ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ನ್ಯಾಯಾಲಯದ ಕಲಾಪ ಬಹಿಷ್ಕಾರ

KannadaprabhaNewsNetwork |  
Published : Aug 15, 2025, 01:00 AM IST
14ಕೆಎಂಎನ್ ಡಿ22 | Kannada Prabha

ಸಾರಾಂಶ

ಧರ್ಮಸ್ಥಳ ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾಗಿ ಅಸಂಖ್ಯಾತ ಭಕ್ತರನ್ನು ಹೊಂದಿದೆ. ಇಂಥ ಕ್ಷೇತ್ರದ ವಿರುದ್ಧ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ವ್ಯಕ್ತಿಗಳ ವಿರುದ್ಧ ಭಕ್ತ ಸಮೂಹ ಹೋರಾಟ ನಡೆಸುವುದು ಅನಿವಾರ್ಯವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಪಟ್ಟಣದ ವಕೀಲರು ಗುರುವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಹಿರಿಯ ವಕೀಲ ಟಿ.ನಾಗರಾಜು ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ವಕೀಲರು ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆಯವರ ಕುಟುಂಬಕ್ಕೆ ಕಳಂಕ ತರಲು ಒಳಸಂಚು ಮತ್ತು ಷಡ್ಯಂತರ ನಡೆಸುತ್ತಿರುವ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಿರ್ಣಯ ಅಂಗೀಕರಿಸಿದರು.

ಶ್ರೀಕ್ಷೇತ್ರದ ಬಗ್ಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅಪಪ್ರಚಾರ ನಡೆಸುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಹಿರಿಯ ವಕೀಲ ಎಚ್.ಮಾದೇಗೌಡ ಮಾತನಾಡಿ, ಧರ್ಮಸ್ಥಳ ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾಗಿ ಅಸಂಖ್ಯಾತ ಭಕ್ತರನ್ನು ಹೊಂದಿದೆ. ಇಂಥ ಕ್ಷೇತ್ರದ ವಿರುದ್ಧ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವ ವ್ಯಕ್ತಿಗಳ ವಿರುದ್ಧ ಭಕ್ತ ಸಮೂಹ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.

ನಂತರ ತಾಲೂಕು ಕಚೇರಿಗೆ ತೆರಳಿದ ವಕೀಲರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹಿರಿಯ ವಕೀಲ ರಾಮಕೃಷ್ಣೇಗೌಡ, ಎಚ್. ವಿ.ಬಾಲರಾಜು,ಎಂ. ಎಂ.ಪ್ರಶಾಂತ್, ಕೆ. ಶಿವಣ್ಣ, ಗಿರೀಶ್,ಎಸ್.ಉಮೇಶ್, ಎ. ಶಿವಣ್ಣ, ಪ್ರಿಯಾಂಕ ಅಪ್ಪು ಗೌಡ, ವಿಲಾಸಿನಿ, ಮುತ್ತುರಾಜ್, ಕದಲೂರು ಯೋಗಾನಂದ, ಸುಮಂತ್, ವಿ.ಎಸ್.ನಾಗರಾಜು ಸೇರಿದಂತೆ ಹಲವು ವಕೀಲರು ಭಾಗವಹಿಸಿದ್ದರು.

ಡಾ.ರಾಜ್ ವಿರುದ್ಧ ಅವಹೇಳನ: ಕಾನೂನು ಕ್ರಮಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ಮಂಡ್ಯ

ವರನಟ ಡಾ.ರಾಜಕುಮಾರ್ ಮತ್ತು ಕುಟುಂಬದವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಮಂಗಳೂರಿನ ವಿನೋದ್ ಶೆಟ್ಟಿ ವಿರುದ್ಧ ಕಾನೂನು ಕ್ರಮ ಕೈಗೊಂಡು, ಸಾಮಾಜಿಕ ಜಾಲತಾಣಗಳ ದುರ್ಬಳಕೆಗೆ ಸರ್ಕಾರ ಕಡಿವಾಣ ಹಾಕುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಡಿ.ಅಶೋಕ್ ಒತ್ತಾಯಿಸಿದರು.

ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವ ಕಿಡಿಗೇಡಿಗಳು ರಾತ್ರೋರಾತ್ರಿ ಪ್ರಚಲಿತಕ್ಕೆ ಬರಲು ಇಲ್ಲಸಲ್ಲದ ರೀತಿ ವಿಕೃತ ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಆತ ಡಾ.ರಾಜ್‌ಕುಮಾರ್ ಅವರನ್ನು ಮಾತ್ರವಲ್ಲದೇ ಹಿರಿಯ ನಟಿಯರಾದ ಲೀಲಾವತಿ, ಬಿ.ಸರೋಜಾದೇವಿ, ಗೀತಾ, ಲಕ್ಷ್ಮೀ ಅವರ ಕುರಿತು ಅವಹೇಳನಾಕಾರಿಯಾಗಿ ಮಾತನಾಡಿದ್ದಾನೆ. ಈ ವಿನೋದ್‌ಶೆಟ್ಟಿ ಸಭಾಪತಿ ಯು.ಟಿ.ಖಾದರ್ ಅವರ ಕ್ಷೇತ್ರದವನೇ ಆಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆತನ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಲಾಗುವುದು ಎಂದರು.

ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಯೋಗಣ್ಣ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಚಿತ್ರರಂಗದ ಆರಾಧ್ಯ ದೈವ ಡಾ.ರಾಜಕುಮಾರ್ ಅವರ ಮೇಲೆ ಈ ರೀತಿಯಾಗಿ ಅವಹೇಳನಾಕಾರಿ ಹೇಳಿಕೆ ನೀಡಿದ ವಿನೋದ್ ಶೆಟ್ಟಿಯನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು.

ಗೋಷ್ಠಿಯಲ್ಲಿ ರವೀಂದ್ರಕುಮಾರ್, ಶ್ರೀನಿವಾಸ್, ದೇವರಾಜು, ಜೆ.ನಾರಾಯಣ, ಕಾರ್ತಿಕ್ ಇದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್