ಸ್ವಾಸ್ಥ್ಯ ಜೀವನಕ್ಕೆ ಮೆದುಳಿನ ಆರೋಗ್ಯ ಅತಿಮುಖ್ಯ: ಡಾ.ಎಸ್.ಚಿದಂಬರ

KannadaprabhaNewsNetwork | Published : Jul 23, 2024 12:37 AM

ಸಾರಾಂಶ

ನಿತ್ಯದ ಸ್ವಾಸ್ಥ್ಯ ಜೀವನಕ್ಕೆ ಮೆದುಳಿನ ಆರೋಗ್ಯವು ಪ್ರತಿಯೊಬ್ಬರಿಗೂ ಅತಿಮುಖ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಚಿದಂಬರ ತಿಳಿಸಿದರು. ಚಾಮರಾಜನಗರದಲ್ಲಿ ‘ವಿಶ್ವ ಮೆದುಳು ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ವಿಶ್ವ ಮೆದುಳು ದಿನ’ ಕಾರ್ಯಕ್ರಮದಲ್ಲಿ ಹೇಳಿಕೆ । ಯೋಗ, ಧ್ಯಾನ, ನಿದ್ರೆಯಿಂದ ಆರೋಗ್ಯ ಸಾಧ್ಯಕನ್ನಡಪ್ರಭ ವಾರ್ತೆ ಚಾಮರಾಜನಗರದಿನನಿತ್ಯದ ಸ್ವಾಸ್ಥ್ಯ ಜೀವನಕ್ಕೆ ಮೆದುಳಿನ ಆರೋಗ್ಯವು ಪ್ರತಿಯೊಬ್ಬರಿಗೂ ಅತಿಮುಖ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಚಿದಂಬರ ತಿಳಿಸಿದರು.

ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿರುವ ಬ್ರೈನ್‌ಹೆಲ್ತ್ ಕ್ಲಿನಿಕ್ ವಿಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೆಂಗಳೂರು ನಿಮಾನ್ಸ್ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಮೆದುಳು ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಇತರರೊಂದಿಗೆ ಸಂವಹನ ಮಾಡಲು, ನಿರ್ಧಾರಗಳನ್ನು ತೆಗೆದುಕೊಳ್ಳಲು, ಉಪಯುಕ್ತ ಜೀವನ ನಡೆಸಲು ಮತ್ತು ಪೂರ್ಣ ಸಂಭಾವ್ಯತೆಯನ್ನು ಅರಿತುಕೊಳ್ಳಲು ಮೆದುಳಿನ ಆರೋಗ್ಯ ಅನುವು ಮಾಡಿಕೊಡಲಿದೆ ಎಂದು ವಿಶ್ವಸಂಸ್ಥೆ ಪ್ರತಿಪಾದಿಸಿದೆ. ಆದ್ದರಿಂದ ಪ್ರತಿಯೊಬ್ಬರೂ ಉತ್ತಮ ದೈಹಿಕ ಚಟುವಟಿಕೆ, ಆರೋಗ್ಯಕರ ಹವ್ಯಾಸಗಳು, ಯೋಗ ಮತ್ತು ಧ್ಯಾನ, ಸಾಕಷ್ಟು ನಿದ್ರೆ ಹಾಗೂ ಸಂಘಜೀವಿಯಾಗಿ ಜೀವಿಸುವ ಮೂಲಕ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಮೆದುಳು ಸಮಸ್ಯೆ ನರ ಸಂಬಂಧಿತ ಕಾಯಿಲೆಯಾಗಿದ್ದು, ತಲೆನೋವು ಹಾಗೂ ಅಧಿಕ ರಕ್ತದ ಒತ್ತಡದಿಂದ ಪಾರ್ಶ್ವವಾಯು ಮತ್ತು ಮರಿಗುಳಿತನ ಉಂಟಾಗುತ್ತದೆ. ರಕ್ತನಾಳ, ನರಕೋಶಗಳಿಗೆ ಹಾನಿಯಾದರೆ ಈ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಔಷಧೋಪಚಾರದಿಂದ ಮೆದುಳು ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಗುಣಪಡಿಸಬಹುದು. ಈ ನಿಟ್ಟಿನಲ್ಲಿ ಬೆಂಗಳೂರು ನಿಮಾನ್ಸ್ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ವಿಭಾಗದಿಂದ ನರ ಸಂಬಂಧಿತ ಅಸ್ವಸ್ಥತೆ ಮತ್ತು ದೌರ್ಬಲ್ಯವನ್ನು ಪರಿಹರಿಸಲು ಹಮ್ಮಿಕೊಳ್ಳಲಾಗಿರುವ ವಿಶಿಷ್ಟ ಅಭಿಯಾನವನ್ನು ಜಿಲ್ಲೆಗೂ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಸಿಮ್ಸ್ ಜನರಲ್ ಮೆಡಿಸನ್ ವಿಭಾಗದ ಡಾ.ರಮೇಶ ಮಾತನಾಡಿ, ನಿಗದಿತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಪಾರ್ಶ್ವವಾಯು ರೋಗ ಗುಣಪಡಿಸಬಹುದು. ರಕ್ತಸ್ರಾವ ಮತ್ತು ಅಧಿಕ ರಕ್ತ ಒತ್ತಡದಿಂದ ಹೃದಯ ಮತ್ತು ಕಿಡ್ನಿಗೆ ಹಾನಿಯಾಗಲಿದ್ದು, ಈ ಕಾಯಿಲೆಗೆ ತುತ್ತಾದವರಿಗೆ ಸ್ಕ್ಯಾನಿಂಗ್ ಮಾಡಿ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್) ಡೀನ್ ಡಾ.ಮಂಜುನಾಥ್, ಮೆದುಳಿಗೆ ನಾವು ದಿನನಿತ್ಯ ವ್ಯಾಯಾಮ ನೀಡಬೇಕು. ಎಲ್ಲರಿಗೂ ಮೆದುಳಿನ ರಕ್ಷಣೆ ತುಂಬಾ ಮುಖ್ಯ ಎಂದರು.

ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆಯಿಂದ ಪಾರ್ಶ್ವವಾಯು ಹಾಗೂ ಮೆದುಳಿನ ಅಸ್ವಸ್ಥತೆ ಉಂಟಾಗುತ್ತದೆ. ಊಟ, ಉಪಹಾರದಲ್ಲಿ ಕಡಿಮೆ ಉಪ್ಪನ್ನು ಉಪಯೋಗಿಸಬೇಕು. ಹಸಿರು ಸೊಪ್ಪು, ತರಕಾರಿ ಮತ್ತು ಪೌಷ್ಟಿಕ ಆಹಾರಗಳನ್ನು ಹೆಚ್ಚಾಗಿ ತೆಗೆದುಕೊಳ್ಳಬೇಕು. ಮೆದುಳು ಪಾರ್ಶ್ವವಾಯುವಿಗೆ ತುತ್ತಾಗದಂತೆ ಧೂಮಪಾನ, ಮದ್ಯಪಾನ ಬಿಡಬೇಕು. ಚೆನ್ನಾಗಿ ಊಟ, ನಿದ್ರೆ ಮಾಡುವುದರಿಂದ ಖಿನ್ನತೆ ದೂರವಾಗಿ ಮೆದುಳಿಗೆ ವಿಶ್ರಾಂತಿ ಸಿಗುತ್ತದೆ. ಅಲ್ಲದೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ, ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದ ಜಿಲ್ಲಾ ಸಂಯೋಜಕ ನಾಗೇಂದ್ರ, ಮನೋರೋಗ ತಜ್ಞರಾದ ಎನ್.ದೀಪ, ಸ್ಪೀಚ್ ಲಾಂಗ್ವೇಜ್ ಫಿಜಿಯೋ ಥೆರಪಿಸ್ಟ್ ಸುರ್ಪಿತ್, ಫಿಜಿಯೋ ಥೆರಪಿಸ್ಟ್ ಸಾನಿಯಾ ಖಾನ್ ಮತ್ತಿತರರಿದ್ದರು.

Share this article