ದೈವದ ಭಂಡಾರ ಮೆರವಣಿಗೆ ವೇಳೆ ಕಾಲು ಸಂಕ ಕುಸಿತ: ಎಂಟು ಮಂದಿ ಗಾಯ

KannadaprabhaNewsNetwork |  
Published : Apr 23, 2026, 02:45 AM IST
ದೈವದ ಭಂಡಾರ ಮೆರವಣಿಗೆ ವೇಳೆ ಕುಸಿದ ಕಾಲು ಸಂಕ  | Kannada Prabha

ಸಾರಾಂಶ

ಪುಚ್ಚೆಮೊಗರು ಸಮೀಪದ ಹೊಸಬೆಟ್ಟು ಗ್ರಾಪಂ ವ್ಯಾಪ್ತಿಯ ಬಾವದಬೈಲು ಪ್ರದೇಶದಲ್ಲಿ ಸುಮಾರು ಐದು ದಶಕಗಳ ಹಿನ್ನೆಲೆ ಇರುವ ಕಾಲು ಸಂಕವೊಂದು ದೈವರ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮ ನೇಮಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಕುಸಿದು ಸಂಭವಿಸಿದ ಅವಘಡದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ.

ಮೂಡುಬಿದಿರೆ: ಪುಚ್ಚೆಮೊಗರು ಸಮೀಪದ ಹೊಸಬೆಟ್ಟು ಗ್ರಾಪಂ ವ್ಯಾಪ್ತಿಯ ಬಾವದಬೈಲು ಪ್ರದೇಶದಲ್ಲಿ ಸುಮಾರು ಐದು ದಶಕಗಳ ಹಿನ್ನೆಲೆ ಇರುವ ಕಾಲು ಸಂಕವೊಂದು ದೈವರ ಭಂಡಾರವನ್ನು ತಾಕೋಡೆ ಬರ್ಕೆ ಧರ್ಮ ನೇಮಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಕುಸಿದು ಸಂಭವಿಸಿದ ಅವಘಡದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ.

ಬಾವದ ಗುತ್ತುವಿನಿಂದ ಧರ್ಮನೇಮಕ್ಕೆ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಮೆರವಣಿಗೆ ಸಾಗಿಸುತ್ತಿದ್ದಾಗ, ಕಾಲು ಸಂಕ (ಬೀಮ್) ಮುರಿದು ಪಲ್ಲಕ್ಕಿ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಕೊಂಬು ಮತ್ತು ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆ ನಡೆಯುತ್ತಿತ್ತು.

ಭಂಡಾರದ ಪಲ್ಲಕ್ಕಿ ಹೊತ್ತಿದ್ದವರ ಪೈಕಿ ಹರೀಶ್ ಎಂಬವರ ಎರಡೂ ಕಾಲು ಮುರಿದಿದೆ. ದೈವದ ಮುಕ್ಕಾಲ್ದಿ ಸುನೀಲ್ ಶೆಟ್ಟಿ ಮಾರೂರು ಎಂಬವರಿಗೂ ತೀವ್ರ ಸ್ವರೂಪದ ಗಾಯಗಳಾಗಿವೆ. ಉಳಿದಂತೆ ರಾಜೇಶ್, ಯಶೋಧರ್, ಅಶೋಕ್, ದಿನೇಶ್, ಪ್ರವೀಣ್ ಶೆಟ್ಟಿ, ಲೋಕೆಶ್, ಉದಯ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಮೂಡಬಿದಿರೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ತಾಕೋಡೆ ಬರ್ಕೆ ಅಮ್ಮಿ ಕೋಟ್ಯಾನ್ ಎಂಬವರ ಮನೆಯಲ್ಲಿ ಬುಧವಾರ ರಾತ್ರಿ ನಡೆಯಲ್ಲಿದ್ದ ಕೊಡಮಣಿತ್ತಾಯ ದೈವದ ಧರ್ಮನೇಮಕ್ಕೆ ಸಾನದಗುಡ್ಡೆ ಪಡಿಹೊಡಿಬೆಟ್ಟ ದೈವಸ್ಥಾನದಿಂದ ಭಂಡಾರ ಮೆರವಣಿಗೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಸುಮಾರು 1 ಕಿ.ಮಿ. ದೂರಕ್ಕೆ ಕೊಂಬು, ಬ್ಯಾಂಡ್ ವಾದ್ಯಗಳೊಂದಿಗೆ 25 ಮಂದಿ ಮೊಗಮೂರ್ತಿ ಹಾಗೂ ಇತರ ಧಾರ್ಮಿಕ ಪರಿಕರಗಳನ್ನು ಪಲ್ಲಕ್ಕಿಯಲ್ಲಿರಿಸಿ ಸಾಗುತ್ತಿದ್ದರು. ಕಾಲು ಸಂಕದ ಮಧ್ಯಕ್ಕೆ ಬಂದಾಗ ಕಾಲು ಸಂಕ ಕುಸಿದು ಬಿದ್ದಿದ್ದು ಪಲ್ಲಕ್ಕಿ ಸಹಿತ ಸುಮಾರು 10 ಅಡಿ ಆಳದ ತೋಡಿಗೆ ಬಿದ್ದಿದ್ದಾರೆ.

ಘಟನೆ ತಿಳಿದ ಕೂಡಲೇ ಸ್ಥಳೀಯರು ತಕ್ಷಣ ಧಾವಿಸಿ ಗಾಯಾಳುಗಳನ್ನು ರಕ್ಷಿಸಿ, ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆದ್ದಾರಿ ಅತಿಕ್ರಮಣ ವಿರುದ್ಧ ಕ್ರಮಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಸೂಚನೆ
ಮಂಜನಾಡಿ ಗುಡ್ಡ ಕುಸಿತ ಮಾನವ ನಿರ್ಲಕ್ಷ್ಯ: ಎನ್‌ಐಟಿಕೆ ವರದಿ ಬಹಿರಂಗ