ರಾಣಿಬೆನ್ನೂರು: ಇ- ಸ್ವತ್ತು ಉತಾರ ಪೂರೈಸಲು ಲಂಚಕ್ಕೆ ಬೇಡಿಕೆ ಹಿನ್ನೆಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಒ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಸೋಮವಾರ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಜರುಗಿದೆ. ರಾಣಿಬೆನ್ನೂರು ನಗರದ ನವೀನ ಮಲ್ಲೇಶಪ್ಪ ಅಂದನೂರ ಎಂಬವರು ತಾಲೂಕಿನ ಹಲಗೇರಿ ಗ್ರಾಪಂ ವ್ಯಾಪ್ತಿಯ ಜಮೀನನ್ನು ಎನ್ಎ ಡೆವಲಪ್‌ಮೆಂಟ್ ಮಾಡಿಸಿದ್ದರು. ಒಟ್ಟು 124 ಪ್ಲಾಟ್‌ಗಳ ಪೈಕಿ 60 ಪ್ಲಾಟುಗಳ ಇ- ಸ್ವತ್ತು ಉತಾರಗಳನ್ನು ಪೂರೈಸಲು ಪಿಡಿಒ ಕೆ. ಮಂಜುನಾಥ ತಂದೆ ಕೆ. ಹನುಮಂತಪ್ಪ ₹1 ಲಕ್ಷ ಲಂಚ ಸ್ವೀಕರಿಸಿದ್ದರು. ಬಾಕಿ ಉಳಿದ 64 ಪ್ಲಾಟುಗಳ ಇ- ಸ್ವತ್ತು ಉತಾರಗಳನ್ನು ಪೂರೈಸಲು ಗ್ರಾಪಂ ಉಪಾಧ್ಯಕ್ಷ ಮಲ್ಲಪ್ಪ ತಿರಕಪ್ಪ ಬೂದಿಹಾಳ, ಸದಸ್ಯರಾದ ಸೋಮಶೇಖರ ಕನ್ನಪ್ಪಳವರ, ಪ್ರಸನ್ನ ಬಣಕಾರ, ಸೈಯ್ಯದ್ ರೆಹಮಾನ ಕರ್ಜಗಿ ಉರ್ಫ್ ಬಾಷಾಸಾಬ್ ಎಂಬವರು ನವೀನ ಅವರಿಂದ ₹4.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಚೌಕಾಸಿ ನಂತರ ₹4 ಲಕ್ಷಕ್ಕೆ ಸಮ್ಮತಿಸಿದ್ದರು. ಇವರೆಲ್ಲ ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಕೈಗೊಂಡು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬ್ಯಾಡಗಿ: ಗ್ರಾಮೀಣ ರಸ್ತೆಗಳು ನಗರಗಳಿಗೆ ಸಂಪರ್ಕ ಕಲ್ಪಿಸುವ ಕೊಂಡಿಗಳಿದ್ದಂತೆ. ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಗುಣಮಟ್ಟದ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.ತಾಲೂಕಿನ ಗುಂಡೇನಹಳ್ಳಿ ಗ್ರಾಮದಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ರಸ್ತೆ ನಿರ್ಮಾಣ ಕಾಮಗಾರಿ ವೀಕ್ಷಿಸಿ ಬಳಿಕ ಮಾತನಾಡಿ, ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆಗಳ ಸುಧಾರಣೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈಗಾಗಲೇ ಹಲವು ಗ್ರಾಮಗಳಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದ್ದು, ಸುಗಮ ಸಂಚಾರಕ್ಕೆ ಅನೂಕೂಲವಾಗಿದೆ ಎಂದರು.ರಾಜ್ಯದಲ್ಲಿ ಅಭಿವೃದ್ಧಿಗೆ ದುಡ್ಡಿಲ್ಲ ಎಂದು ವಿರೋಧ ಪಕ್ಷದವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಬದುಕು ಹಸನಾಗುವಂತೆ ಮಾಡುವುದರ ಜತೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ‍್ಯಗಳನ್ನ ಮಾಡುತ್ತಿದೆ ಎಂದರು.ಗುಣಮಟ್ಟದ ಕಾಮಗಾರಿ ನಡೆಸಿ:ರಸ್ತೆ ಕಾಮಗಾರಿಯನ್ನು ವೀಕ್ಷಣೆ ಮಾತನಾಡಿದ ಬಳಿಕ ₹2 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತದೆ. ಗುಣಮಟ್ಟದ ಕಾಮಗಾರಿ ನಡೆಸಬೇಕು. ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯಿಲ್ಲ ಎಂದು ಗುತ್ತಿಗೆದಾರನಿಗೆ ಖಡಕ್ ಸೂಚನೆ ನೀಡಿದರು. ಈ ವೇಳೆ ಎಇಇ ಉಮೇಶ ನಾಯ್ಕ, ನಾಗರಾಜ ಆನ್ವೇರಿ ಹಲವು ಮುಖಂಡರು ಉಪಸ್ಥಿತರಿದ್ದರು.