ಇಕ್ರಾ ಸಂಸ್ಥೆಯಿಂದ ಕೊಳವೆಬಾವಿ ಮರುಪೂರಣ ಕಾರ್ಯ

KannadaprabhaNewsNetwork |  
Published : Apr 20, 2024, 01:03 AM IST
ಕೊಟ್ಟೂರು ತಾಲೂಕಿನ ತಿಮ್ಮಲಾಪುರ ಗ್ರಾಮದಲ್ಲಿ ಚಂದ್ರಪ್ಪ ಅವರ ಬೋರ್‌ಗೆ ಮಾಡಲಾದ ಮರುಪೂರಣ ವ್ಯವಸ್ಥೆ ನಂತರ ಜಲತಜ್ಞ ಡಾ.ದೇವರಾಜ ರೆಡ್ಡಿ ರೈತರಿಗೆ ಮಾಹಿತಿ ನೀಡಿದರು. | Kannada Prabha

ಸಾರಾಂಶ

ರೈತರು ತಾವು ಹಾಕಿಸಿದ ಬೋರ್‌ನಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಮತ್ತೊಂದು ಬೋರ್ ಕೊರೆಸುವುದು ಸಾಮಾನ್ಯ.

ಕೊಟ್ಟೂರು: ಪಟ್ಟಣದ ಇಕ್ರಾ ಸಂಸ್ಥೆಯಿಂದ ತಾಲೂಕಿನ ತಿಮ್ಮಾಲಾಪುರ ಗ್ರಾಮದಲ್ಲಿ ಕೊಳವೆಬಾವಿ ಮರುಪೂರಣ ಮಾಡುವ ಕಾರ್ಯವನ್ನು ಪ್ರಾಯೋಗಿಕವಾಗಿ ರೈತರಿಗೆ ಶುಕ್ರವಾರ ತೋರಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜಲ ತಜ್ಞ ಡಾ.ದೇವರಾಜ ರೆಡ್ಡಿ ಅವರೇ ಸ್ವತಃ ಗ್ರಾಮದ ಚಂದ್ರಪ್ಪರ ಹೊಲದಲ್ಲಿದ್ದ ಕಡಿಮೆ ನೀರಿನ ಕೊಳವೆಬಾವಿಯ ಸುತ್ತ ೨೦ ಅಡಿ ಆಳದವರೆಗೆ ನೆಲ ಅಗೆಸಿ ಕೇಸಿಂಗ್ ಪೈಪ್‌ಗೆ ರಂಧ್ರಗಳನ್ನು ಮಾಡಿ, ಸೋಸುವ ಬಟ್ಟೆ ಸುತ್ತಿ, ಪೈಪ್ ಸುತ್ತ ಕಲ್ಲುಗಳನ್ನು ಹಾಕಿ ಮೇಲ್ಭಾಗದಲ್ಲಿ ಸಣ್ಣ ಕಲ್ಲಿನ ಬೆಂಚ್‌ಗಳನ್ನು ಹರಡಿಸಿ ಮರುಪೂರಣ ಮಾಡುವ ವಿಧಾನ ತೋರಿಸಿದರು.

ನಂತರ ಮಾತನಾಡಿದ ಡಾ.ದೇವರಾಜ ರೆಡ್ಡಿ, ರೈತರು ತಾವು ಹಾಕಿಸಿದ ಬೋರ್‌ನಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಮತ್ತೊಂದು ಬೋರ್ ಕೊರೆಸುವುದು ಸಾಮಾನ್ಯ. ಆದರೆ ಆ ರೀತಿ ಮಾಡುವ ಬದಲು ನೀರು ಕಡಿಮೆಯಾದ ಬೋರ್‌ನ್ನು ಮರುಪೂರಣ ಮಾಡುವುದಕ್ಕೆ ಮುಂದಾಗಬೇಕು. ಮತ್ತೊಂದು ಬೋರ್ ಕೊರೆಸಲು ವ್ಯಯ ಮಾಡುವ ಹಣದ ಬದಲು ಅತ್ಯಲ್ಪ ಹಣದಲ್ಲಿ ಬೋರ್‌ಗೆ ಮರುಪೂರಣ ವ್ಯವಸ್ಥೆ ಮಾಡಿಳ್ಳಬೇಕು. ಇದರಿಂದ ಹಣ ಮತ್ತು ಸಮಯ ಎರಡೂ ಉಳಿಯುತ್ತವೆ. ಬೋರ್‌ಗೆ ಮರುಪೂರಣ ಮಾಡುವುದರಿಂದ ಮಳೆ ಬಂದಾಗ ಭೂಮಿಗೆ ಇಂಗುವ ನೀರು ಬೋರ್‌ನೊಳಗೆ ಹೋಗಿ ಅಂತರ್ಜಲ ಹೆಚ್ಚಳ ಮಾಡುತ್ತದೆ. ಮಳೆಗಾಲದಲ್ಲಿ ಬೋರ್‌ಗಳನ್ನು ಯಾರೂ ಉಪಯೋಗಿಸುವುದಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ನೀರು ಮರು ಪೂರಣವಾಗಿ ಬೋರ್‌ಗಳಲ್ಲಿ ನೀರಿನ ಮಟ್ಟ ಸುಧಾರಣೆಗೆ ಬರುತ್ತದೆ. ಹೊಲದಲ್ಲಿ ಬೋರ್ ಹಾಕಿಸಿಕೊಂಡಿರುವ ರೈತರು ಮರುಪೂರಣ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸುತ್ತಲಿನ ಅನೇಕ ಹಳ್ಳಿಗಳ ನೂರಾರು ರೈತರು ಅಗಮಿಸಿ ಮರುಪೂರಣ ಮಾಡುವ ಕಾರ್ಯವನ್ನು ವೀಕ್ಷಿಸಿ ತಿಳಿದುಕೊಂಡರು. ನಂತರ ಜಲತಜ್ಞರಿಂದ ಅನೇಕ ಮಾಹಿತಿಗಳನ್ನು ಪಡೆದುಕೊಂಡರು. ಇಕ್ರಾ ಸಂಸ್ಥೆಯ ಗಾಯತ್ರಿ, ಬೆಂಗಳೂರು ಭೂಮಿಮಿತ್ರ ಸಾವಯವ ರೈತರ ಒಕ್ಕೂಟದ ಅಧ್ಯಕ್ಷ ಎ.ಕೊಟ್ರಬಸಪ್ಪ, ಸ್ಥಳೀಯರಾದ ದೂಪದಹಳ್ಳಿ ಮಲ್ಲಿಕಾರ್ಜುನ, ಕೆ.ಮಂಜುನಾಥ, ಎಂ.ಕೋಟೆಗೌಡ, ಕೋಗಳಿ ಕೊಟ್ರೇಶ, ಬಿ.ಉಮೇಶ, ಬಿ.ಹರೀಶ, ಸಿ.ಗೀತಮ್ಮ, ಶಿಲ್ಪ, ಚಂದ್ರಮ್ಮ ಸೇರಿ ಅನೇಕರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ