ಭಾಗಮಂಡಲದಲ್ಲಿ ಕಾವೇರಿ ನದಿ ಮೇಲು ಸೇತುವೆ ಉದ್ಘಾಟನೆ

KannadaprabhaNewsNetwork |  
Published : Feb 01, 2025, 12:03 AM IST
ಭಾಗಮಂಡಲದ ಮೇಲು ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. | Kannada Prabha

ಸಾರಾಂಶ

ಜಲಸಂಪನ್ಮೂಲ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಭಾಗಮಂಡಲದ ಹತ್ತಿರ ಮಡಿಕೇರಿ ಮತ್ತು ತಲಕಾವೇರಿ ಮತ್ತು ನಾಪೋಕ್ಲು-ತಲಕಾವೇರಿ ರಸ್ತೆಗಳ ಛೇದಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಲು ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾಗಮಂಡಲದಲ್ಲಿ ಕಾವೇರಿ, ಕನ್ನಿಕ ಹಾಗೂ ಸುಜ್ಯೋತಿ ನದಿಗಳ ಸಂಗಮ ತ್ರಿವೇಣಿ ಸಂಗಮವಾಗಿದೆ. ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ಕೊಡಗಿನ ಅಭಿವೃದ್ಧಿಗೆ ಅನುದಾನ ನೀಡಿದಂತೆ, ಈ ಬಾರಿಯೂ ಕೊಡಗಿನ ರಸ್ತೆ ಹಾಗೂ ಇತರೆ ಮೂಲಸೌಕರ್ಯಗಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಜಲಸಂಪನ್ಮೂಲ ಇಲಾಖೆ ಮತ್ತು ಕಾವೇರಿ ನೀರಾವರಿ ನಿಗಮ ನಿಯಮಿತದ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಭಾಗಮಂಡಲದ ಹತ್ತಿರ ಮಡಿಕೇರಿ ಮತ್ತು ತಲಕಾವೇರಿ ಮತ್ತು ನಾಪೋಕ್ಲು-ತಲಕಾವೇರಿ ರಸ್ತೆಗಳ ಛೇದಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಲು ಸೇತುವೆ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಜಾತ್ಯತೀತ, ಪ್ರಜಾಪ್ರಭುತ್ವವಾದಿ ಬಹುತ್ವದ ರಾಷ್ಟ್ರ. ಇದನ್ನು ಒಂದು ಧರ್ಮಕ್ಕೆ ಸೇರಿದ ಸಾರ್ವಭೌಮ ರಾಷ್ಟ್ರವನ್ನಾಗಿ ಮಾಡಲು ಆಗುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.

ಎಲ್ಲಾ ಧರ್ಮಗಳು, ಜನರು, ಜಾತಿಗಳೂ ಕೂಡ ಸಮಾನ. ಅದಕ್ಕಾಗಿಯೇ ಸಂವಿಧಾನದಲ್ಲಿ ಸಹಿಷ್ಣುತೆ ಹಾಗೂ ಸಹಬಾಳ್ವೆ ಇರಬೇಕು ಎಂದಿರುವುದು. ನಮ್ಮ ಧರ್ಮವನ್ನು ಪ್ರೀತಿಸಿ ಗೌರವಿಸಬೇಕು. ಆದರೆ ಇನ್ನೊಂದು ಧರ್ಮವನ್ನು ಅಲ್ಲಗಳೆಯಬಾರದು. ಅದನ್ನೇ ಸಹಿಷ್ಣುತೆ ಎನ್ನುತ್ತಾರೆ ಎಂದು ನುಡಿದರು.

ಸಹಿಷ್ಣುತೆ ಇದ್ದಾಗ ಮಾತ್ರ ನಾವು ಮಾನವರಾಗಿ ಬಾಳಲು ಸಾಧ್ಯವಾಗುತ್ತದೆ. ಹುಟ್ಟುವಾಗ ಎಲ್ಲರೂ ವಿಶ್ವ ಮಾನವರಾಗಿರುತ್ತಾರೆ, ಬೆಳೆಯುತ್ತಾ ಅಲ್ಪಮಾನವರಾಗುತ್ತಾರೆ ಎಂದು ಕುವೆಂಪು ಅವರು ಹೇಳಿದ್ದರು. ನಾವೆಲ್ಲರೂ ವಿಶ್ವಮಾನವರಾಗುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು..ಗ್ಯಾರಂಟಿ ಯೋಜನೆಗಳಿಂದ ಸಬಲೀಕರಣ: ಯಾವ ಪಕ್ಷ ನುಡಿದಂತೆ ನಡೆಯುತ್ತದೆ, ಜನಪರವಾಗಿದೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷ ಎಂಟು ತಿಂಗಳಲ್ಲಿ ಪ್ರಮುಖವಾಗಿ ಭರವಸೆ ನೀಡಿದ್ದ ಐದೂ ಗ್ಯಾರಂಟಿ ಯೋಜನೆಗಳನ್ನು ಒಂದು ವರ್ಷದೊಳಗೆ ಈಡೇರಿಸಿದ್ದೇವೆ. ಶಕ್ತಿ, ಅನ್ನಭಾಗ್ಯ, ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ ಯೋಜನೆಗಳನ್ನು ಜಾರಿಗೆ ತಂದು ಸಮಾಜದಲ್ಲಿನ ಎಲ್ಲಾ ಜಾತಿಯ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಮಾಡಿರುವುದು ನಮ್ಮ ಸರ್ಕಾರ ಎಂದು ನುಡಿದರು.

ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ಸಮಾಜದಲ್ಲಿ ಸಮಾನತೆ ತರುವ ಪ್ರಯತ್ನವನ್ನು ಮಾಡಿದ್ದೇವೆ ಎಂದರು.ಭಾರತೀಯರಾಗಿ ಬದುಕಬೇಕು: ಭಾರತ ದೇಶ ಬಹುತ್ವದ ದೇಶ. ಎಲ್ಲಾ ಜಾತಿ, ಧರ್ಮ, ಭಾಷೆಗಳಿರುವ ನಾಡಿನಲ್ಲಿ ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಯಾವುದೇ ಕಾರಣಕ್ಕೂ ದ್ವೇಷ ಮಾಡಬಾರದು. ದ್ವೇಷ ಮಾಡಿದರೆ ಅದು ಸಂವಿಧಾನಕ್ಕೆ ವಿರುದ್ಧವಾದುದು ಎಂದರು.ಪ್ರತಿ ಸರ್ಕಾರವೂ ತನ್ನ ನೆಲದ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಸಂವಿಧಾನವು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವನ್ನು ಸಾರುತ್ತದೆ. ಭ್ರಾತೃತ್ವವನ್ನು ನಾವು ಬೆಳೆಸಬೇಕು. ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು. ಸಮಾಜವನ್ನು ಒಗ್ಗೂಡಿಸುವುದು ನಮ್ಮ ಕರ್ತವ್ಯ ಎಂದರು.

.........................ನುಡಿದಂತೆ ನಡೆದ ಸರ್ಕಾರ: ಸಿಎಂಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದ ಕೊಡಗಿನ ಜನತೆಯನ್ನು ಮುಖ್ಯಮಂತ್ರಿ ಅಭಿನಂದಿಸಿದರು.

ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷವಾಗಿದ್ದು, ಕಾಂಗ್ರೆಸ್ ನೀಡಿದ ಭರವಸೆಗಳನ್ನು ಈಡೇರಿಸಿದೆ. 2013-18ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಪಕ್ಷ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿದೆ. ಆದರೆ 2018ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ , ತಾನು ನೀಡಿದ್ದ ಭರವಸೆಗಳಲ್ಲಿ ಶೇ.10 ರಷ್ಟನ್ನು ಕೂಡ ಈಡೇರಿಸಲಿಲ್ಲ ಎಂದರು.ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಫಲಾನುಭವಿಗಳ ಖಾತೆಗೆ ಹಣ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ ಎಂದರು.ಸಿ ಅಂಡ್ ಡಿ ಭೂಮಿಗೆ ಸಂಬಂಧಿಸಿದಂತೆ ಸಮಿತಿಯನ್ನು ರಚಿಸಿ, ಅದರ ವರದಿಯಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಆದ್ದರಿಂದ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.ಮೈಕ್ರೋಫೈನಾನ್ಸ್ ಸಂಸ್ಥೆ ನಿಯಂತ್ರಣ: ಈ ಭಾಗದ ಜನರು ಮೈಕ್ರೋಫೈನಾನ್ಸ್ ನಿಂದ ಅನುಭವಿಸುತ್ತಿರುವ ಕಿರುಕುಳ ತಪ್ಪಿಸಲು ಹಾಗೂ ಮೈಕ್ರೋಫೈನಾನ್ಸ್ ಸಂಸ್ಥೆಗಳ ನಿಯಂತ್ರಣಕ್ಕಾಗಿ ಸುಗ್ರೀವಾಜ್ಞೆ ಸದ್ಯದಲ್ಲೇ ಜಾರಿಗೊಳಿಸಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ