ಕನ್ನಡಪ್ರಭ ವಾರ್ತೆ ಬೆಂಗಳೂರು
ಸುಮಾರು 2 ಗಂಟೆಗೂ ಹೆಚ್ಚಿನ ಕಾಲ ನಡೆದ ಬ್ರೇಕ್‌ಫಾಸ್ಟ್ ಮೀಟಿಂಗ್‌ನಲ್ಲಿ ಉಭಯ ನಾಯಕರು ಹಸನ್ಮುಖಿಗಳಾಗಿಯೇ ಮಾತುಕತೆ ನಡೆಸಿದರು. ಪಕ್ಷ ಸಂಘಟನೆ, ನಾಯಕತ್ವ ಬದಲಾವಣೆ, ವಿಧಾನಮಂಡಲ ಚಳಿಗಾಲದ ಅಧಿವೇಶನ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಮುಕ್ತವಾಗಿ ಚರ್ಚಿಸಿದ್ದಾರೆ. ಬ್ರೇಕ್‌ಫಾಸ್ಟ್ ಮೀಟಿಂಗ್ ಕೇವಲ ರಾಜಕೀಯ ಚರ್ಚೆಗೆ ಸೀಮಿತವಾಗಿರದೆ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಸಿದ್ದರಾಮಯ್ಯ ಅತಿಥಿಗಳಾಗಿ ಆಗಮಿಸಿದಂತಿತ್ತು. ಡಿ.ಕೆ. ಶಿವಕುಮಾರ್ ಅವರ ಕುಟುಂಬ ಸಿದ್ದರಾಮಯ್ಯ ಅವರಿಗೆ ಇಡ್ಲಿ ಮತ್ತು ನಾಟಿ ಕೋಳಿ ಸಾರನ್ನು ಉಣಬಡಿಸಿತು. ನಂತರ ಖುದ್ದು ಡಿ.ಕೆ. ಶಿವಕುಮಾರ್ ಅವರೇ ಸಿದ್ದರಾಮಯ್ಯ ಅವರಿಗೆ ತಮ್ಮ ಮನೆಯ ಪರಿಚಯ ಮಾಡಿಸಿಕೊಟ್ಟರು.
ಸಿಎಂಗೆ ಕಾಲು ಮುಟ್ಟಿ ಆಶೀರ್ವಾದ ಪಡೆದ ಡಿಕೆಸು:ಮಂಗಳವಾರ ಬೆಳಗ್ಗೆ 9.30ಕ್ಕೆ ಡಿಸಿಎಂ ನಿವಾಸಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರು ಶಾಲು ಹೊದಿಸಿ ಸ್ವಾಗತಿಸಿದರು. ಈ ವೇಳೆ ಡಿ.ಕೆ.ಸುರೇಶ್ ಅವರು ಸಿದ್ದರಾಮ್ಯಯ ಅವರ ಕಾಲು ಮುಟ್ಟಿ ನಮಸ್ಕರಿಸಿದರು. ಡಿ.ಕೆ.ಶಿವಕುಮಾರ್ ಅವರಿ ಸಿಎಂ ಅವರನ್ನು ಹಸ್ತಲಾಘವ ಮಾಡಿ ಆತ್ಮೀಯವಾಗಿ ಮನೆಯೊಳಗೆ ಕರೆದುಕೊಂಡು ಹೋದರು.
ಸಿಎಂಗೆ ಡಿಸಿಎಂ ಪತ್ನಿಯಿಂದ ಅಡುಗೆ:ಸಿಎಂ ಸಿದ್ದರಾಮಯ್ಯ ಅವರಿಗಾಗಿ ಮೈಸೂರಿನವರೇ ಆದ ಡಿ.ಕೆ. ಶಿವಕುಮಾರ್ ಪತ್ನಿ ಉಷಾ ಅವರು ಖುದ್ದಾಗಿ ಅಡುಗೆ ಮಾಡಿದ್ದರು. ಇನ್ನು, ಸಿದ್ದರಾಮಯ್ಯ ಅವರು ಮೊದಲೇ ಕನಕಪುರ ಕಡೆಯಿಂದ ನಾಟಿ ಕೋಳಿ ತರಿಸುವಂತೆ ತಿಳಿಸಿದ್ದರಿಂದ, ಡಿ.ಕೆ. ಶಿವಕುಮಾರ್ ಅವರು ಮುತುವರ್ಜಿವಹಿಸಿ ನಾಟಿ ಕೋಳಿ ತರಿಸಿದ್ದರು. ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಅವರು ಇಡ್ಲಿ ಮತ್ತು ಮೈಸೂರು ಶೈಲಿಯ ನಾಟಿ ಕೋಳಿ ಸಾರನ್ನು ಸಿದ್ಧಪಡಿಸಿ ಸಿದ್ದರಾಮಯ್ಯ ಅವರಿಗೆ ಉಣಬಡಿಸಿದರು.
ಹೋಂ ಟೂರ್ ಮಾಡಿಸಿದ ಡಿಸಿಎಂ:ಉಪಹಾರದ ನಂತರ ಇಬ್ಬರೂ ನಾಯಕರು ಕೆಲಹೊತ್ತು ಚರ್ಚೆ ನಡೆಸಿದರು. ನಂತರ ಸಿದ್ದರಾಮಯ್ಯ ಅವರನ್ನು ತಮ್ಮ ಮನೆಯನ್ನು ತೋರಿಸಲು ಡಿ.ಕೆ. ಶಿವಕುಮಾರ್ ಕರೆದುಕೊಂಡು ಹೋದರು. ತಮ್ಮ ಕುಟುಂಬದವರನ್ನು ಪರಿಚಯಿಸಿ ನಂತರ ಮನೆಯಲ್ಲಿನ ಅಪರೂಪದ ಭಾವಚಿತ್ರಗಳು ಸೇರಿದಂತೆ ಇನ್ನಿತರ ವಿಷಯಗಳನ್ನು ಡಿ.ಕೆ. ಶಿವಕುಮಾರ್ ಅವರು ಖುದ್ದಾಗಿ ಸಿಎಂಗೆ ವಿವರಿಸಿದರು.ಸಿಎಂ ಜತೆ ಸರ್ಕಾರದ ಕಾರ್ಯತಂತ್ರ ಚರ್ಚೆ: ಡಿಕೆ
ಮುಂಬರುವ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆ, ದೆಹಲಿಯಲ್ಲಿ ಸರ್ವಪಕ್ಷ ಸಂಸದರ ಸಭೆ ಕರೆಯುವುದು, ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರ ಕಾರ್ಯತಂತ್ರಗಳ ಕುರಿತಂತೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ಸದಾಶಿವನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಉಪಹಾರ ಕೂಟದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಅವರನ್ನು ಉಪಹಾರಕ್ಕೆ ಬರುವಂತೆ ನಾನು ಮೊದಲು ಆಹ್ವಾನ ನೀಡಿದ್ದೆ. ಆದರೆ, ಅವರು ಮೊದಲು ತಮ್ಮ ಮನೆಗೆ ಬನ್ನಿ, ಆಮೇಲೆ ಬರುತ್ತೇನೆ ಎಂದಿದ್ದರು.ಅದರಂತೆ ನಾನು ಅವರ ಮನೆಗೆ ಹೋಗಿದ್ದೆ. ಈಗ ಅವರು ನಮ್ಮ ಮನೆಗೆ ಬಂದಿದ್ದಾರೆ. ನಾವಿಬ್ಬರೂ ಸಂತೋಷದಿಂದ ಉಪಹಾರ ಸೇವಿಸಿದ್ದೇವೆ. ಉಪಹಾರದ ನಂತರ ಪದವೀಧರ ಮತ್ತು ಶಿಕ್ಷಕರ ವಿಧಾನಪರಿಷತ್ ಕ್ಷೇತ್ರಗಳ ಚುನಾವಣೆಗೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ವಿಚಾರ ಚರ್ಚಿಸಲಾಗಿದೆ ಎಂದರು.ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳನ್ನು ಯಾವ ರೀತಿ ಎದುರಿಸಬೇಕು. ಶಾಸಕರಿಗೆ ನೀಡಬೇಕಾದ ಸಂದೇಶಗಳು, ವಿರೋಧ ಪಕ್ಷಗಳು ಯಾವೆಲ್ಲ ವಿಚಾರ ಪ್ರಸ್ತಾಪಿಸಬಹುದು ಎಂಬ ಬಗ್ಗೆ ಚರ್ಚಿಸಿದ್ದೇವೆ. ಸರ್ಕಾರ ಒಂದೇ ಧ್ವನಿಯಲ್ಲಿ ಎಲ್ಲವನ್ನೂ ಎದುರಿಸಲು ಸಿದ್ಧರಿದ್ದೇವೆ. ದೆಹಲಿಗೆ ತೆರಳಿ ಸರ್ವಪಕ್ಷ ಸಂಸದರ ಸಭೆ ನಡೆಯುವ ಬಗ್ಗೆಯೂ ನಿರ್ಧರಿಸಲಾಗಿದೆ.
ಡಿ. 8ರಂದು ದೆಹಲಿಗೆ ತೆರಳಿ ಸಭೆ ನಡೆಸಿ ವಾಪಾಸು ಬರಲು ತೀರ್ಮಾನಿಸಲಾಗಿದೆ. ಮೇಕೆದಾಟು ವಿಚಾರವಾಗಿ ನ್ಯಾಯಾಲಯದ ತೀರ್ಪು ಬಂದಿದ್ದು, ಮೆಕ್ಕೆಜೋಳ ದರ ವಿಚಾರ, ಕೇಂದ್ರ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ನೀರಾವರಿ ಯೋಜನೆಗಳಿಗೆ ಅನುದಾನ ಬಾರದಿರುವ ವಿಚಾರವಾಗಿ ಸಂಸದರ ಜತೆ ಚರ್ಚೆ ಮಾಡಿ ಅವರಿಗೆ ಜವಾಬ್ದಾರಿ ನೀಡಬೇಕಿದೆ. ಸಂಸದರೊಂದಿಗಿನ ಸಭೆಗೆ ವಿಧಾನಸಭೆ, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರು, ಜೆಡಿಎಸ್ ನಾಯಕರನ್ನು ಕರೆದುಕೊಂಡು ಹೋಗಲಾಗುತ್ತದೆ ಎಂದು ತಿಳಿಸಿದರು.ಸಿದ್ದು, ಡಿಕೆಶಿಯಿಂದ ಕುರ್ಚಿ ಆಸೆಗೆ ತಿಂಡಿ ತಿನ್ನೋ ನಾಟಕ: ಛಲವಾದಿಕೊಳ್ಳೇಗಾಲ: ತಮ್ಮ ಮುಖ್ಯಮಂತ್ರಿ ಪದವಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಇಬ್ಬರು ಕೂಡ ಕುರ್ಚಿ ಆಸೆಗಾಗಿ ಬ್ರೇಕ್ ಫಾಸ್ಟ್ ಗಿಮಿಕ್ ಮಾಡುತ್ತಿದ್ದಾರೆ. ಇಬ್ಬರ ಮನಸ್ಸುಗಲೇ ಬ್ರೇಕ್ ಆಗಿರುವಾಗ, ಇನ್ನೆಲ್ಲಿ ಬ್ರೇಕ್ ಫಾಸ್ಟ್ ಸಭೆಗಳು, ಈ ನೆಪದಲ್ಲಿ ತೆಪೆ ಹಚ್ಚುವ ಕೆಲಸ ಸಾಗುತ್ತಿದೆ ಅಷ್ಟೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಆಯೋಜಿಸಿದ್ದ ಸಂವಿಧಾನ ಜಾಗೃತಿಗಾಗಿ ಭೀಮನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಬ್ಬರು ನಾಯಕರು ಬ್ರೇಕ್ ಫಾಸ್ಟ್‌ಗೆ ಸೇರಿರುವುದು ರೈತರ ಅಥವಾ ನಾಡಿನ ಜನರ ಸಮಸ್ಯೆ ನಿವಾರಣೆಗಾಗಿ ಅಲ್ಲ. ದಲಿತರ ಸಮಸ್ಯೆಗಳನ್ನು ಪರಿಹರಿಸಲಿಕ್ಕಾಗಿ ಅಲ್ಲ. ಕಾಂಗ್ರೆಸ್‌ನಲ್ಲಿ ದಲಿತರಿಗೆ ಸಿಎಂ ಹುದ್ದೆ ಸಿಗಲ್ಲ. ಮುಂದೆ ಸಂಪುಟ ವಿಸ್ತರಣೆ ವೇಳೆ ಎಚ್.ಸಿ.ಮಹದೇವಪ್ಪ, ಮುನಿಯಪ್ಪ, ಪರಮೇಶ್ವರ್ ಅವರನ್ನು ಸಹ ಕೈಬಿಡಲಾಗುತ್ತೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ದಲಿತರನ್ನು ಸಿಎಂ ಆಗಲು ಬಿಡಲ್ಲ ಎಂದು ದೂರಿದರು.