ಕನ್ನಡಪ್ರಭ ವಾರ್ತೆ ಮಡಿಕೇರಿ
ಜಾತಿ, ದ್ವೇಷದ ಗೋಡೆ ಒಡೆದು ಎಲ್ಲರಲ್ಲಿ ಭ್ರಾತೃತ್ವ ಮತ್ತು ಸಮಾನತೆಯ ಪರಿಕಲ್ಪನೆ ಬಿತ್ತಿದ ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳ ಜೀವನ ಮತ್ತು ಹೋರಾಟ ಆದರ್ಶ ಪೂರ್ಣವಾದದ್ದು, ಎಲ್ಲರಲ್ಲೂ ಮಾನವೀಯತೆಯ ಸದಾಶಯ ಬೆಳೆಸುವಲ್ಲಿ ಗುರುವಿನ ಪಾತ್ರ ಮಹತ್ವದ್ದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಹೇಳಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಓಂಕಾರ ಸದನ ಸಭಾಂಗಣದಲ್ಲಿ ನಡೆದ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
1856 ರಲ್ಲಿ ತಿರುವನಂತಪುರದ ಚೆಂಬಲಾಂತಿ ಎಂಬ ಹಳ್ಳಿಯಲ್ಲಿ ಕೆಳವರ್ಗದ ಮಧ್ಯಮ ಕುಟುಂಬದ ಈಳವ ಜಾತಿಯಲ್ಲಿ, ವಯಲ್‌ವರಂ ಮನೆಯ ಮಾದನ್ ಆಶಾನ್ ಮತ್ತು ಕುಟ್ಟಿಯಮ್ಮ ಎಂಬ ದಂಪತಿ ನಾಲ್ಕನೇ ಮಗನಾಗಿ ಜನಿಸಿದರು. ಶಂಕರಾಚಾರ್ಯರ ಅದ್ವೈತದ ಸಾರದಲ್ಲಿ ತಮ್ಮ ದಾರ್ಶನಿಕತೆ ಪ್ರತಿಪಾದಿಸಿದ ನಾರಾಯಣ ಗುರುಗಳು, ಎಲ್ಲರನ್ನೂ ಒಂದಾಗಿ ಕಂಡರು. ಇರುವವನು ಒಬ್ಬನೇ ಪರಮಾತ್ಮ, ಒಂದೇ ತತ್ವ, ಒಂದೇ ಸತ್ಯ. ಎಲ್ಲವೂ ಒಂದೇ ಅಂದಮೇಲೆ ಭೇದ-ಭಾವವಿಲ್ಲ, ಮೇಲು ಕೀಳಿಲ್ಲ. ಎಲ್ಲರಲ್ಲಿರುವ ಪರಮಾತ್ಮ ಒಬ್ಬನೇ ಅಂದಮೇಲೆ, ಅಲ್ಲಿ ಮೇಲು ಕೀಳೆಂಬ ಮಾತೆಲ್ಲಿ ಎಂದು ಪ್ರಶ್ನಿಸಿದವರು ನಾರಾಯಣ ಗುರುಗಳು ಎಂದು ಲೋಕೇಶ್ ಸಾಗರ್ ವಿವರಿಸಿದರು.ಅಸ್ಪೃಶ್ಯತೆ ಎಂಬ ರೋಗ ರ್ಮೂಲನೆ ಮಾಡಲು ನಾರಾಯಣಗುರುಗಳ ಪ್ರಯತ್ನ ಅವಿರತ. ಇದಕ್ಕಾಗಿ ಇವರು ಕಂಡುಕೊಂಡ ಮಾರ್ಗ ‘ಧರ್ಮ’. ರಾಜಕೀಯ ನಂಟಿನೊಂದಿಗೆ ಅರ್ಥಹೀನವಾಗಿರುವ ಧರ್ಮ ಎಂಬ ಪದವು, ನಾರಾಯಣ ಗುರುಗಳ ಆಧ್ಯಾತ್ಮದೊಂದಿಗೆ ಸೇರಿಕೊಂಡಾಗ ಅರ್ಥಗರ್ಭಿತ ಎಂದೆನಿಸಿಕೊಳ್ಳುತ್ತದೆ. ಸಮಾಜದಲ್ಲಿ ಮೇಲು-ಕೀಳುಗಳೆಂಬ ಕಷ್ಟಕೋಟೆಗಳು ದಮನಿತರನ್ನು ಶೋಷಣೆ ಮಾಡುತ್ತಿದ್ದಾಗ ದೇವರಂತೆ ಬಂದವರು ಶ್ರೀ ನಾರಾಯಣ ಗುರುಗಳು ಎಂದು ನುಡಿದರು.
ಕರಾವಳಿ ಭಾಗದ ಬಿಲ್ಲವರಿಗೆ ನಾರಾಯಣ ಗುರುಗಳು ಇಂದಿಗೂ ಆರಾಧ್ಯ ದೈವ. ನಾರಾಯಣ ಗುರುಗಳ ಪ್ರಭಾವ ಕರಾವಳಿಯಲ್ಲಿ ಆಯಿತು. ಈಗ ಗಲ್ಲಿ ಗಲ್ಲಿಯಲ್ಲೂ, ಜಾತಿ ಧರ್ಮ ಮೀರಿ ಗುರುಗಳನ್ನು ಆರಾಧಿಸಲಾಗುತ್ತಿದೆ. ಇದು ಇವರ ಸಾಮಾಜಿಕ ಚಿಂತನೆಗೆ ಸಿಕ್ಕ ಮನ್ನಣೆ ಮತ್ತು ಗೌರವ ಎಂದು ವಿವರಿಸಿದರು.ಜನರಲ್ಲಿ ಸ್ವಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಣಕ್ಕೆ ಮಹತ್ವ ನೀಡಿದ ಗುರುಗಳು, ನೂರಾರು ಸಾವಿರಾರು ಜನರಿಗೆ ಶಿಕ್ಷಣ ಕೊಡಿಸಿದರು. ಎಲ್ಲ ವರ್ಗದ ಜನರು ಒಟ್ಟಿಗೆ ಕಲಿಯಬೇಕು ಎಂದು ಪ್ರೇರೇಪಿಸಿದರು. ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದರು. ಸೇವಾ ಟ್ರಸ್ಟ್, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳನ್ನು ತೆರೆದರು. ದೇವಸ್ಥಾನಗಳಿಗೂ ಎಲ್ಲಾ ಜಾತಿ ಹಾಗೂ ವರ್ಗದ ಜನರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಿದರು. ಅಂದರೆ ಜಾತಿ ಧರ್ಮವನ್ನು ಬದಿಗಿಟ್ಟು, ಗುರುಗಳು ಎಲ್ಲರನ್ನೂ ಒಂದಾಗಿ ಕಂಡರು. ಆ ಮೂಲಕ ಜನರು ಕೂಡಾ ಎಲ್ಲರನ್ನು ಒಂದಾಗಿ ಕಾಣುವಂತೆ ಸ್ಫೂರ್ತಿ ತುಂಬಿದರು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಬಿಲ್ಲವ ಸಮಾಜದ ಅಧ್ಯಕ್ಷರಾದ ರಘು ಆನಂದ, ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳು ಯಾವುದೇ ಸಮುದಾಯಕ್ಕೆ ಮೀಸಲಿರದೆ ವಿಶ್ವಕ್ಕೆ ಹಿಂದೂ ಸಮಾಜದ ಸಂದೇಶ ಸಾರಿದವರು. ಕೆಳವರ್ಗದ ಸಮುದಾಯದ ಜನಾಂಗದ ಪ್ರಧಾನ ಸ್ಥಾನ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.ಟಿ.ಕೆ.ಪಾಂಡುರಂಗ, ಬಾಲಕೃಷ್ಣ, ಲೀಲಾವತಿ, ಆನಂದ ಬಾಲಕೃಷ್ಣ, ಮದೆ ಮೋಹನ್ ಇದ್ದರು. ವಿದ್ವಾನ್ ಬಿ.ಸಿ.ಶಂಕರಯ್ಯ ಅವರು ನಾಡಗೀತೆ ಹಾಡಿದರು. ಕನ್ನಡ ಮತ್ತ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಅವರು ಸ್ವಾಗತಿಸಿದರು. ಮಣಜೂರು ಮಂಜುನಾಥ ನಿರೂಪಿಸಿ, ವಂದಿಸಿದರು.