ಸ್ತನ್ಯಪಾನ ತಾಯಿ ಮಗುವಿನ ಆರೋಗ್ಯಕ್ಕೆ ಸಹಕಾರಿ

KannadaprabhaNewsNetwork | Published : Aug 9, 2024 12:31 AM

ಸಾರಾಂಶ

ತಾಯಿಯ ಎದೆ ಹಾಲು ಸೇವಿಸಿದ ಮಗು ಸದಾ ಆರೋಗ್ಯದಿಂದ ಇದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿದೆ. ಇಂದಿನ ಆಧುನಿಕ ಯುಗದಲ್ಲಿ ಸಿದ್ಧ ಆಹಾರ ಸೇವನೆಯ ಚಾಳಿ ಹೆಚ್ಚಾಗಿದ್ದು ಇದರಿಂದ ಎಲ್ಲರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ, ಇದರಿಂದ ರೋಗ ನಿರೋಧಕ ಶಕ್ತಿ ಕ್ಷೀಣಿಸಲು ಪ್ರಮುಖ ಕಾರಣವಾಗುತ್ತಿದೆ. ಹಸಿರು ತರಕಾರಿ, ಸೊಪ್ಪು, ಮೊಳಕೆಕಾಳು ಸೇರಿದಂತೆ ನಾಟಿ ಆಹಾರ ಪದ್ದತಿಯಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಯಿ ಮಗುವಿನ ಆರೋಗ್ಯವನ್ನು ಶಾಶ್ವತವಾಗಿ ಕಾಪಾಡುವಲ್ಲಿ ಸ್ತನ್ಯಪಾನ ಸಹಕಾರಿಯಾಗಲಿದ್ದು, ಇಂದಿನ ಆಧುನಿಕ ಯುಗದ ವಿವಾಹಿತ ಹೆಣ್ಣು ಮಕ್ಕಳು ಇದನ್ನು ಅರ್ಥಮಾಡಿಕೊಂಡು ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಬೆಳಗುಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ವೇದಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣ್ಣೇನಹಳ್ಳಿ ಗ್ರಾಮದಲ್ಲಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ಮಾತೃ ವಂದನಾ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ತಾಯಿಯ ಎದೆ ಹಾಲು ಸೇವಿಸಿದ ಮಗು ಸದಾ ಆರೋಗ್ಯದಿಂದ ಇದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿದೆ. ಇಂದಿನ ಆಧುನಿಕ ಯುಗದಲ್ಲಿ ಸಿದ್ಧ ಆಹಾರ ಸೇವನೆಯ ಚಾಳಿ ಹೆಚ್ಚಾಗಿದ್ದು ಇದರಿಂದ ಎಲ್ಲರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ, ಇದರಿಂದ ರೋಗ ನಿರೋಧಕ ಶಕ್ತಿ ಕ್ಷೀಣಿಸಲು ಪ್ರಮುಖ ಕಾರಣವಾಗುತ್ತಿದೆ. ಹಸಿರು ತರಕಾರಿ, ಸೊಪ್ಪು, ಮೊಳಕೆಕಾಳು ಸೇರಿದಂತೆ ನಾಟಿ ಆಹಾರ ಪದ್ದತಿಯಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ, ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯಲ್ಲಿ ಮಗು ಮತ್ತು ತಮ್ಮ ಆರೋಗ್ಯ ಕಾಪಾಡಿಕೊಳ್ಳವಲ್ಲಿ ನಿಗಾ ವಹಿಸಬೇಕು, ಜನಿಸಿದ ಮಗುವಿಗೆ ತಾಯಿಯ ಎದೆ ಹಾಲು ಅಮೃತಕ್ಕೆ ಸಮ, ಮಗು ಜನಿಸಿದ ಕನಿಷ್ಠ 2 ವರ್ಷಗಳವರೆಗೆ ಎದೆ ಹಾಲು ಕುಣಿಸುವುದು ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಲಾಖೆಯ ರೇಣುಕಮ್ಮ ಮಾತನಾಡಿ, ಮಗು ಜನಿಸಿದ 1 ಗಂಟೆಯೊಳಗಡೆ ಮಗುವಿಗೆ ತಾಯಿಯ ಎದೆ ಹಾಲುಣಿಸಬೇಕು, ಹಾಗೆಯೇ 6 ತಿಂಗಳುಗಳ ನಂತರ ಮೆದು ಆಹಾರ ನೀಡಬೇಕು, ಬಾಣಂತಿತನದಲ್ಲಿ ತಾಯಿ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಮನೆಯವರು ಹೆಚ್ಚು ಕಾಳಜಿ ವಹಿಸಬೇಕು ಎಂದರು. ಗ್ರಾಮ ಪಂಚಾಯಿತಿ ಸದಸ್ಯರಾದ ರೂಪ, ತಿಮ್ಮಪ್ಪ, ಆರೋಗ್ಯ ಇಲಾಖೆಯ ಚೈತ್ರ, ಶಿಕ್ಷಕ ಕುಮಾರಸ್ವಾಮಿ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮದ ಹಲವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article