ಅಕ್ಟೋಬರಲ್ಲಿ ಬಿಪಿಎಲ್ ವಿತರಣೆ: ಮುನಿಯಪ್ಪ

KannadaprabhaNewsNetwork |  
Published : Sep 27, 2025, 12:00 AM IST
ಬಿಪಿಎಲ್‌ ಕಾರ್ಡ್‌ | Kannada Prabha

ಸಾರಾಂಶ

ಪ್ರಸ್ತುತ ಸ್ಥಗಿತಗೊಂಡಿರುವ ಹೊಸ ಬಿಪಿಎಲ್ ಕಾರ್ಡುಗಳಿಗೆ ಅರ್ಜಿ ಸ್ವೀಕಾರ ಮತ್ತು ಕಾರ್ಡು ವಿತರಣೆ ಪ್ರಕ್ರಿಯೆಯನ್ನು ತಿಂಗಳೊಳಗೆ ಆರಂಭಿಸಲಾಗುತ್ತದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಪ್ರಸ್ತುತ ಸ್ಥಗಿತಗೊಂಡಿರುವ ಹೊಸ ಬಿಪಿಎಲ್ ಕಾರ್ಡುಗಳಿಗೆ ಅರ್ಜಿ ಸ್ವೀಕಾರ ಮತ್ತು ಕಾರ್ಡು ವಿತರಣೆ ಪ್ರಕ್ರಿಯೆಯನ್ನು ತಿಂಗಳೊಳಗೆ ಆರಂಭಿಸಲಾಗುತ್ತದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೇಂದ್ರ ಸರ್ಕಾರ ರಾಜ್ಯದಲ್ಲಿ 7,70,000 ಅನರ್ಹ ಕಾರ್ಡುಗಳಿವೆ ಎಂದು ಹೇಳಿದೆ. ಈಗಾಗಲೇ ರಾಜ್ಯದಲ್ಲಿ 13 ಲಕ್ಷ ಅನರ್ಹ ಕಾರ್ಡುಗಳನ್ನು ಹುಡುಕಿ, ಅನರ್ಹ ಪಟ್ಟಿ ಸಿದ್ಧಪಡಿಸಿದ್ದೇವೆ. ಇನ್ನೂ ಅನರ್ಹ ಬಿಪಿಎಲ್ ಕಾರ್ಡುದಾರರಿದ್ದರೆ ತಾವೇ ಮುಂದೆ ಬಂದು ತಮ್ಮ ಕಾರ್ಡುಗಳನ್ನು ಎಪಿಎಲ್ ಮಾಡಿಸಬೇಕು. ಇದರಿಂದ ಅರ್ಹ ಬಿಪಿಎಲ್ ಫಲಾನುಭವಿಗಳಿಗೆ ಸಹಾಯವಾಗುತ್ತದೆ ಎಂದು ಕರೆ ನೀಡಿದರು.

ನಮ್ಮದು ಪ್ರಗತಿಪರ ರಾಜ್ಯ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ನಮಗಿಂತ ಕೆಳಗಿರುವ ಮಹಾರಾಷ್ಟ್ರ, ತೆಲಂಗಾಣಗಳಲ್ಲಿ ಶೇ50ಕ್ಕಿಂತ ಕಡಿಮೆ ಬಿಪಿಎಲ್ ಪಡಿತರ ಕಾರ್ಡುಗಳಿವೆ. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ಶೇ. 75ಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡುದಾರರಿದ್ದಾರೆ. ಆದ್ದರಿಂದ ಈ ಕಾರ್ಡುಗಳ ಅರ್ಹತೆ, ಅನರ್ಹತೆಯ ಪರಿಶೀಲನೆಯಾಗಲೇಬೇಕಾಗಿದೆ ಎಂದು ತಿಳಿಸಿದರು.

ಈ ಪರಿಷ್ಕರಣೆ ಸಂದರ್ಭದಲ್ಲಿ ಯಾವುದೇ ಅರ್ಹ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅಕಸ್ಮಾತ್ ಅರ್ಹ ಬಿಪಿಎಲ್ ಕಾರ್ಡ್ ಅನರ್ಹಗೊಂಡರೆ, ಅಂತವರು ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿ 3 ದಿನಗಳೊಳಗೆ ಬಿಪಿಎಲ್ ಕಾರ್ಡ್ ಮರಳಿ ಪಡೆಯಬಹುದಾಗಿದೆ ಎಂದರು.

ಸ್ವಂತ ಮನೆ, ಜಮೀನು ಇರುವವರು ಬಿಪಿಎಲ್ ಹೇಗಾಗ್ತಾರೆ?:

ಸರ್ಕಾರಿ ವಸತಿ ಯೋಜನೆಯಡಿ ಕಟ್ಟಿದ ಮನೆಯಾದರೆ ಓಕೆ. ಆದರೆ, ಐದಾರು ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿ ಸ್ವಂತ ಮನೆ ಕಟ್ಟುವವರು ಆರ್ಥಿಕವಾಗಿ ಚೆನ್ನಾಗಿರ್ತಾರೆ. ಅವರಿಗೂ ಬಿಪಿಎಲ್ ಕಾರ್ಡು ಬೇಕಾ? ಸ್ವಂತ ಮನೆ ಕಟ್ಟುವ ಶಕ್ತಿ ಇರುವವನು ಬಿಪಿಎಲ್ ವ್ಯಾಪ್ತಿಗೆ ಬರ್ತಾನಾ?. ಮನೆ ಕಟ್ಟುವಾಗ ಆದಾಯ ತೆರಿಗೆ ಸಲ್ಲಿಸಿದವರಿಗೆ ಬಿಪಿಎಲ್‌ ಕಾರ್ಡು ಬೇಕಾ?. ಏಳೆಂಟು ಎಕರೆ ಜಮೀನು ಇರುವವರಿಗೂ ಬಿಪಿಎಲ್‌ ಕಾರ್ಡು ಬೇಕಾ? ಎಂದು ಸಚಿವರು ಪ್ರಶ್ನಿಸಿದರು.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ