ಬ್ರ್ಯಾಂಚ್‌ ಪೋಸ್ಟ್‌ ಮಾಸ್ಟರ್‌ ನೇಣಿಗೆ ಶರಣು

KannadaprabhaNewsNetwork | Published : Mar 18, 2025 12:31 AM

ಸಾರಾಂಶ

ಮನೆಯಲ್ಲಿ ಯಾರೂ ಇಲ್ಲದೇ ವೇಳೆ ಭಾನುವಾರ ರಾತ್ರಿ ವೇಳೆ ನೇಣಿಗೆ ಬಿಗಿದುಕೊಂಡಿದ್ದಾರೆ. ಅದನ್ನು ಗಮನಿಸಿದ ಮನೆಯ ಅಕ್ಕಪಕ್ಕದವರು ಅವರನ್ನು ಕೂಡಲೇ ಶಿಗ್ಗಾಂವಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಸೌಮ್ಯಾ ಸಾವಿಗೀಡಾಗಿದ್ದಾರೆ.

ಶಿಗ್ಗಾಂವಿ: ಬ್ರ್ಯಾಂಚ್ ಪೋಸ್ಟ್‌ ಮಾಸ್ಟರ್‌ ಆಗಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬರು ನೇಣಿಗೆ ಶರಣಾದ ಘಟನೆ ತಾಲೂಕಿನ ಗಂಗಿಬಾವಿಯ ಕೆಎಸ್‌ಆರ್‌ಪಿ ೧೦ನೇ ಮೀಸಲು ಪೊಲೀಸ್ ಪಡೆಯ ವಸತಿಗೃಹದಲ್ಲಿ ಭಾನುವಾರ ರಾತ್ರಿ ನಡೆದಿದೆ.ಸೌಮ್ಯಾ ಲಕ್ಷ್ಮಣ ಅಚಿಸೂರ(೨೩) ನೇಣಿಗೆ ಶರಣಾದ ಯುವತಿ. ಇವರ ತಂದೆ ಲಕ್ಷ್ಮಣ ಅವರು ಗಂಗಿಬಾವಿಯ ಕೆಎಸ್‌ಆರ್‌ಪಿ ೧೦ನೇ ಮೀಸಲು ಪೊಲೀಸ್ ಪಡೆಯಲ್ಲಿ ಹವಾಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಸೌಮ್ಯಾ ಅವರು ತಂದೆಯೊಂದಿಗೆ ಗಂಗಿಬಾವಿಯ ಪೊಲೀಸ್‌ ಕ್ವಾಟ್ರರ್ಸ್‌ನಲ್ಲಿ ವಾಸವಿದ್ದರು. ಅಲ್ಲದೇ ಕುನ್ನೂರ ಗ್ರಾಮದ ಅಂಚೆ ಕಚೇರಿಯಲ್ಲಿ ಬ್ರ್ಯಾಂಚ್ ಪೋಸ್ಟ್‌ ಮಾಸ್ಟರ್‌ ಆಗಿ ಕೆಲಸ ಮಾಡುತ್ತಿದ್ದರು.

ಸೌಮ್ಯಾ ಅವರು ಮಾ. ೧೫ರಂದು ಕುನ್ನೂರ ಗ್ರಾಮದ ಪೂಜಾ ಎಂಬವರ ಮನೆಯಲ್ಲಿ ಎಂಗೇಜಮೆಂಟ್ ಕಾರ್ಯಕ್ರಮಕ್ಕೆ ಹೋಗಿ ಮಾ. ೧೬ರಂದು ಮರಳಿ ಗಂಗಿಬಾವಿಗೆ ಬಂದಿದ್ದರು. ಮನೆಯಲ್ಲಿ ಯಾರೂ ಇಲ್ಲದೇ ವೇಳೆ ಭಾನುವಾರ ರಾತ್ರಿ ವೇಳೆ ನೇಣಿಗೆ ಬಿಗಿದುಕೊಂಡಿದ್ದಾರೆ. ಅದನ್ನು ಗಮನಿಸಿದ ಮನೆಯ ಅಕ್ಕಪಕ್ಕದವರು ಅವರನ್ನು ಕೂಡಲೇ ಶಿಗ್ಗಾಂವಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಸೌಮ್ಯಾ ಸಾವಿಗೀಡಾಗಿದ್ದಾರೆ.ಆತ್ಮಹತ್ಯೆಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ. ಶಿಗ್ಗಾಂವಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಶೇಷಗಿರಿಯಲ್ಲಿ ರಂಗಾಯಣ ನಾಟಕ ಪ್ರದರ್ಶನ ಇಂದು

ಹಾನಗಲ್ಲ: ತಾಲೂಕಿನ ರಂಗ ಗ್ರಾಮ ಶೇಷಗಿರಿಯಲ್ಲಿ ಮಾ. 18ರಂದು ರಂಗಾಯಣ ಪ್ರಸ್ತುತಿಯಲ್ಲಿ ಸತ್ತವರ ನೆರಳು ನಾಟಕ ಪ್ರದರ್ಶನಗೊಳ್ಳಲಿದ್ದು, ಶಿಗ್ಗಾಂವಿಯ ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡೀಗೌಡ್ರ ನಾಟಕ ಉದ್ಘಾಟಿಸುವರು.

ಮಂಗಳವಾರ ಸಂಜೆ 7 ಗಂಟೆಗೆ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಧಾರವಾಡ, ಶ್ರೀ ಗಜಾನನ ಯುವಕ ಮಂಡಳದ ಆಶ್ರಯದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನೀಕಟ್ಟಿ, ಲಲಿತ ಕಲಾ ಅಕಾಡಿಮಿ ಸದಸ್ಯ ಕರಿಯಪ್ಪ ಹಂಚಿನಮನಿ, ಸಾಹಿತಿ ಡಾ. ಎಂ. ಪ್ರಸನ್ನಕುಮಾರ, ಗ್ರಾಪಂ ಅಧ್ಯಕ್ಷೆ ರೇಖಾ ಕುರುಬರ, ಸದಸ್ಯೆ ಸುಶೀಲಾ ತಳವಾರ, ಸಿದ್ದಪ್ಪ ಅಂಬಿಗೇರ ಅತಿಥಿಗಳಾಗಿ ಪಾಲ್ಗೊಳ್ಳುವರು. ಶಂಕರಪ್ಪ ಗುರಪ್ಪನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಸಂಘದ ಅಧ್ಯಕ್ಷ ಪ್ರಭು ಗುರಪ್ಪನವರ, ಸಂಚಾಲಕ ನಾಗರಾಜ ಧಾರೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article