ಸಾಗುವಳಿ ಚೀಟಿಯಲ್ಲಿ ಗಡಿ ಜಿಲ್ಲೆ ಉತ್ತಮ ಹೆಜ್ಜೆ

KannadaprabhaNewsNetwork | Published : Dec 9, 2024 12:45 AM

ಸಾರಾಂಶ

ಗುಂಡ್ಲುಪೇಟೆಯಲ್ಲಿ ಬಗ‌ರ್ ಹುಕುಂ ಸಾಗುವಳಿ ಚೀಟಿ ವಿತರಣೆ, ಪಹಣಿ, ಪೋಡಿ ದಾಖಲೆ ಮತ್ತು ಕಂದಾಯ ಗ್ರಾಮಗಳ ಹಕ್ಕು ಪತ್ರ ವಿತರಣಾ ಸಮಾರಂಭವನ್ನು ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನೂತನ ತಂತ್ರಜ್ಞಾನದಡಿ ಸಾಗುವಳಿ ಚೀಟಿ, ಪಹಣಿ, ಪೋಡಿ ದಾಖಲೆ ಡಿಜಿಟಲೀಕರಣಗೊಳಿಸಿ ರೈತರಿಗೆ ವಿತರಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನದಲ್ಲಿ ಚಾಮರಾಜನಗರ ಜಿಲ್ಲೆ ಉತ್ತಮ ಹೆಜ್ಜೆ ಇಟ್ಟಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಗುಂಡ್ಲುಪೇಟೆಯ ಶಿಕ್ಷಕರ ಭವನದಲ್ಲಿಂದು ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಗರ್‌ಹುಕುಂ ಸಾಗುವಳಿ ಚೀಟಿ, ಪಹಣಿ, ಪೋಡಿ ದಾಖಲೆ ಹಾಗೂ ಕಂದಾಯ ಗ್ರಾಮಗಳ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಈಗಾಗಲೇ ಡಿಜಿಟಲೀಕರಣಗೊಳಿಸಿರುವ ಸಾಗುವಳಿ ಚೀಟಿ, ಹಾಗೂ ಇತರೆ ದಾಖಲೆಗಳನ್ನು ರೈತರಿಗೆ ವಿತರಿಸಿ ಮಾತನಾಡಿದರು. ಉಳುವವನೇ ಭೂಮಿ ಒಡೆಯ, ಭೂ ಸುಧಾರಣೆ ಯೋಜನೆ ಸೇರಿದಂತೆ ಹಲವು ವಿಷಯಗಳಡಿ ೩೦-೪೦ ವರ್ಷಗಳ ಹಿಂದೆ ಹಲವರಿಗೆ ಭೂಮಿ ಮಂಜೂರಾಗಿದೆ. ಇಂತಹ ಜಮೀನುಗಳು ಇದುವರೆಗೂ ದುರಸ್ತಿಯಾಗಿಲ್ಲ. ರೈತರು ಸಾಗುವಳಿ ಮಾಡುತ್ತಿದ್ದರೂ ಜಮೀನು ಸರ್ಕಾರಿ ಹೆಸರಿನಲ್ಲಿರುತ್ತದೆ. ಜಮೀನಿನ ಮೇಲೆ ಸಂಪೂರ್ಣ ಹಕ್ಕು, ಮಾಲೀಕತ್ವ ರೈತರಿಗೆ ಇಲ್ಲವಾಗಿದೆ. ಜಮೀನು ದುರಸ್ತಿಯಾಗದಿದ್ದರೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನುಬದ್ಧವಾಗಿ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದರು. ದುರಸ್ತಿ ಸಂಬಂಧ ರೈತರು ಅವಶ್ಯ ದಾಖಲೆಗಳನ್ನು ಒದಗಿಸುವುದು ಸಾಧ್ಯವಾಗದಿರಬಹುದು. ಇದನ್ನು ಮನಗಂಡಿರುವ ರಾಜ್ಯಸರ್ಕಾರ ಸಾಗುವಳಿ ಚೀಟಿ, ಪಹಣಿ, ಪೋಡಿ ದಾಖಲೆ ಹಾಗೂ ಕಂದಾಯ ಗ್ರಾಮಗಳ ಹಕ್ಕುಪತ್ರಗಳನ್ನು ನೂತನ ತಂತ್ರಜ್ಞಾನದಡಿ ಡಿಜಿಟಲೀಕರಣಗೊಳಿಸಿ ರೈತರಿಗೆ ವಿತರಿಸುವ ಮಹತ್ತರ ಕಾರ್ಯವನ್ನು ರಾಜ್ಯಾದ್ಯಂತ ಆರಂಭಿಸಿದೆ. ಎಲ್ಲಾ ಕಾನೂನುಗಳನ್ನು ಸುಲಭೀಕರಣಗೊಳಿಸಿ ಒಂದೇ ಸುತ್ತೋಲೆಯಲ್ಲಿ ಅಳವಡಿಸಲಾಗಿದೆ. ಇಂತಹ ಜನಪರ ಕೆಲಸಗಳಿಂದ ಜನರಿಗೆ ಸರ್ಕಾರದ ಬಗ್ಗೆ ಉತ್ತಮ ಅಭಿಪ್ರಾಯ ಮೂಡಲಿದೆ ಎಂದರು. ಹಿಂದೆ ಸಾಗುವಳಿ ಮಾಡದಿರುವವರು, ಇತರರು ಬಗರ್‌ಹುಕುಂ ಅಡಿಯಲ್ಲಿ ಜಮೀನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಿರುವುದು ಕಂಡುಬಂದಿದೆ. ಇದಕ್ಕಾಗಿ ಸರ್ಕಾರ ನೂತನ ತಂತ್ರಜ್ಞಾನ ಸಿದ್ದಪಡಿಸಿದ್ದು, ಈಗ ಇದಕ್ಕೆಲ್ಲಾ ಅವಕಾಶವಿಲ್ಲದಂತಾಗಿದೆ. ಎಲ್ಲವೂ ಅನ್‌ಲೈನ್‌ನಲ್ಲಿ ನಮೂದಾಗುವುದರಿಂದ ದಾಖಲೆಗಳು ಕಳೆದುಹೋಗುವ ಸಂಭವವಿರದೇ ಶಾಶ್ವತವಾಗಿ ಸಾಕಷ್ಟು ವರ್ಷಗಳವರೆಗೆ ಇರಲಿದೆ. ಅಲ್ಲದೆ ಯಾವುದೇ ನಕಲಿ ದಾಖಲೆಗೆ, ಫೋರ್ಜರಿಗೆ, ತಿದ್ದುಪಡಿಗೆ ಅವಕಾಶವಿಲ್ಲದಂತಾಗಿದೆ. ಇದರಿಂದ ರೈತರು ನೆಮ್ಮದಿ ಜೀವನ ನಡೆಸುವಂತಾಗಲಿದೆ.

ಪ್ರಸ್ತುತ ಬಗರ್‌ಹುಕುಂ ಅಡಿ ಜಮೀನು ಸಕ್ರಮಗೊಳಿಸಲು ರಾಜ್ಯಾದ್ಯಂತ ೧ ಲಕ್ಷದ ೫೮ ಸಾವಿರ ಅರ್ಜಿಗಳು ಬಂದಿವೆ. ಸಕ್ರಮಿಕರಣಗೊಳಿಸಲು ಯಾರು ಅರ್ಜಿ ಹಾಕಿದ್ದಾರೋ ಅವರಿಗೆ ಅವಶ್ಯ ದಾಖಲೆಗಳನ್ನು ಪಡೆದು ಪರಿಶೀಲಿಸಿ ಅರ್ಹರಿಗೆ ನಿಯಾಮಾನುಸಾರ ಮಂಜೂರು ಮಾಡಲಾಗುತ್ತದೆ. ಕೆಲವೆಡೆ ಗ್ರಾಮ, ತಾಂಡಾ, ಕ್ಯಾಂಪ್‌ಗಳಿದ್ದು, ೫೦-೧೦೦ ವರ್ಷಗಳಿಂದ ಕಂದಾಯ ಗ್ರಾಮಗಳಾಗಿ ಘೋಷಣೆಯಾಗಿರುವುದಿಲ್ಲ. ಇದರಿಂದ ಜನವಸತಿ ಸೌಲಭ್ಯಗಳನ್ನು ಒದಗಿಸಲು ತೊಂದರೆಯಾಗುತ್ತಿದೆ. ಇದನ್ನು ಪರಿಹರಿಸಲು ಸರ್ಕಾರ ಮುಂದಾಗಿದ್ದು, ಜಮೀನಿನ ನಕ್ಷೆ, ಆಕಾರ್ ಬಂದ್, ಹೊಸ ಸರ್ವೇ ನಂಬರ್ ಹಾಗೂ ಪ್ರತ್ಯೇಕ ಆರ್.ಟಿ.ಸಿ ಯೊಂದಿಗೆ ಸಾಗುವಳಿ ಚೀಟಿಯನ್ನು ಸರ್ಕಾರದ ವತಿಯಿಂದಲೇ ನೋಂದಣಿ ಮಾಡಿಸಿ ಡಿಜಿಟಲೀಕರಣಗೊಳಿಸಿ ರೈತರಿಗೆ ವಿತರಿಸಲಾಗುತ್ತಿದೆ ಎಂದರು. ಚಾಮರಾಜನಗರ ಜಿಲ್ಲೆಯಲ್ಲಿ ೬೮ ವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಗುರುತಿಸಲಾಗಿದ್ದು, ಡಿಜಿಟಲೀಕರಣಗೊಂಡಿರುವ ಕಂದಾಯ ಗ್ರಾಮಗಳ ೧೦ ಹಕ್ಕುಪತ್ರಗಳನ್ನು ಸಾಂಕೇತಿಕವಾಗಿ ಇಂದು ವಿತರಿಸಲಾಗುತ್ತಿದೆ. ಮುಂದಿನ ೪ ತಿಂಗಳೊಳಗೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಅರ್ಹ ರೈತರೆಲ್ಲರಿಗೂ ಸಾಗುವಳಿ ಚೀಟಿ ವಿತರಿಸುವ ಕಾರ್ಯ ಪೂರ್ಣಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಡಿಜಿಟಲೀಕರಣ ಪ್ರಕ್ರಿಯೆಯ ಯಶಸ್ವಿಗೆ ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಡೀಸಿ ಶಿಲ್ಪಾನಾಗ್ ಹಾಗೂ ತಹಸೀಲ್ದಾರ್ ರಮೇಶ್ ಬಾಬು ಅವರ ಸತತ ಪರಿಶ್ರಮದಿಂದ ಇಂದು ಸಾಗುವಳಿ, ಪಹಣಿ, ಪೋಡಿ ದಾಖಲೆಗಳ ವಿತರಣೆ ಗುಂಡ್ಲುಪೇಟೆಯಲ್ಲಿ ಸಾಧ್ಯವಾಗಿದೆ ಎಂದರು. ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಹಿಂದೆ ಬಿ.ರಾಚಯ್ಯ ಅವರು ಸಚಿವರಾಗಿದ್ದ ಅವಧಿಯಲ್ಲಿ ಬಡವರಿಗೆ ಅರಣ್ಯ ಜಾಗವನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ಸಾಗುವಳಿ ಚೀಟಿ ನೀಡಿದ್ದರು. ಅವು ಇನ್ನೂ ದುರಸ್ತಿಯಾಗಿಲ್ಲ. ಕಾನೂನಿನಡಿ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮನವಿ ಮಾಡಿದರು. ಈ ಸಂಬಂಧ ಪ್ರತಿಕ್ರಿಯಿಸಿದ ಸಚಿವರು ಈ ಪ್ರಕರಣದಲ್ಲಿ ಮರುಸಮೀಕ್ಷೆ ನಡೆದಿದ್ದು, ಅರಣ್ಯ ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ ನಡೆಸಿ ಸಮಸ್ಯೆ ಪರಿಹರಿಸಲಾಗುವುದು ಎಂದರು.

ಶಾಸಕ ಗಣೇಶ್‌ ಪ್ರಸಾದ್‌ ಮಾತನಾಡಿ, ಗೋಮಾಳ, ಅರಣ್ಯ ಭೂಮಿಯಲ್ಲಿ ಸಾಗುವಳಿ ಜಮೀನು ನೀಡಲು ಕಾನೂನಿನ ತೊಡಕುಗಳಿವೆ. ಸರ್ಕಾರ ಭೂಮಿ ಸಿಕ್ಕರೆ ಸಾಗುವಳಿ ಜಮೀನು ಕೊಡಿಸುವ ಪ್ರಯತ್ನ ಮಾಡುವೆ. ಪ್ರಸ್ತುತ ಅರಣ್ಯ ಭೂಮಿ, ಗೋಮಾಳದಲ್ಲಿ ಸಾಗುವಳಿ ಜಮೀನು ಮಂಜೂರು ಮಾಡಿಸಿ ಎಂಬ ಬೇಡಿಕೆ ಇದೆ. ಆದರೆ ಕಾನೂನಿನಲ್ಲಿ ಅವಕಾಶ ವಿಲ್ಲ. ಕಂದಾಯ ಸಚಿವರಿಗೂ ಪರ್ಯಾಯ ವ್ಯವಸ್ಥೆ ಮಾಡಿಸಿ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ೫ ತಾಲೂಕುಗಳು, ೧೬ ಹೋಬಳಿಗಳಿವೆ. ೬,೬೦,೬೯೬ ಭೂ ಮಾಲೀಕರಿದ್ದಾರೆ. ೪,೧೧,೫೮೦ ಆರ್.ಟಿ.ಸಿ ಗಳಿವೆ. ೫,೭೫,೭೪೫ ಆರ್.ಟಿ.ಸಿ ಗಳು ಆಶಧಾರ್ ಸೀಡಿಂಗ್ ಆಗಿದ್ದು, ಶೇ. ೮೨.೮೧ರಷ್ಟು ಪ್ರಗತಿ ಸಾಧಿಸಲಾಗಿದೆ. ೪ ಬಗರ್‌ಹುಕುಂ ಸಮಿತಿ ರಚನೆಯಾಗಿವೆ. ೩೨೩೯ ದರಖಾಸ್ತು ಭೂಮಿ ಪೋಡಿಯಾಗಿದ್ದು, 3 ತಿಂಗಳೊಳಗೆ ಸಾಗುವಳಿ ಪತ್ರ ವಿತರಿಸಲಾಗುವುದು. ಭೂ ಸುರಕ್ಷಾ ಯೋಜನೆಯಡಿ ಎಲ್ಲಾ ದಾಖಲಾತಿಗಳು ಡಿಜಿಟಲೀಕರಣಗೊಂಡಿದ್ದು, ಯಳಂದೂರು ತಾಲೂಕನ್ನು ಪೈಲಟ್ ಯೋಜನೆಯಾಗಿ ತೆಗೆದುಕೊಂಡಿದ್ದು ೧೮,೭೧,೭೯೯ ಪುಟಗಳನ್ನು ಡಿಜಿಟಲೀಕರಣ ಆಗಿದೆ. ಎ.ಸಿ. ಹಾಗೂ ಡಿಸಿ ಕೋರ್ಟ್‌ನಲ್ಲಿ ೯೦ ದಿನದೊಳಗೆ ಇತ್ಯರ್ಥಪಡಿಸುವ ಬಾಕಿ ಪ್ರಕರಣಗಳು ಕಡಿಮೆ ಇವೆ. ಕಂದಾಯ ಇಲಾಖೆಯ ಎಲ್ಲಾ ಅಧೀನ ಕಚೇರಿಗಳು ಇ-ಆಫೀಸ್ ಆಗಿದ್ದು, ಇ-ಆಫೀಸ್ ಪ್ರಕ್ರಿಯೆಯಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ ಎಂದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಕಿರಣ್‌ ಗೌಡ,ಉಪಾಧ್ಯಕ್ಷೆ ಹೀನಾಕೌಸರ್‌,ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ,ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾದ ಪಿ.ಮಹದೇವಪ್ಪ, ಹಂಗಳ ನಾಗರಾಜು,ಕಲಾವತಿ ಮಹೇಶ್‌,ಉಪ ವಿಭಾಗಾಧಿಕಾರಿ ಬಿ.ಆರ್.ಮಹೇಶ್‌,ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಹಾಗು ಪುರಸಭೆ ಸದಸ್ಯರು,ಕಾಂಗ್ರೆಸ್‌ ಮುಖಂಡರು ಇದ್ದರು.

Share this article