ಶಿಕ್ಷಣದಿಂದ ಮಕ್ಕಳ ಭವಿಷ್ಯ ಉಜ್ವಲ

KannadaprabhaNewsNetwork | Published : Jan 29, 2025 1:31 AM

ಸಾರಾಂಶ

ಮಕ್ಕಳಿಗೆ ಬೇಕಾಗಿರುವ ನೈಪುಣ್ಯತೆ, ಸರ್ವಾಂಗೀಣ ಏಳ್ಗೆಗೆ ಪಾಲಕರು ಮತ್ತು ಶಿಕ್ಷಕರು ಶ್ರಮಿಸಬೇಕು

ರೋಣ: ಶಿಕ್ಷಣದಿಂದ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿದ್ದು, ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ನೈತಿಕ ಮೌಲ್ಯ, ಉತ್ತಮ‌ ಸಂಸ್ಕಾರದ ಜತೆಗೆ ಗುಣಾತ್ಮಕ ಶಿಕ್ಷಣ ಒದಗಿಸುವಲ್ಲಿ ಗಮನ ಹರಿಸಬೇಕು ಎಂದು ಭಾರತಿಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ, ಶರಣರ ಶಿಕ್ಷಣ ಸಮಿತಿ ಅಧ್ಯಕ್ಷ ಡಾ.ಎಸ್.ಬಿ. ಲಕ್ಕೊಳ ಹೇಳಿದರು.

ಅವರು ಪಟ್ಟಣದ ನ್ಯೂ ಲಿಟಲ್ ಪ್ಲಾವರ್ ಶಾಲೆ ಸಭಾಂಗಣದಲ್ಲಿ ಶರಣರ ಶಿಕ್ಷಣ ಸಮಿತಿಯ ನ್ಯೂ ಲಿಟಲ್ ಪ್ಲಾವರ್ ಶಾಲೆ ಆಂಗ್ಲ ಕಿರಿಯ, ಹಿರಿಯ ಪ್ರಾಥಮಿಕ , ಪ್ರೌಢ ಶಾಲೆ, ಪ್ಯಾರಾ ಮೆಡಿಕಲ್ ಹಾಗೂ ಪದವಿ ಪೂರ್ವ ಕಾಲೇಜು ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳಿಗೆ ಬೇಕಾಗಿರುವ ನೈಪುಣ್ಯತೆ, ಸರ್ವಾಂಗೀಣ ಏಳ್ಗೆಗೆ ಪಾಲಕರು ಮತ್ತು ಶಿಕ್ಷಕರು ಶ್ರಮಿಸಬೇಕು. ವೈದ್ಯಕೀಯ, ತಾಂತ್ರಿಕ, ಕಲೆ, ಸಾಹಿತ್ಯ, ವಾಸ್ತುಶಿಲ್ಪ ಸಂಗೀತ ಹೀಗೆ ವಿವಿಧ ರೀತಿಯ ಕೋರ್ಸ್‌ಗಳಿದ್ದು. ಆದರೆ ತಮ್ಮ ಮಕ್ಕಳಲ್ಲಿ ಯಾವ ಕೋರ್ಸ ಕಲಿಯಲು ಆಸಕ್ತಿಯಿದೆ ಎಂಬುದನ್ನು ಪಾಲಕರು ಅರಿತು, ಆಸಕ್ತಿಗೆ ತಕ್ಕಂತೆ ಶಿಕ್ಷಣ ಕಲ್ಪಿಸಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ದಿಶೆಯಲ್ಲಿ ಶರಣರ ಶಿಕ್ಷಣ ಸಮಿತಿ ಶ್ರಮಿಸುತ್ತಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಗುಲಗಂಜಿ ಮಠದ ಗುರುಪಾದ ಶ್ರೀಗಳು ಮಾತನಾಡಿ, ಮಕ್ಕಳಲ್ಲಿ ನೈತಿಕತೆ, ಸಂಸ್ಕಾರ ಗುಣ ಬೆಳೆಸಬೇಕು. ಶಿಕ್ಷಣ ಜತೆಗೆ ಮಕ್ಕಳಿಗೆ ಭವಿಷ್ಯದ ಜೀವನ ಸಂದರವಾಗಿ ಕಟ್ಟಿಕೊಳ್ಳಲು ಸುಸಂಸ್ಕೃತರನ್ನಾಗಿ ಬೆಳೆಸಬೇಕು. ಈ ದಿಶೆಯಲ್ಲಿ ಕಳೆದ ಎರಡುವರೆ ದಶಕಗಳಿಂದ ರೋಣದಲ್ಲಿ ಶರಣರ ಸಮಿತಿಯು ಶಿಕ್ಷಣ ಕ್ಷೇತ್ರದಲ್ಲಿ ಅವಿರತ ಶ್ರಮಿಸುತ್ತಿದೆ. ಪೂರ್ವ ಪ್ರಾಥಮಿಕ ಶಾಲೆಯಿಂದ ಪಿಯು, ಪ್ಯಾರಾ ಮೆಡಿಕಲ್ ಕೋರ್ಸವರೆಗೂ ಶಿಕ್ಷಣ ವ್ಯವಸ್ಥೆ ಕಲ್ಪಿಸಿದ್ದು ಶ್ಲಾಘನೀಯವಾಗಿದೆ ಎಂದರು.

ಸಾನ್ನಿಧ್ಯವನ್ನು ಬಳಗಾನೂರ ಚಿಕ್ಕೇನಕೊಪ್ಪ ಮಠದ ಶಿವಶಾಂತವೀರ ಶರಣರು ವಹಿಸಿದ್ದರು‌. ರಾಜೇಂದ್ರಗೌಡ ಗಿರಡ್ಡಿ ವಾರ್ಷಿಕ ವರದಿ ವಾಚನ ಮಾಡಿದರು.

ಚೆಸ್ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿ ವೈಭವ ಸಂಗನಬಶೆಟ್ಟರ್‌, 2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ತೋಟಪ್ಪ ನವಲಗುಂದ, ಬಸವರಾಜ ಸುಂಕದ, ಮುತ್ತಣ್ಣ ಸಂಗಳದ, ನಾಗನಗೌಡ ಕೆಂಚನಗೌಡ್ರ, ಸಾವಿತ್ರಮ್ಮ ಹುಗ್ಗಿ, ಗೌರಮ್ಮ ಹೂಲಿ, ಆಡಳಿತಾಧಿಕಾರಿ ಬಿ.ಎನ್. ಬಳಗಾನೂರ, ಪಿ.ವಿ.ಚರಂತಿಮಠ, ಜೆ.ಬಿ. ಕಲ್ಲನಗೌಡ್ರ, ವಿದ್ಯಾರ್ಥಿ ಪ್ರತಿನಿಧಿ ಹಬೀಬುಲ್ಲಾ ಯಲಿಗಾರ, ವಿದ್ಯಾರ್ಥಿನಿಯರ ಪ್ರತಿನಿಧಿ ಬಮನೀಷಾ ಚೌಧರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯ ಎಸ್.ಪಿ. ಬಳಗಾರ ಸ್ವಾಗತಿಸಿದರು. ಶಿಕ್ಷಕ ಎಂ.ಕೆ. ದೇಸಾಯಿ ನಿರೂಪಿಸಿದರು. ಐಶ್ವರ್ಯ ಪಟ್ಟಣಶೆಟ್ಟಿ ವಂದಿಸಿದರು.

Share this article