಭವನ, ಕಾಸರಗೋಡು ಕನ್ನಡ ಭವನಕ್ಕೆ ಅನುದಾನ ನೀಡಲಾಗಿದೆ ಎಂದರು.ನೃತ್ಯೋಪಾಸನಾ ಕಲಾ ಅಕಾಡೆಮಿಯ ಸ್ಥಾಪಕ ಟ್ರಸ್ಟಿ, ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್ ಸ್ವಾಗತಿಸಿದರು. ನಿರ್ದೇಶಕ ಆತ್ಮಭೂಷಣ್ ವಂದಿಸಿದರು. ಉಪನ್ಯಾಸಕಿ ವಿಜಯಾ ಸರಸ್ವತಿ ನಿರ್ವಹಿಸಿದರು.ಸಭಾ ಕಾರ್‍ಯಕ್ರಮಕ್ಕೆ ಮುನ್ನ ನಾನಾ ಜಾನಪದ ನೃತ್ಯ ವೈವಿಧ್ಯ ನಡೆಯಿತು. ಕಲಾವಿದರನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಗೌರವಿಸಿದರು.ಸಾಂಸ್ಕೃತಿಕ ವೈಭವ:ಸಭಾ ಕಾರ್‍ಯಕ್ರಮದ ಬಳಿಕ ಡ್ಯಾನ್ಸ್ ಫೆಡರೇಶನ್ ಆಫ್ ಇಂಡಿಯಾದ ಯುವ ಕಲಾ ಪ್ರಶಸ್ತಿ ಪುರಸ್ಕೃತ ಬಾಲ ಕಲಾವಿದ ಮಾಸ್ಟರ್ ಶಮಂತಕ ಅವರಿಂದ ಭರತನಾಟ್ಯ ಪ್ರದರ್ಶನ ಮತ್ತು ಅಂತಾರಾಷ್ಟ್ರೀಯ ಬಾಲ ಕಲಾವಿದೆ ಕುಮಾರಿ ಗಂಗಾ ಶಶಿಧರನ್ ಅವರ ವಯಲಿನ್ ವೈಭವ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.