ಕನ್ನಡಪ್ರಭ ವಾರ್ತೆ ಮೈಸೂರು
ನಗರದ ನಂಜರಾಜ ಬಹದ್ದೂರು ಛತ್ರದಲ್ಲಿ ಸಹಜ ಸಮೃದ್ಧ ಮತ್ತು ಭತ್ತ ಉಳಿಸಿ ಆಂದೋಲನ ಆಶ್ರಯದಲ್ಲಿ ಆಯೋಜಿಸಿರುವ 2 ದಿನಗಳ ದೇಸಿ ಅಕ್ಕಿ ಮೇಳವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ನೂರಾರು ವರ್ಷಗಳಿಂದ ರೈತರು ಸ್ಥಳೀಯ ಭತ್ತದ ತಳಿಗಳನ್ನು ಉಳಿಸಿ ಬೆಳೆಸುತ್ತಾ ಬಂದಿದ್ದಾರೆ ಎಂದರು.
ದೇಸಿ ಅಕ್ಕಿಗಳು ನಮ್ಮ ಆಹಾರ ಸಂಸ್ಕೃತಿ- ಸೊಗಡಿನೊಂದಿಗೆ ಬೆಳೆದುಕೊಂಡು ಬಂದಿವೆ. ಈ ತಳಿಗಳನ್ನು ಮುಂದಿನ ಪೀಳಿಗೆಗೂ ನೀಡುವ ಹೊಣೆ ಎಲ್ಲರ ಮೇಲಿದೆ. ಗ್ರಾಹಕರು ಇವುಗಳ ಬಳಕೆ ಮಾಡಿ ಆರೋಗ್ಯ ವೃದ್ದಿ ಮಾಡಿಕೊಳ್ಳಬೇಕು ಎಂದರು.ಔಷಧೀಯ ಅಕ್ಕಿಗಳನ್ನು ಅನಾವರಣ ಮಾಡಿದ ಸಿ.ಎಫ್.ಟಿ.ಆರ್.ಐ ನಿವೃತ್ತ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಮಾತನಾಡಿ, ಸಾಂಪ್ರದಾಯಿಕ ತಳಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಕಪ್ಪು ಮತ್ತು ಕೆಂಪು ಅಕ್ಕಿಗಳಲ್ಲಿ ಔಷಧೀಯ ಗುಣವಿದೆ. ಗ್ರಾಹಕರು ಇವುಗಳ ಬಳಕೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇಸಿ ಭತ್ತ ಬೆಳೆಗಾರರ ಬಳಗದ ಪ್ರೇಮ ಮಾತನಾಡಿ, ಮಳೆ ಆಶ್ರಿತದಲ್ಲಿ ಬೆಳೆಯುವ ದೊಡ್ಯಗ, ನವಿಲು ಸಾಲಿ, ಡಂಬರ ಸಾಳಿ, ಉದುರು ಸಾಲಿ ಮೊದಲಾದ ಕೆಂಪಕ್ಕಿ ತಳಿಗಳು ನಮ್ಮಲ್ಲಿವೆ. ಸ್ಥಳೀಯವಾಗಿ ಬೇಡಿಕೆ ಇಲ್ಲದ ಕಾರಣ ಈ ರುಚಿಕರ ತಳಿಗಳು ಗೋವಾ ಮತ್ತು ಕೇರಳದ ಪಾಲಾಗುತ್ತಿವೆ. ಆರೋಗ್ಯದ ದೃಷ್ಟಿಯಿಂದ ಈ ತಳಿಗಳು ಅಮೂಲ್ಯವಾದವು. ಇವುಗಳನ್ನು ಬಳಸಲು ಗ್ರಾಹಕರು ಮುಂದಾಗಬೇಕು ಎಂದು ಹೇಳಿದರು.
ಪರಿಸರ ಮತ್ತು ಗ್ರಾಹಕರ ಆರೋಗ್ಯಕ್ಕೆ ಅಪಾಯ ತಂದೊಡ್ಡುವ ಕುಲಾಂತರಿ ಭತ್ತದ ತಳಿಗಳನ್ನು ಕೃಷಿಗೆ ತರುವ ಪ್ರಯತ್ನ ನಡೆಯುತ್ತಿದೆ. ಕುಲಾಂತರಿ ಭತ್ತದ ತಳಿಗಳು ರೈತರ ಹೊಲಕ್ಕೆ ಬರದಂತೆ ಗ್ರಾಹಕರು ಮತ್ತು ರೈತರು ಎಚ್ಚರವಹಿಸಬೇಕು ಎಂದು ಕರೆ ನೀಡಿದರು.
ಭತ್ತ ಉಳಿಸಿ ಆಂದೋಲನದ ಸಂಚಾಲಕ ಸಿ.ಶಾಂತಕುಮಾರ್ ಇದ್ದರು.ದೇಸಿ ಅಕ್ಕಿ, ಭತ್ತಗಳ ಪ್ರದರ್ಶನ
ರಾಜ್ಯದ ವಿವಿಧ ಭಾಗಗಳ ಭತ್ತ ಸಂರಕ್ಷಕರು ತಾವು ಬೆಳೆದ ದೇಸಿ ಅಕ್ಕಿಗಳ ನೇರ ಮಾರಾಟ ಮಾಡುತ್ತಿದ್ದಾರೆ. ರಾಜಮುಡಿ, ಬರ್ಮಾ ಬ್ಲಾಕ್, ಸಿದ್ದ ಸಣ್ಣ, ರತ್ನಚೂಡಿ, ನವರ, ಗೋವಿಂದ ಭೋಗ್ , ಎಚ್ಎಂಟಿ, ಸಿಂಧೂರ ಮಧುಸಾಲೆ ಮೊದಲಾದ ಜನಪ್ರಿಯ ದೇಸಿ ಭತ್ತಗಳ ಬೀಜ ಕೂಡ ಕೊಳ್ಳಬಹುದು.
ಅಸ್ಸಾಂನಿಂದ ಬಂದಿರುವ ಕೋಮಲ್ ಚಾವಲ್ ಅಕ್ಕಿಯ ಅನ್ನ ಮಾಡಲು ಸ್ಟೌವ್ ಹೊತ್ತಿಸಬೇಕಿಲ್ಲ; ಉಗುರು ಬೆಚ್ಚಗಿನ ಅಥಾವ ಕುದಿ ನೀರು ಸಾಕು. ಅದರಲ್ಲಿ ಅಕ್ಕಿ ನೆನೆಸಿಟ್ಟರೆ ಹತ್ತು ನಿಮಿಷದಲ್ಲಿ ಅನ್ನ ಸಿದ್ಧ. ಮ್ಯಾಜಿಕ್ ರೈಸ್ ಎಂದು ಕರೆಯುವ ಈ ಅಕ್ಕಿಯನ್ನು ನೋಡಲು ಜನ ಮುಗಿಬಿದ್ದರು.
ತಮಿಳುನಾಡಿನ ರೈತರು ಮಾಪಿಳ್ಳೆ ಸಾಂಬ ಎಂಬ ಔಷಧೀಯ ಭತ್ತವನ್ನು ಮಾರಾಟಕ್ಕೆ ತಂದಿದ್ದಾರೆ. ಮದುಮಗ ತಿನ್ನುವ ಈ ಅಕ್ಕಿಯ ನಿರಂತರ ಬಳಕೆಯಿಂದ ಕಲ್ಲು ಗುಂಡು ಎತ್ತುವಷ್ಟು ಶಕ್ತಿ ಬರುತ್ತದಂತೆ.