ಬ್ರಹ್ಮಾವರ: ಯಕ್ಷಗಾನ ಕಲಾರಂಗದ ೭೩ನೇ ಮನೆ ಹಸ್ತಾಂತರ

KannadaprabhaNewsNetwork |  
Published : Jun 02, 2025, 12:59 AM IST
30,ಮನೆ | Kannada Prabha

ಸಾರಾಂಶ

ಮಂದಾರ್ತಿ ಮೇಳದ ಕಲಾವಿದರಾದ ಸುರೇಶ್ ಆಚಾರ್ಯ ಅವರಿಗೆ ಬ್ರಹ್ಮಾವರ ತಾಲೂಕಿನ ಪೇತ್ರಿಯ ಕನ್ನಾರಿನಲ್ಲಿ ಮಂದಾರ್ತಿ ಕೃಷ್ಣ ಅಡಿಗರ ಸ್ಮರಣೆಯಲ್ಲಿ ಹೆಬ್ರಿಯ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ೬.೫೦ ಲಕ್ಷ ರು. ವೆಚ್ಚದಲ್ಲಿ, ಕೇವಲ ೪೦ ದಿನಗಳಲ್ಲಿ ನಿರ್ಮಿಸಿದ ‘ಶಾರದಾಕೃಷ್ಣ’ ಮನೆಯನ್ನು ಇತ್ತೀಚೆಗೆ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ಮಂದಾರ್ತಿ ಮೇಳದ ಕಲಾವಿದರಾದ ಸುರೇಶ್ ಆಚಾರ್ಯ ಅವರಿಗೆ ಬ್ರಹ್ಮಾವರ ತಾಲೂಕಿನ ಪೇತ್ರಿಯ ಕನ್ನಾರಿನಲ್ಲಿ ಮಂದಾರ್ತಿ ಕೃಷ್ಣ ಅಡಿಗರ ಸ್ಮರಣೆಯಲ್ಲಿ ಹೆಬ್ರಿಯ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ೬.೫೦ ಲಕ್ಷ ರು. ವೆಚ್ಚದಲ್ಲಿ, ಕೇವಲ ೪೦ ದಿನಗಳಲ್ಲಿ ನಿರ್ಮಿಸಿದ ‘ಶಾರದಾಕೃಷ್ಣ’ ಮನೆಯನ್ನು ಇತ್ತೀಚೆಗೆ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿದರು.ನಂತರ ಸಂದೇಶ ನೀಡಿದ ಶ್ರೀಗಳು, ಎಲ್ಲವೂ ಕೃಷ್ಣ ಸಂಕಲ್ಪ, ಬಿರುಗಾಳಿ ಸುರೇಶ ಆಚಾರ್ಯರ ಮನೆಯನ್ನು ಹಾರಿಸಿತು. ಇದು ಅವರಿಗೆ ಅನುಕೂಲವೇ ಆಯಿತು. ಭಾರ್ಗವಿ ಮತ್ತು ರಾಮಚಂದ್ರ ಐತಾಳ ದಂಪತಿ ದಾನಿಗಳಾಗಿ ದೊರೆತರು. ದಾನಿಗಳನ್ನೂ ಫಲಾನುಭವಿಗಳನ್ನೂ ಜೋಡಿಸುವ ಕೆಲಸವನ್ನು ಯಕ್ಷಗಾನ ಕಲಾರಂಗ ಬಹಳ ಚೆನ್ನಾಗಿ ನಿರ್ವಹಿಸುತ್ತಾ ಬಂದಿದೆ. ಮೌನವಾಗಿ ಸಮಾಜದಲ್ಲಿ ಅವರು ಮಾಡುತ್ತಿರುವ ಕಾರ್ಯ ಅನನ್ಯ ಎಂದು ಅನುಗ್ರಹಿಸಿದರು.ದಾನಿಗಳಾದ ಡಾ. ಭಾರ್ಗವಿ ಆರ್. ಐತಾಳ ಮಾತನಾಡಿ, ನನಗೆ ತಂದೆ ಕೃಷ್ಣ ಅಡಿಗರೇ ಆದರ್ಶ. ದಾನ ಗುಣಕ್ಕೆ ಅವರ ಮಾತೇ ಪ್ರೇರಣೆ. ಸಂಸ್ಥೆಯ ವಾರ್ಷಿಕ ಸಂಚಿಕೆ ‘ಕಲಾಂತರಂಗ’ ಓದಿ ಕಲಾರಂಗ ಮಾಡುತ್ತಿರುವ ಸಾಮಾಜಿಕ ಕಾರ್ಯದ ಪರಿಚಯವಾಯಿತು. ತಂದೆಯ ಹೆಸರಿನಲ್ಲಿ ಮನೆ ನಿರ್ಮಿಸಿ ಕೊಡಬೇಕೆಂಬ ಕನಸನ್ನು ನನಸು ಮಾಡಿದ್ದಕ್ಕೆ ಸಂಸ್ಥೆಗೆ ನಾವು ಕೃತಜ್ಞರಾಗಿದ್ದೇವೆ ಎಂದರು.ಈ ದಿನ ನನ್ನ ಬದುಕಿನ ಸಾರ್ಥಕ ಕ್ಷಣ ಎಂದು ಸುರೇಶ್ ಆಚಾರ್ಯರು ಭಾವುಕರಾದರು. ಕಲಾವಿದ ಸುಮಂತ ಆಚಾರ್ಯ ಈ ಸಂದರ್ಭದಲ್ಲಿ ದಾನಿಗಳನ್ನು ಹಾಗೂ ಸಂಸ್ಥೆಯನ್ನು ಅಭಿನಂದಿಸಿದರು.

ಅಭ್ಯಾಗತ ವೈಕುಂಠ ಹೇರ್ಳೆ, ಸೂರ್ಯನಾರಾಯಣ ಅಡಿಗ, ಕಲಾವಿದ ಗಣೇಶ ಬೈಕಾಡಿ ಉಪಸ್ಥಿತರಿದ್ದರು. ಟ್ರಸ್ಟಿನ ಸದಸ್ಯರು, ಕಲಾರಂಗದ ಪ್ರಮುಖರು ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ