ಕೆರೆಯಲ್ಲಿ ಕೊಳವೆಬಾವಿ: 16 ರೈತರು, ಜೆಸ್ಕಾಂ ಅಧಿಕಾರಿಗಳಿಗೆ ನೋಟಿಸ್‌

KannadaprabhaNewsNetwork |  
Published : Aug 30, 2024, 01:12 AM IST
ಗಜಾಪುರ ಕಂದಾಯ ಗ್ರಾಮಕ್ಕೆ ಸೇರಿದ ಐತಿಹಾಸಿಕ ದೇವಲಾಪುರ ಕೆರೆ ಅತಿಕ್ರಮಣ ಆಗಿರುವ ಬಗ್ಗೆ ವೀಕ್ಷಿಸಲು ಕೂಡ್ಲಿಗಿ ಸಣ್ಣನೀರಾವರಿ ಇಲಾಖೆ ಅಧಿಕಾರಿಗಳು ಸೂಗಪ್ಪ, ಸೆಕ್ಷನ್ ಅಧಿಕಾರಿ ಮೇಡಂ ರಾಜು  ಭೇಟಿ ನೀಡಿ ಪರಿಶೀಲಿಸುತ್ತಿರುವುದು.  | Kannada Prabha

ಸಾರಾಂಶ

ಕೊಳವೆಬಾವಿಗಳ ಮೂಲಕ ಕೆರೆಯ ನೀರು ಪೋಲು ಆಗುತ್ತದೆ.

ಕೂಡ್ಲಿಗಿ: ತಾಲೂಕಿನ ಗಜಾಪುರ ಹತ್ತಿರದ ಐತಿಹಾಸಿಕ ದೇವಲಾಪುರ ಕೆರೆಯನ್ನು ಅತಿಕ್ರಮಣ ಮಾಡಿಕೊಂಡು ಕೊಳವೆಬಾವಿ ಕೊರೆಸಿದ 16 ರೈತರು ಹಾಗೂ ಕೊಳವೆಬಾವಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಅವಕಾಶ ಕೊಟ್ಟ ಜೆಸ್ಕಾಂ ಅಧಿಕಾರಿಗಳಿಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ದೇವಲಾಪುರ ಕೆರೆಯಲ್ಲಿ ಅತಿಕ್ರಮಣದ ಬಗ್ಗೆ ಬೆಳಕು ಚೆಲ್ಲುವಂತೆ ಕನ್ನಡಪ್ರಭ ಆ.23ರಂದು ದೇವಲಾಪುರ ಕೆರೆ ಒತ್ತುವರಿ, ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಎನ್ನುವ ಶೀರ್ಷಿಕೆಯಡಿ ವಿಶೇಷ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಕೂಡ್ಲಿಗಿ ಸಣ್ಣನೀರಾವರಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಸೂಗಪ್ಪ ಮತ್ತು ಸೆಕ್ಷನ್ ಅಧಿಕಾರಿ ಮೇಡಂ ರಾಜು ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

16 ರೈತರಿಗೆ ನೋಟಿಸ್: ಕೆರೆಯಲ್ಲಿ ಕೊಳವೆಬಾವಿ ಕೊರೆಸಿದ 16 ರೈತರಿಗೆ ನೋಟಿಸ್ ನೀಡಿದ್ದಾರೆ. ಜೊತೆಗೆ ಕೆರೆಯಲ್ಲಿ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕವನ್ನು ಯಾವ ಆಧಾರದ ಮೇಲೆ ನೀಡಿದ್ದೀರಿ ಎಂದು ಜೆಸ್ಕಾಂ ಇಲಾಖೆಯ ಅಧಿಕಾರಿಗಳಿಗೂ ನೋಟಿಸ್ ನೀಡಿದ್ದಾರೆ. ಈಗಾಗಲೇ ಕೆರೆಗಳಲ್ಲಿ ಕೊಳವೆಬಾವಿ ಹಾಕಿಸಿದ ರೈತರಿಗೆ ಢವಢವ ಶುರುವಾಗಿದೆ. ಯಾವ ಸಮಯದಲ್ಲಿ ಕಾನೂನು ಕ್ರಮ ಕೈಗೊಂಡು ಕೊಳವೆಬಾವಿಗಳನ್ನು ಮುಚ್ಚುತ್ತಾರೆ ಎಂಬ ಆತಂಕ ಕಾಡುತ್ತಿದೆ.

40 ನಿಷ್ಪ್ರಯೋಜನ ಕೊಳವೆಬಾವಿಯಿಂದ ನೀರು ಪೋಲು:

ದೇವಲಾಪುರ ಕೆರೆಯಲ್ಲಿ 16 ಕೊಳವೆಬಾವಿಗಳು ಇವೆ. ಆದರೆ ಕೆರೆಯಲ್ಲಿ ಕೊಳವೆಬಾವಿ ಕೊರೆಸಿದಾಗ ನೀರು ಬಾರದಿರುವ ನಿರುಪಯುಕ್ತ ಕೊಳವೆಬಾವಿಗಳು ಸಂಖ್ಯೆ ಬರೋಬ್ಬರಿ 40ಕ್ಕೂ ಅಧಿಕ ಎಂಬುದನ್ನು ಸ್ಥಳೀಯ ರೈತರೇ ಹೇಳುತ್ತಾರೆ. ಆ ಕೊಳವೆಬಾವಿಗಳ ಮೂಲಕ ಕೆರೆಯ ನೀರು ಪೋಲು ಆಗುತ್ತದೆ. ಈಗ ಕೆರೆ ತುಂಬಿದ್ದರಿಂದ ಅವುಗಳನ್ನು ಪತ್ತೆ ಹಚ್ಚಲು ಹಾಗೂ ನೀರು ಪೋಲು ಆಗದೇ ಮುಚ್ಚಲು ಸಾಧ್ಯವಿಲ್ಲ. ಕೆರೆಯ ನೀರು ಖಾಲಿಯಾದಾಗ ಈ ಕಾರ್ಯ ಮಾಡಬೇಕಾಗುತ್ತದೆ.

ದೇವಲಾಪುರ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಕೆರೆಯಲ್ಲಿ ಬೋರ್ ವೆಲ್ ಕೊರೆಸಿದ 16 ರೈತರಿಗೆ ಈಗಾಗಲೇ ತೆರವುಗೊಳಿಸುವಂತೆ ನೋಟಿಸ್ ನೀಡಲಾಗಿದೆ. ರೈತರು ಎಚ್ಚೆತ್ತು ಕೆರೆಯಲ್ಲಿ ಕೊಳವೆಬಾವಿಗಳಿಗೆ ಹಾಕಿರುವ ಮೋಟರ್ ತೆಗೆಯದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಕೂಡ್ಲಿಗಿ ಸಣ್ಣ ನೀರಾವರಿ ಇಲಾಖೆಯ ಎಇಇ ಸೂಗಪ್ಪ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ