ಮೂಲ ಸೌಕರ್ಯ ಕಲ್ಪಿಸದಿದ್ದರೆ ಮತದಾನ ಬಹಿಷ್ಕಾರ: ಸರೋಜ

KannadaprabhaNewsNetwork | Published : Apr 1, 2024 12:50 AM

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ೭೦ಕ್ಕೂ ಅಧಿಕ ಕುಟುಂಬ ೨೫೦ಕ್ಕೂ ಅಧಿಕ ಮತದಾರರು ಮತದಾನವನ್ನು ಬಹಿಷ್ಕರಿಸುತ್ತಿದ್ದು, ಮೂಲ ಸೌಕರ್ಯ ಒದಗಿಸದ ಹೊರತಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ನಿವಾಸಿಗಳು ಎಚ್ಚರಿಕೆ ನೀಡಿದರು.

ಯಲ್ಲಾಪುರ: ಗಂಗಾಧರ ಕಾಲನಿಗೆ ಮೂಲ ಸೌಕರ್ಯ ಕಲ್ಪಿಸದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಗಂಗಾಧರ ಕಾಲನಿಯ ಮಹಿಳಾ ಮುಖಂಡರಾದ ಸರೋಜ ರಂಗು ರಾಠೋಡ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೩೦ಕ್ಕೂ ಅಧಿಕ ವರ್ಷಗಳಿಂದ ಗಂಗಾಧರಪ್ಪ ತೋಟದಲ್ಲಿ ಗುಡಿಸಲು ಮನೆಗಳನ್ನು ಕಟ್ಟಿಕೊಂಡು ಬಡತನದಲ್ಲೇ ಜೀವನ ಸಾಗಿಸುತ್ತಿದ್ದು, ಬದುಕು ಕಟ್ಟಿಕೊಂಡಿದ್ದೇವೆ. ಆದರೂ ವಾಸದ ಜಾಗ ನಮ್ಮದಾಗಲಿಲ್ಲ. ಕನಿಷ್ಠ ವಿದ್ಯುತ್, ಶೌಚಾಲಯದ ವ್ಯವಸ್ಥೆಯನ್ನೂ ಸರ್ಕಾರ ಮಾಡಲಿಲ್ಲ. ಹಿರಿಯ ಮಂತ್ರಿಗಳಿಂದ ಹಿಡಿದು ಸ್ಥಳೀಯ ಅಧಿಕಾರಿಗಳವರೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ನಮ್ಮ ವಾಸಸ್ಥಳ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ್ದು, ಇಲ್ಲಿಗೆ ವಿದ್ಯುತ್ ಸಂಪರ್ಕ ನೀಡಲು ಬರುವುದಿಲ್ಲ. ದಾಖಲೆಗಳು ಬೇಕು ಎಂಬಿತ್ಯಾದಿ ಸಬೂಬನ್ನೇ ಹೇಳುತ್ತಾ ೩೦ ವರ್ಷ ಕಳೆದಿದ್ದಾರೆ. ೨೦೨೦ರ ವರೆಗೆ ತೆರಿಗೆ ಭರಣ ಮಾಡಿದ್ದು, ನಂತರದಲ್ಲಿ ತೆರಿಗೆ ಕಟ್ಟುವುದು ಬೇಡ ಎಂದು ಹೇಳಿದ್ದಾರೆ. ಮನೆ ನಂಬರ್, ವಾಸಸ್ಥಳ ದೃಢೀಕರಣ, ರೇಷನ್ ಕಾರ್ಡ್, ಆಧಾರ ಕಾರ್ಡ್ ಎಂದು ಇಷ್ಟೆಲ್ಲಾ ದಾಖಲೆಗಳಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸ್ಥಳವನ್ನು ಯಲ್ಲಾಪುರದ ಖಾಸಗಿ ವ್ಯಕ್ತಿಯೊಬ್ಬರು ಪಡೆದುಕೊಂಡಿದ್ದು, ವಾಸ ಮಾಡುತ್ತಿರುವ ನಮ್ಮೆಲ್ಲರಿಗೂ ಬೇರೆಡೆ ಸ್ಥಳ ನೀಡುವುದಾಗಿ ಹೇಳಿದ್ದರು. ಅದೂ ಸಹ ಸಾಧ್ಯವಾಗಿಲ್ಲ ಎಂದರು.

ಪ್ರಧಾನಮಂತ್ರಿಗಳ ಆಶಯದಂತೆ ಸ್ವಚ್ಛ ಭಾರತ, ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಘೋಷಣೆಗಳು ಕೇವಲ ಘೋಷಣೆಗಳಾಗಿವೆ. ನಿತ್ಯ ಶೌಚಕ್ಕೆ ಬಯಲು ಪ್ರದೇಶದಲ್ಲೇ ಹೋಗುವ ಪರಿಸ್ಥಿತಿ ಇಲ್ಲಿನ ಮಹಿಳೆಯರದ್ದಾಗಿದೆ. ವಿದ್ಯುತ್ ಸಂಪರ್ಕ ನೀಡದೇ ಕತ್ತಲಲ್ಲೇ ಜೀವನ ದೂಡುತ್ತಾ ಓದಲಾಗದೇ ಬಹಳಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿಗೆ ಪರಿಹಾರ ಬೇಕಿದೆ. ಬಾಯಿಮಾತಿನ ಸಮಾಧಾನದಿಂದ ಯಾವುದೂ ಬಗೆಹರಿದಿಲ್ಲ.

ಸದ್ಯ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ೭೦ಕ್ಕೂ ಅಧಿಕ ಕುಟುಂಬ ೨೫೦ಕ್ಕೂ ಅಧಿಕ ಮತದಾರರು ಮತದಾನವನ್ನು ಬಹಿಷ್ಕರಿಸುತ್ತಿದ್ದು, ಮೂಲ ಸೌಕರ್ಯ ಒದಗಿಸದ ಹೊರತಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಗಂಗಾಧರ ಕಾಲನಿ ದ.ಸಂ. ಸಮಿತಿ ಮಹಿಳಾ ಪ್ರಮುಖರಾದ ಸಂಧ್ಯಾ ಪ್ರಶಾಂತ ಗೋಕಾಕ, ಶೀಲಾ ಸಿದ್ದಿ, ನರಸವ್ವ, ಸ್ಥಳೀಯ ಹಿರಿಯರಾದ ಬಸವರಾಜ ನಾಗಪ್ಪ ಶಿಗ್ಗಾವಿ, ಸಾಮಾಜಿಕ ಕಾರ್ಯಕರ್ತ ಪ್ರಕಾಶ ಕಟ್ಟಿಮನಿ ಉಪಸ್ಥಿತರಿದ್ದರು.

Share this article