ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಣ್ಣ ನೀರಾವರಿ ಇಲಾಖೆಯಿಂದ ಹೊಸಹೊಳಲು ಚಿಕ್ಕಕೆರೆ ಅಭಿವೃದ್ಧಿಗೆ ಈ ಹಿಂದಿನ ಬಿಜೆಪಿ ಸರ್ಕಾರ 14 ಕೋಟಿ ರು. ಹಣ ಬಿಡುಗಡೆ ಮಾಡಿತ್ತು. ಆದರೆ, ಕಳಪೆ ಕಾಮಗಾರಿ ಹಿನ್ನೆಯಲ್ಲಿ ಕೆರೆ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಕಾಮಗಾರಿಯೂ ಪೂರ್ಣಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆರೆ ಕೋಡಿ ನೀರು ಕೆರೆ ಕೆಳ ಭಾಗದ ಹೊಸಹೊಳಲಿನ ದೊಡ್ಡಕೆರೆ ಸೇರುತ್ತದೆ. ಚಿಕ್ಕಕೆರೆ ಹೆಚ್ಚುವರಿ ಕೋಡಿ ನೀರು ದೊಡ್ಡಕೆರೆಯನ್ನು ಸುಲಲಿತವಾಗಿ ಸೇರಲು ಅನುಕೂಲವಾಗುವಂತೆ ಸುಮಾರು 80 ಲಕ್ಷ ರು. ವೆಚ್ಚದಲ್ಲಿ ಹೆಚ್ಚುವರಿ ಕಾಮಗಾರಿಗೆ ಅನುಮೋದನೆ ದೊರಕಿದ್ದು, ಚಿಕ್ಕಕೆರೆ ಅಭಿವೃದ್ಧಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರನೇ ಹೆಚ್ಚುವರಿ ಅಭಿವೃದ್ಧಿ ಕಾಮಗಾರಿ ನಿರ್ವಹಿಸುತ್ತಿದ್ದಾನೆ.ಚಿಕ್ಕಕೆರೆಯ ಬಳಿಯಿಂದ ಹೊಸಹೊಳಲಿನ ಕೋಟೆ ಭೈರವೇಶ್ವರ ದೇವಾಲಯಕ್ಕೆ ಹೋಗುವ ರಸ್ತೆ ಮತ್ತು ಅಕ್ಕಪಕ್ಕದ ಜಮೀನುಗಳಿಗೆ ಕೆರೆ ಕೋಡಿ ನೀರಿನಿಂದ ದಕ್ಕೆಯಾಗದಂತೆ ಎರಡೂ ಬದಿಗಳಲ್ಲೂ ವಾಲ್, ಗುಣಮಟ್ಟದ ಸಿಮೆಂಟ್ ಕಾಂಕ್ರೀಟ್ ಹಾಕಿ ಬಾಕ್ಸ್ ಡ್ರೈನೇಜ್ ನಿರ್ಮಿಸಬೇಕು. ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ಗಳು ಸ್ಥಳದಲ್ಲಿದ್ದು ಕಾಮಗಾರಿ ಉಸ್ತುವಾರಿ ನಡೆಸಬೇಕು. ಆದರೆ, ಎಂಜಿನಿಯರುಗಳು ಇತ್ತ ತಲೆಹಾಕಿಲ್ಲ ಎಂದು ಕಿಡಿಕಾರಿದ್ದಾರೆ.
ನೀರಿನೊಳಗೆ ಕಾಂಕ್ರೀಟ್ ಮಾಡುತ್ತಿರುವುದರಿಂದ ಕಾಮಗಾರಿ ಕಳಪೆಯಾಗಿದ್ದು, ತಕ್ಷಣವೇ ಕಾಮಗಾರಿಯನ್ನು ನಿಲ್ಲಿಸಿ ಗುಣಮಟ್ಟದ ಕಾಮಗಾರಿ ಮಾಡಿಸಬೇಕು. ಕ್ಷೇತ್ರದ ಶಾಸಕರು ತಕ್ಷಣವೇ ಗಮನ ಹರಿಸಿ ತಾಲೂಕಿನ ವಿವಿಧೆಡೆ ನಡೆಯುತ್ತಿರುವ ಕಳಪೆ ಕಾಮಗಾರಿಗಳ ವಿರುದ್ಧ ಕ್ರಮ ವಹಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.