ಜೀವವಿಮೆ ಹಣಕ್ಕಾಗಿ ಒಡಹುಟ್ಟಿದ ಅಣ್ಣನನ್ನೇ ಸಹಚರರೊಂದಿಗೆ ಸೇರಿ ಕೊಲೆ ಮಾಡಿಸಿದ ತಮ್ಮ

KannadaprabhaNewsNetwork | Updated : Dec 05 2024, 10:48 AM IST

ಸಾರಾಂಶ

ಜೀವವಿಮೆ ಹಣಕ್ಕಾಗಿ ಒಡಹುಟ್ಟಿದ ಅಣ್ಣನನ್ನೇ ಸಹಚರರೊಂದಿಗೆ ಸೇರಿ ಸಹೋದರನೇ ಹತ್ಯೆ ಮಾಡಿದ ಘಟನೆ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

 ಬೆಳಗಾವಿ : ಜೀವವಿಮೆ ಹಣಕ್ಕಾಗಿ ಒಡಹುಟ್ಟಿದ ಅಣ್ಣನನ್ನೇ ಸಹಚರರೊಂದಿಗೆ ಸೇರಿ ಸಹೋದರನೇ ಹತ್ಯೆ ಮಾಡಿದ ಘಟನೆ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಹತ್ಯೆಯಾದವನ ಸಹೋದರ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಹಣಮಂತ ಗೋಪಾಲ ತಳವಾರ (35) ಕೊಲೆಯಾದ ವ್ಯಕ್ತಿ. ಮೃತನಸಹೋದರ ಬಸವರಾಜ ತಳವಾರ ಸಹಚರರಾದ ಬಾಪು ಶೇಖ್, ಈರಪ್ಪ ಹಡಗಿನಾಳ, ಸಚಿನ್‌ ಕಂಟೆನ್ನವರ ಬಂಧಿತರು.

ಆಗಿದ್ದೇನು ? ಬಸವರಾಜ ತಳವಾರ ಕೊಲೆ ಮಾಡಿದ ಸಹೋದರ. 

ಈ ಹಿಂದೆ ಬಸವರಾಜನ ಚಿಕ್ಕಪ್ಪ ತೀರಿಕೊಂಡಿದ್ದರು. ಇವರು ಜೀವವಿಮೆ ಪಾಲಿಸಿ ಮಾಡಿಸಿದ್ದರಿಂದ ಮಕ್ಕಳಿಗೆ ವಿಮೆ ಹಣ ಬಂದಿತ್ತು. ಆಗಲೇ ಪ್ಲ್ಯಾನ್‌ ಮಾಡಿದ್ದ ಕಿರಾತಕ ಒಂದೂವರೆ ವರ್ಷದ ಹಿಂದೆಯೇ ಅವಿವಾಹಿತ ಸಹೋದರ ಹಣಮಂತನ ಹೆಸರಿನಲ್ಲಿ ₹50 ಲಕ್ಷ ಜೀವವಿಮೆ ಪಾಲಿಸಿ ಮಾಡಿಸಿ ತನ್ನನ್ನೇ ನಾಮಿನಿ ಆಗಿ ಮಾಡಿದ್ದ. ಅಣ್ಣನ ಸಾವಾದರೆ ಜೀವವಿಮೆ ಹಣ ಬರುತ್ತದೆ ಎಂಬ ದುರಾಸೆಯಿಂದಾಗಿ ಸಂಚು ರೂಪಿಸಿ, ಸಹಚರರಿಗೆ ಸುಫಾರಿ ನೀಡಿ ಕೊಲೆ ಮಾಡಿದ್ದಾನೆ.

ಸಂಚು ಬಯಲಾಗಿದ್ದು ಹೇಗೆ?:

ನವೆಂಬರ್‌ 7ರಂದು ಕಲ್ಲೋಳಿ ಹೊರಭಾಗದಲ್ಲಿ ಯುವಕನ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಪೊಲೀಸರು ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿದಾಗ ಕೊಲೆಯಾದ ಯುವಕ ಕೊಲ್ಲೋಳಿ ಗ್ರಾಮ ಹಣಮಂತ ತಳವಾರ ಎಂಬುದು ಗೊತ್ತಾಗಿದೆ. ಸಂಬಂಧಿಕರು ಇದು ಕೊಲೆ ಎಂದು ಸಂಶಯ ವ್ಯಕ್ತಪಡಿಸಿದ್ದರು. ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮತ್ತಷ್ಟು ತನಿಖೆ ನಡೆಸಿದಾಗ ಸಹೋದರನೇ ಜೀವವಿಮೆ ಹಣಕ್ಕಾಗಿ ಕೊಲೆ ಮಾಡಿಸಿರುವ ವಿಚಾರ ಬೆಳಕಿಗೆ ಬಂದಿದೆ. ಶವ ಪತ್ತೆಯಾದ 5-6 ದಿನಗಳ ಮೊದಲೇ ಕೊಲೆ ಮಾಡಲಾಗಿತ್ತು. ಆರೋಪಿ ಬಸವರಾಜ ಅಣ್ಣನ ಹತ್ಯೆಗೆ ಇತರೆ ಆರೋಪಿಗಳಿಗೆ ಹಣದ ಆಮಿಷವೊಡ್ಡಿದ್ದ. ಓರ್ವ ಆರೋಪಿಗೆ ₹ 8 ಲಕ್ಷ ಹಾಗೂ ಇತರ ಇಬ್ಬರು ಆರೋಪಿಗಳಿಗೆ ತಲಾ ₹5 ಲಕ್ಷ ಕೊಡುವುದಾಗಿ ಭರವಸೆ ನೀಡಿದ್ದ. ಕೊಲೆಯ ದಿನ ಹತ್ಯೆಗೀಡಾದ ಹನುಮಂತ ನಾಲ್ಕೈದು ಜನರ ಜೊತೆಗೆ ಹೋಗುತ್ತಿರುವುದನ್ನು ಪೊಲೀಸ್‌ ಸಿಬ್ಬಂದಿಯೊಬ್ಬರು ನೋಡಿದ್ದರು. ಹತ್ಯೆಯ ಬಳಿಕ ಬಸವರಾಜನನ್ನು ಹೊರತುಪಡಿಸಿದರೆ ಇತರೆ ಆರೋಪಿಗಳು ಊರು ತೊರೆದಿದ್ದರು. ತಿಂಗಳ ಬಳಿಕ ಊರಿಗೆ ಮರಳಿದ್ದರು. ಸಂಶಯದ ಮೇಲೆ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಪೊಲೀಸರ ದಾರಿ ತಪ್ಪಿಸುವ ಸಲುವಾಗಿ ಆತನ ಶವದ ಬಳಿ ಶ್ರೀಗಂಧ ಮರದ ತುಂಡುಗಳನ್ನು ಇಡಲಾಗಿತ್ತು. ಈ ಕುರಿತು ಘಟಪ್ರಭಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಗೋಕಾಕ ಡಿವೈಎಸ್‌ಪಿ ಡಿ.ಹೆಚ್.ಮುಲ್ಲಾ ಹಾಗೂ ಘಟಪ್ರಭಾ ಪಿ.ಐ ಹೆಚ್.ಡಿ ಮುಲ್ಲಾ, ಪಿಎಸ್‌ಐಗಳಾದ ಎಸ್.ಆರ್.ಕಣವಿ, ಹೆಚ್.ಕೆ.ನರಳೆ ತನಿಖಾ ಸಿಬ್ಬಂದಿ ಜನರಾದ ಸಿಹೆಚ್‌ಸಿ ಕೆ.ಆರ್.ಬಬಲೇಶ್ವರ, ಆರ್.ಕೆ. ಹೊಳ್ಳರ. ಮತ್ತು ಸಿಪಿಸಿ ಪಿ.ಐ ಪತ್ತಾರ ಮತ್ತು ಅಪರಾಧ ವಿಭಾಗದ ಸಿಬ್ಬಂದಿಯವರಾದ ಸಿಪಿಸಿ ಆರ್.ಕೆ.ಧುಮಾಳೆ, ಬಿ.ಎಮ್.ತಳವಾರ. ಸಿಹೆಚ್ ಸಿ ಪಿ.ಕೆ.ಡೊಣಿ, ಕೆ.ಎಲ್.ಚೆವರಡ್ಡಿ ಆರ್.ಆರ್. ಗಿಡ್ಡಪ್ಪಗೋಳ, ಸಿಪಿಸಿ ಬಿ.ಎಸ್.ನಾಯಿಕ ಆರ್.ಎಮ್.ಪಡತರೆ, ದೇವೆಂದ್ರ ತಳಗೇರಿ, ಎಸ್. ಎಸ್. ಮಠಪತಿ, ವಿನೋದ ಠಕ್ಕನ್ನವರ್ ರವರು ತನಿಖೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ್ದು ಮಾನ್ಯ ಎಸ್‌ಪಿ ಸಾಹೇಬರು ಬೆಳಗಾವಿ ಹಾಗೂ ಹೆಚ್ಚುವರಿ ಎಸ್‌ಪಿ ಸಾಹೇಬರು ಬೆಳಗಾವಿ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share this article