ಶ್ರೀಗುರುನಿರ್ವಾಣಸ್ವಾಮಿ ಮಠದ ಬ್ರಹ್ಮರಥೋತ್ಸವ

KannadaprabhaNewsNetwork |  
Published : Apr 03, 2024, 01:32 AM IST
ಚಿಕ್ಕಮಗಳೂರು ಸಮೀಪದಲ್ಲಿರುವ  ಶ್ರೀ ಗುರು ನಿರ್ವಾಣಸ್ವಾಮಿ ಮಠದ ಶ್ರೀ ಮಲ್ಲೇಶ್ವರಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು. | Kannada Prabha

ಸಾರಾಂಶ

ಚಿಕ್ಕಮಗಳೂರು ಸಮೀಪದಲ್ಲಿರುವ ಶ್ರೀ ಗುರು ನಿರ್ವಾಣಸ್ವಾಮಿ ಮಠದ ಶ್ರೀ ಮಲ್ಲೇಶ್ವರಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ತೆಚಿಕ್ಕಮಗಳೂರು

ಚಂದ್ರದ್ರೋಣ ಪರ್ವತ ತಪ್ಪಲಿನ ಹಸಿರು ವನ ಸಿರಿಯ ನಡುವೆ ಶ್ರೀಗುರು ನಿರ್ವಾಣಸ್ವಾಮಿ ಮಠದ ಶ್ರೀ ಮಲ್ಲೇಶ್ವರಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು.

ಕೈಮರ ಸಮೀಪದ ಹೊಸಹಳ್ಳಿ ಶ್ರೀಗುರು ನಿರ್ವಾಣ ಸ್ವಾಮಿಗಳವರ ಮಠದಲ್ಲಿ ಶುಭಕೃತ್ ನಾಮಸಂತ್ಸರದ ಫಾಲ್ಗುಣ ಬಹುಳ ಸಪ್ತಮಿ ಸೋಮವಾರ ಪೂರ್ವಾಹ್ನ ಶ್ರೀಸ್ವಾಮಿಯ ಬ್ರಹ್ಮ ರಥೋತ್ಸವ, ರಾತ್ರಿ ಮಹಾರಥೋತ್ಸವ, ಮಂಗಳವಾರ ತೇರು ಸಾಂಪ್ರದಾಯಕವಾಗಿ ನೆರವೇರಿತು.

ಮಂಗಳವಾದ್ಯ, ದೀವಟಿಕೆ ಸೇವೆ, ಛತ್ರ್ರಿ ಚಾಮರಗಳ ಗೌರವದೊಂದಿಗೆ ಗರ್ಭಗುಡಿಯ ಶ್ರೀ ಮಲ್ಲೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ವಿಶೇಷ ಪೂಜಾದಿ ಅಭಿಷೇಕಗಳ ನಂತರ ಮಧ್ಯಾಹ್ನ ನೆಡಮುಡಿಯೊಂದಿಗೆ ದೊಡ್ಡ ರಥದಲ್ಲಿ ಪ್ರತಿಷ್ಠಾಪಿಸಿ ಸೋಮವಾರ ಪೂರ್ವಾಹ್ನ ಬ್ರಹ್ಮರಥೋತ್ಸವ ಭಕ್ತಾದಿಗಳ ಜಯಘೋಷದೊಂದಿಗೆ ಪ್ರಾರಂಭವಾಯಿತು. ಸ್ವಲ್ಪ ದೂರ ಕ್ರಮಿಸಿದ ನಂತರ ರಥದೊಳಗಿನ ಸ್ವಾಮಿಗೆ ಭಕ್ತಾದಿಗಳ ಹಣ್ಣು ಕಾಯಿ ಸಮರ್ಪಣೆ ಸೇವೆ ನೆರವೇರಿತು.

ರಾತ್ರಿ ರಥವನ್ನು ಮಠದ ಒಂದುಸುತ್ತು ಭಕ್ತಿಪೂರ್ವಕವಾಗಿ ಎಳೆದುತಂದು ಸಂಪಿಗೆಕಟ್ಟೆಯ ಬಳಿ ನಿಲ್ಲಿಸಲಾಯಿತು. ಪೂಜೆಯ ನಂತರ ಮಠದ ಸುತ್ತಲಿನ ಐದೂರಿನ ಗ್ರಾಮಸ್ಥರು ವಿಶೇಷ ಉಪಮೆಗಳೊಂದಿಗೆ ಸ್ವಾಮಿಯ ಪವಾಡವನ್ನು ಕೊಂಡಾಡುತ್ತಾ ಕುಣಿದು ಕುಪ್ಪಳಿಸಿದರು. ಹಳ್ಳಿ ವಾದ್ಯದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸುಗ್ಗಿ ಕುಣಿತದ ಹಾಡುಗಳೊಂದಿಗೆ ತಡರಾತ್ರಿಯವರೆಗೂ ಕುಣಿದು ಭಕ್ತಿಸೇವೆ ಸಮರ್ಪಿಸಿದರು. ಮಂಗಳವಾರ ಬೆಳಗಿನ ಜಾವ ದೊಡ್ಡತೇರನ್ನು ಮಠದ ಸುತ್ತ ಸುತ್ತಿಸಿ ಉತ್ಸವಮೂರ್ತಿಯನ್ನು ಗರ್ಭಗುಡಿ ಒಳಗಿರಿಸಲಾಯಿತು. ರಾತ್ರಿಪೂರ್ತಿ ಜಾತ್ರಾಸಂಭ್ರಮಕ್ಕೆ ನಾಡಿನ ವಿವಿಧಡೆಯಿಂದ ಆಗಮಿಸಿದ ಭಕ್ತರು ಸಾಕ್ಷಿಯಾದರು.

ಶ್ರೀ ಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಕಾರ್‍ಯದರ್ಶಿ ಎನ್.ಎಂ.ಅಜಯ್ ನೇತೃತ್ವದಲ್ಲಿ ಘಳಿಗೆ ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು. ಶ್ರೀಮತಿ ಉಮಾ ಹಾಗೂ ಅಶ್ವಿನಿ ನೇತೃತ್ವದಲ್ಲಿ ಸುಮಂಗಲಿಯರು ಸ್ವಾಮಿಗೆ ಆರತಿ ಮಾಡಿದರು. ಶ್ರೀಮಠದ ಧರ್ಮಕರ್ತ ಎನ್.ಮಹೇಶ್ ತೆಂಗಿನಕಾಯಿ ಒಡೆಯುವ ಮೂಲಕ ಘಳಿಗೆ ತೇರು ಉತ್ಸವಕ್ಕೆ ಚಾಲನೆ ನೀಡಲಾಯಿತು.

ಹೂ, ಬಾಳೆಹಣ್ಣು ಸಮರ್ಪಿಸಿ ಭಕ್ತಿ ಗೌರವದೊಂದಿಗೆ ಶ್ರೀಮಠದ ಹೊರ ಆವರಣದಲ್ಲಿ ಎರಡು ಸುತ್ತು ಬಂದು ರಥೋತ್ಸವ ಪೂರ್ಣಗೊಳಿಸಲಾಯಿತು. ಶ್ರೀಸ್ವಾಮಿಗೆ ಮಂಗಳಾರತಿ ನೆರವೇರಿಸಿ ಗರ್ಭಗುಡಿಯೊಳಗೆ ಉತ್ಸವ ಮೂರ್ತಿಯನ್ನು ಇರಿಸಿ ವಿಶೇಷ ಪೂಜಾದಿಗಳ ನಂತರ ಭಕ್ತಾದಿಗಳಿಗೆ ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ, ರಾಗಿರಬ್ಬಳ್ಳಿಗೆ, ಅನ್ನ ಸಂಬಾರ್, ಮೊಸರಿನ ಸಂತರ್ಪಣೆ ನಡೆಸಲಾಯಿತು. ಆ ನಂತರ ಶ್ರೀಗುರುನಿರ್ವಾಣಸ್ವಾಮಿ ಗದ್ದುಗೆಪೂಜೆ ನೆರವೇರಿಸಿ ದೂಳತ ಪ್ರಸಾದ ವಿತರಿಸಲಾಯಿತು.

ಹೊಸಹಳ್ಳಿ, ತೋಟದಹಳ್ಳಿ, ಹಿತ್ತಲಮಕ್ಕಿ, ಪುಟ್ಟೇನಹಳ್ಳಿ ಮತ್ತು ಮಾವಿನಹಳ್ಳಿ ಒಳಗೊಂಡ ಐದೂರಿನ ಗ್ರಾಮಸ್ಥರು ರಥೋತ್ಸವ ಕಾರ್‍ಯದಲ್ಲಿ ಪಾಲ್ಗೊಳ್ಳುವ ಮೂಲಕ ಸಾಮರಸ್ಯದ ಸಂದೇಶ ಸಾರಲಾಯಿತು.

ಪಲ್ಲಕ್ಕಿ ಉತ್ಸವ:

ಶ್ರೀ ಸ್ವಾಮಿಯ ಪಲ್ಲಕ್ಕಿ ಉತ್ಸವ ಏ.9 ರಂದು ಹಗಲು ಮತ್ತು ರಾತ್ರಿ ನೆರವೇರಲಿದೆ. ಮರು ದಿನವೂ ಪಲ್ಲಕ್ಕಿ ಉತ್ಸವಾದಿಗಳ ನಂತರ ಸಂತರ್ಪಣೆಯೊಂದಿಗೆ ಶ್ರೀ ಗುರುನಿರ್ವಾಣ ಸ್ವಾಮಿಗಳವರ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಶ್ರೀಮಠದ ಧರ್ಮದರ್ಶಿ ಎನ್.ಮಹೇಶ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!