ದೆಹಲಿ ಮೆಟ್ರೋದಂತೆ ‘ನಮ್ಮ ಮೆಟ್ರೋ’ ರೈಲಿನಲ್ಲಿ ಮತ್ತೊಮ್ಮೆ ವಿವಾದ ತಲೆದೂರಿದ್ದು, ಚಲಿಸುತ್ತಿದ್ದ ರೈಲಿನಲ್ಲಿ ಯುವ ಜೋಡಿಯೊಂದು ಎಲ್ಲರೆದುರು ತೋರಿದ ಸಲ್ಲಾಪ ವರ್ತನೆಗೆ ಬಹಳಷ್ಟು ಪ್ರಯಾಣಿಕರು, ನೆಟ್ಟಿಗರು ಕೆಂಗಣ್ಣು ಬೀರಿದ್ದರೆ, ಇನ್ನೊಂದಿಷ್ಟು ಜನ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರು : ದೆಹಲಿ ಮೆಟ್ರೋದಂತೆ ‘ನಮ್ಮ ಮೆಟ್ರೋ’ ರೈಲಿನಲ್ಲಿ ಮತ್ತೊಮ್ಮೆ ವಿವಾದ ತಲೆದೂರಿದ್ದು, ಚಲಿಸುತ್ತಿದ್ದ ರೈಲಿನಲ್ಲಿ ಯುವ ಜೋಡಿಯೊಂದು ಎಲ್ಲರೆದುರು ತೋರಿದ ಸಲ್ಲಾಪ ವರ್ತನೆಗೆ ಬಹಳಷ್ಟು ಪ್ರಯಾಣಿಕರು, ನೆಟ್ಟಿಗರು ಕೆಂಗಣ್ಣು ಬೀರಿದ್ದರೆ, ಇನ್ನೊಂದಿಷ್ಟು ಜನ ಸಮರ್ಥಿಸಿಕೊಂಡಿದ್ದಾರೆ.
ಮೆಟ್ರೋದ ಒಳಗೆ ಯುವಕ-ಯುವತಿ ಆಲಂಗಿಸಿಕೊಂಡು ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಹಲವು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ರೈಲಿನಲ್ಲಿ ಇತರರಿಗೆ ಮುಜುಗರ ಆಗದಂತೆ ಎಲ್ಲ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಬಿಎಂಆರ್‌ಸಿಲ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
‘ನಿಧಾನವಾಗಿ ನಮ್ಮ ಮೆಟ್ರೋ ಕೂಡ ದೆಹಲಿ ಮೆಟ್ರೋದ ಹಾದಿ ಹಿಡಿಯುತ್ತಿದೆ. ನಮ್ಮ ಮೆಟ್ರೋದಲ್ಲಿ ಏನಾಗುತ್ತಿದೆ? ಯುವಕನನ್ನು ಅಪ್ಪಿಕೊಂಡಿದ್ದ ಯುವತಿ ಅಕ್ಷರಶಃ ಚುಂಬಿಸುತ್ತಿದ್ದಳು’ ಎಂಬ ಬರಹದೊಂದಿಗೆ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದೆ. ‘ಇದರಲ್ಲಿ ಅಸಭ್ಯ ವರ್ತನೆ ಏನಿದೆ. ಆಲಂಗಿಸಿಕೊಂಡು ನಿಂತಿದ್ದಾರಷ್ಟೇ, ಇನ್ನೇನೂ ಮಾಡಿಲ್ಲ‘ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.
ಈ ವಿಡಿಯೋಗೆ ವ್ಯಾಪಕ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ನಮ್ಮ ಮೆಟ್ರೋದಲ್ಲಿ ಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಎಲ್ಲ ವಯೋಮಾನದವರು ಪ್ರಯಾಣಿಸುತ್ತಾರೆ. ಈ ರೀತಿಯ ನಡವಳಿಕೆ ಸರಿಯಲ್ಲ ಎಂದು ಸಾರ್ವಜನಿಕರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹ : ಕೆಲವು ಪ್ರಯಾಣಿಕರು ಬಿಎಂಆರ್‌ಸಿಎಲ್, ನಮ್ಮ ಮೆಟ್ರೋ ಹಾಗೂ ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕ್ಲಿಪ್ಪಿಂಗ್ ವೈರಲ್ ಆದ ಬಳಿಕ ಬೆಂಗಳೂರು ನಗರ ಪೊಲೀಸರು ಈ ಬಗ್ಗೆ ಕ್ರಮವಹಿಸಲಾಗುವುದು, ಘಟನೆ ಸಂಬಂಧ ಮಾಹಿತಿ ನೀಡಿ ಎಂದು ರೀ ಟ್ವೀಟ್ ಮಾಡಿದ್ದಾರೆ.