ಉಪ್ಪಿನಂಗಡಿ: ಪ್ರಧಾನಿ ಮೋದಿಯವರ ಆಶಯದಂತೆ ೨೦೪೭ಕ್ಕೆ ವಿಕಸಿತ ಭಾರತವಾಗಲು ವಿರಾಸತ್‌ನೊಂದಿಗೆ ವಿಕಾಸಗೊಳ್ಳಬೇಕಾಗಿದೆ. ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಅಭಿವೃದ್ದಿ ಮಾತ್ರವಲ್ಲ. ಸರ್ವಾಂಗೀಣ ಕ್ಷೇತ್ರಗಳ ಅಭಿವೃದ್ಧಿಯಿಂದ ಜಗತ್ತಿನ ಸಮಸ್ಯೆಗೆ ಭಾರತದಿಂದ ಪರಿಹಾರ ಲಭಿಸುವಂತಾಗಬೇಕು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು. ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಜರುಗಿದ ವೀರ್ ನಮನ್ ವಿದ್ ಕ್ಯಾಪ್ಟನ್ ಎಂಬ ಶಿರೋನಾಮೆಯ ಕಾರ್ಗಿಲ್ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಝೇನ್‌ಜೀಗೂ ಹಿಂದಿನ ತಲೆಮಾರಿಗೂ ಯಾವುದೇ ವ್ಯತ್ಯಾಸವಿಲ್ಲ. ಜನರ ಆಸಕ್ತಿ ವಿಭಿನ್ನವಾಗಿದೆ ಎಂದಾಕ್ಷಣ ತಲೆಮಾರನ್ನು ಬೇರೆ ದೃಷ್ಟಿಕೋನದಿಂದ ನೋಡುವಂತಿಲ್ಲ. ಅಂತೆಯೇ ಯಾರೊ ಬೆರಳೆಣಿಕೆ ಮಂದಿ ದುರ್ವತನೆ ತೋರಿದ ಕಾರಣಕ್ಕೆ ಇಡೀ ತಲೆಮಾರನ್ನೇ ಕೆಟ್ಟವರಂತೆ ಕಾಣಬಾರದು ಎಂದ ಅವರು, ದೇಶಕ್ಕಾಗಿ ಬದುಕುವ ಧ್ಯೇಯದೊಂದಿಗೆ ಎದುರುಗಾಗುವ ಸಮಸ್ಯೆಗಳನ್ನು ಎದುರಿಸುವ ಕ್ಷಮತೆಯೊಂದಿಗೆ ಯಶಸ್ಸಿನತ್ತ ಸಾಗಬೇಕು ಎಂದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರಿಗೆ, ಹತ್ತನೇ ತರಗತಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ದ.ಕ. ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದರೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾತ್ರ ಜಿಲ್ಲೆಯ ಯುವಜನರು ಹಿಂದೆ ಬೀಳುತ್ತಿರುವುದು ಯಾಕೆ? ಒಂದಿಬ್ಬರ ತಪ್ಪು ಧೋರಣೆಯಿಂದ ಇಡೀ ದೇಶ ಸಮಸ್ಯೆಗೆ ತುತ್ತಾಗುವುದು ಸರಿಯೇ ? ರೈಲ್ವೆ ಸೇವೆಯಲ್ಲಿ ದ.ಕ. ಜಿಲ್ಲೆಗೆ ಈವರೆಗೆ ಅನ್ಯಾಯವಾಗುತ್ತಿರುವುದು ಯಾಕೆ ? ವಿಕಸಿತ ಭಾರತ ನಿರ್ಮಾಣದಲ್ಲಿ ಶಿಕ್ಷಣ ಕ್ಷೇತ್ರದ ಪಾತ್ರವೇನು? ಎಂಬೆಲ್ಲಾ ಪ್ರಶ್ನೆಗಳು ವಿದ್ಯಾರ್ಥಿಗಳಿಂದ ಎದುರಾದವು. ದ.ಕ. ಜಿಲ್ಲೆಯಲ್ಲಿ ರೈಲ್ವೆ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ರೈಲ್ವೆ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳಿಂದ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮಂಗಳೂರಿನಲ್ಲಿ ಮೂರು ರೈಲು ಮಾರ್ಗಗಳಿದ್ದು, ಒಂದಕ್ಕೊಂದು ಹೊಂದಾಣಿಕೆ ಇಲ್ಲದೆ, ರೈಲ್ವೆ ಮೂಲ ಸೌಕರ್ಯದಿಂದ ವಂಚಿತವಾಗಿತ್ತು. ಇದರಿಂದಾಗಿ ಉತ್ತಮ ಸೇವೆ ಮರೀಚಿಕೆಯಾಗಿತ್ತು. ಇದರ ಬಗ್ಗೆ ಅಧ್ಯಯನ ನಡೆಸಿದ ನಾನು, ದೇಶದ ಪ್ರಧಾನಿಯವರ ಗಮನ ಸೆಳೆದು, ರೈಲ್ವೆ ಸಚಿವರ ಮೂಲಕ ಮಂಗಳೂರನ್ನು ಮೈಸೂರು ವಿಭಾಗಕ್ಕೆ ಸೇರಿಸಲು ಶಕ್ತನಾಗಿದ್ದೇನೆ. ಇನ್ನುಳಿದ ಕಾರ್ಯಗಳನ್ನು ಹಂತ ಹಂತವಾಗಿ ನಡೆಸಲಾಗುವುದು ಎಂದರು.
ಈ ಸಂದರ್ಭ ರಸ್ತೆಯಲ್ಲಿ ಬಿದ್ದು ಸಿಕ್ಕಿದ್ದ ೫ ಪವನ್ ತೂಕದ ಚಿನ್ನಾಭರಣವನ್ನು ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದ ಸಂಸ್ಥೆಯ ವಿದ್ಯಾರ್ಥಿಗಳಾದ ಸಮರ್ಥ ಮತ್ತು ಸಮೀಕ್ಷಾ ಎಂಬ ಅಣ್ಣ ತಂಗಿಯನ್ನು ಸಂಸದರು ಗೌರವಿಸಿದರು.
ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಯು. ರಾಜೇಶ್ ಪೈ, ಸುಧಾಕರ ಶೆಟ್ಟಿ, ರವೀಂದ್ರ ಆಚಾರ್ಯ, ಜಯಪ್ರಕಾಶ್ ಕಡಮಾಜೆ, ವಿದ್ಯಾಧರ ಜೈನ್, ಪ್ರಮುಖರಾದ ಪ್ರಸನ್ನ ದರ್ಬೆ, ಸುನಿಲ್ ದಡ್ಡು, ಸುಂದರ ಗೌಡ, ಆದೇಶ್ ಶೆಟ್ಟಿ, ಶರತ್ ಕೋಟೆ, ಕೇಶವ ಪಿ.ಎಂ., ಹರಿಪ್ರಸಾದ್ ಯಾದವ, ಪುನೀತ್ ಮಾಡತ್ತಾರು, ಸುರೇಶ್ ಅತ್ರಮಜಲು ಮತ್ತಿತರರು ಭಾಗವಹಿಸಿದ್ದರು. ವಿದ್ಯಾಲಯದ ಶಿಕ್ಷಕರಾದ ಹರಿಣಾಕ್ಷಿ ರಾಜೇಶ್ ಹಾಗೂ ಕರುಣಾಕರ್ ಕಾರ್ಯಕ್ರಮ ನಿರೂಪಿಸಿದರು.