ಸೋಮರಡ್ಡಿ ಅಳವಂಡಿ
ಕೊಪ್ಪಳ:ಹಿರೇಹಳ್ಳದುದ್ದಕ್ಕೂ ನಡೆಯುತ್ತಿದ್ದ ಅಕ್ರಮ ಮರಳು ದಂಧಗೆ ಕೊನೆಗೂ ಜಿಲ್ಲಾಡಳಿತ ಬ್ರೇಕ್ ಹಾಕಿ ಮರಳು ಎತ್ತುವ ಬೋಟ್‌ಗಳನ್ನು ಪುಡಿ, ಪುಡಿ ಮಾಡಿ, ಹಳ್ಳದಲ್ಲಿದ್ದ ಜೆಸಿಬಿ ವಶಕ್ಕೆ ಪಡೆದು, ದಂಡ ಹಾಕಿ, ಬಿಡುಗಡೆ ಮಾಡಿದೆ.
''''''''ಹಿರೇಹಳ್ಳ ಆಕ್ರಂದನ'''''''' ಹೆಸರಿನಲ್ಲಿ ''''''''ಕನ್ನಡಪ್ರಭ'''''''' ವಿಶೇಷ ಸರಣಿಯಿಂದ ಎಚ್ಚೆತ್ತ ಜಿಲ್ಲಾಡಳಿತ ಕೊನೆಗೂ ಹಿರೇಹಳ್ಳದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ ಹಾಕುವ ಸಾಹಸಕ್ಕೆ ಕೈಹಾಕಿದೆ. ಸದ್ಯಕ್ಕಂತೂ ಸಾರ್ವಜನಿಕರ ತೀವ್ರ ಟೀಕೆಯಿಂದ ಉಂಟಾದ ಮುಜುಗರದಿಂದ ಪಾರಾಗಿದೆ. ಮರಳು ಅಕ್ರಮದ ಹಿಂದೆ ದೊಡ್ಡವರ ಬಲ ಇದೆ. ಅದನ್ನು ತಡೆಯುವುದು ಅಷ್ಟು ಸುಲಭ ಅಲ್ಲ ಎನ್ನುವ ಭಾವನೆ ಹೋಗಲಾಡಿಸುವ ಯತ್ನ ಮಾಡಿದೆ.ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಗಣಿ ಮತ್ತು ಭೂಮಿ ವಿಜ್ಞಾನ ಇಲಾಖೆಯ ಅಧಿಕಾರಿ ಪುಷ್ಪಲತಾ ಅವರು ಹಿರೇಹಳ್ಳಕ್ಕೆ ತಮ್ಮ ಅಧಿಕಾರಿಗಳ ತಂಡದೊಂದಿಗೆ ದೌಡಾಯಿಸಿ, ಕ್ರಮವಹಿಸಿದ್ದಾರೆ. ಇದಾದ ಮೇಲೆ ತಹಸೀಲ್ದಾರ್ ವಿಠ್ಠಲ ಚೌಗಲೆ ಸಹ ಹಿರೇಹಳ್ಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಆಗಮಿಸಿ, ಬೋಟ್‌ಗಳನ್ನು ಪುಡಿ ಪುಡಿ ಮಾಡಿಸಿದ್ದಾರೆ. ಹಿರೇಹಳ್ಳದಲ್ಲಿ ಮರಳು ಸಾಗಾಟಕ್ಕೆ ನಿರ್ಬಂಧ ಇದ್ದರೂ ಮರಳು ಗಣಿಗಾರಿಕೆ ಮಾಡಿರುವವರನ್ನು ಪತ್ತೆ ಮಾಡಿ, ಕೇಸ್ ದಾಖಲಿಸುವ ದಿಸೆಯಲ್ಲಿ ಕ್ರಮವಹಿಸಿದ್ದಾರೆ.
ಬೆಂಕಿಯಿಟ್ಟ ಅಧಿಕಾರಿಗಳು:ಬೋಟ್ ಪುಡಿ ಪುಡಿ ಮಾಡಿದ್ದಲ್ಲದೆ, ಹಿರೇಹಳ್ಳದಲ್ಲಿ ಮರಳು ಫಿಲ್ಟರ್ ಮಾಡಲು ಬಳಸುವ, ಅಲ್ಲಲ್ಲಿ ಹಾಕಿದ್ದ ಪ್ಲಾಸ್ಟಿಕ್ ತಾಡಪತ್ರಿಗಳನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಹಳ್ಳದುದ್ದಕ್ಕೂ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ತಾಡಪತ್ರೆಗಳು ಮರಳಿನಲ್ಲಿ ಮುಚ್ಚಿಕೊಂಡು ಹೋಗಿ, ಪರಿಸರ ಹಾನಿಗೆ ಕಾರಣವಾಗುವ ಕುರಿತು ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದರು.
ದಿಢೀರ್ ನಾಪತ್ತೆ:ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ಮಾಡುತ್ತಾರೆ ಎನ್ನುವ ಮಾಹಿತಿ ಅರಿತ ಕೆಲವರು ಹಿರೇಸಿಂದೋಗಿ ಗ್ರಾಮದ ಹಿರೇಹಳ್ಳದಲ್ಲಿದ್ದ ಮರಳು ಎತ್ತುವ ಬೋಟ್‌ಗಳು, ಜೆಸಿಬಿಗಳು, ಟ್ರ್ಯಾಕ್ಟರ್‌ಗಳನ್ನು ನಾಪತ್ತೆ ಮಾಡಿದ್ದಾರೆ. ಅವೆಲ್ಲವುಗಳನ್ನು ತಕ್ಷಣ ಅಲ್ಲಿಂದ ಖಾಲಿ ಮಾಡಿ, ಜಾಲಿಗಳಲ್ಲಿ, ಹೊಲಗಳಲ್ಲಿ ಯಾರಿಗೂ ಕಾಣದಂತೆ ಬಚ್ಚಿಟ್ಟರು.
ಕೆಲವರು ನಾವು ಮರಳು ಸಾಗಿಸುವ ಕಾರ್ಯವನ್ನೇ ಮಾಡಿಲ್ಲ ಎನ್ನುವಂತೆ ಜೆಸಿಬಿಗಳನ್ನು ತೊಳೆದು ಸ್ವಚ್ಛಗೊಳಿಸಿ, ಮನೆಯ ಮುಂದೆ ನಿಲ್ಲಿಸಿಕೊಂಡರು. ಅದೇ ರೀತಿ ಟ್ರ್ಯಾಕ್ಟರ್ ಮತ್ತಿತರ ಪರಿಕರಗಳನ್ನು ಸ್ವಚ್ಛಗೊಳಿಸಿಕೊಂಡಿದ್ದಾರೆ.ಬಿಜೆಪಿ ಮನವಿಹಿರೇಹಳ್ಳದುದ್ದಕ್ಕೂ ಮರಳು ಅಕ್ರಮ ದಂಧ ಅವ್ಯಾಹತವಾಗಿ ನಡೆಯುತ್ತಿದೆ. ಇದೆಲ್ಲವೂ ಗೊತ್ತಿದ್ದರೂ ಯಾಕೆ ಕ್ರಮವಹಿಸುತ್ತಿಲ್ಲ ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಸಿದ್ದಿ ಅವರಿಗೆ ಮನವಿ ಸಲ್ಲಿಸಿದರು.
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ ಹಾಗೂ ಮುಖಂಡ ಚಂದ್ರಶೇಖರ ಕವಲೂರು ಸೇರಿದಂತೆ ಅನೇಕರು ಮನವಿ ಸಲ್ಲಿಸುವ ವೇಳೆ ಹಾಜರಿದ್ದರು. ಈ ಕುರಿತು ನಿರ್ದಾಕ್ಷಿಣ್ಯ ಕ್ರಮ ವಹಿಸಬೇಕು. ಇಲ್ಲದಿದ್ದರೆ ಹಿರೇಹಳ್ಳದಲ್ಲಿಯೇ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಮುದ್ಲಾಪುರದಿಂದ ಹಿಡಿದು ಹಿರೇಸಿಂದೋಗಿ, ಬೂದಿಹಾಳ ವರೆಗೂ ಸುಮಾರು 26 ಕಿಲೋಮೀಟರ್ ಉದ್ದಕ್ಕೂ ಮರಳು ದಂಧೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದರಿಂದ ಹಿರೇಹಳ್ಳವೇ ನಾಶವಾಗುವಂತೆ ಆಗಿದೆ. ರೈತರ ಭೂಮಿ ಹಾಳಾಗಿದೆ. ಅಷ್ಟೇ ಅಲ್ಲ, ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಮರ್ರಂ ಗಣಿಗಾರಿಕೆಯೂ ಅಕ್ರಮವಾಗಿ ನಡೆಯುತ್ತಿದೆ. ಇದೆಲ್ಲಕ್ಕೂ ಕಡಿವಾಣ ಹಾಕಿ ಎಂದು ಎಂದು ಆಗ್ರಹಿಸಿದರು.
ಹಿರೇಹಳ್ಳದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ತಡೆಗೆ ತಕ್ಷಣ ಕ್ರಮ ವಹಿಸಲಾಗುವುದು. ಅದರ ಹಿಂದೆ ಯಾರೇ ಇದ್ದರೂ ಮುಲಾಜಿಲ್ಲದೆ ಕ್ರಮವಹಿಸಲಾಗುವುದು.ಡಾ. ಸುರೇಶ ಇಟ್ನಾಳ ಜಿಲ್ಲಾಧಿಕಾರಿ, ಕೊಪ್ಪಳ