ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ತಾಲೂಕು ಬಿಜೆಪಿ ಹಾಗೂ ರೈತ ಮೋರ್ಚಾ ವತಿಯಿಂದ ಏತ ನೀರಾವರಿ ಹಾಗೂ ರೈತರ ಪಂಪ್‌ಸೆಟ್‌ಗೆ ಸಮರ್ಪಕ ವಿದ್ಯುತ್ತಿಗೆ ಆಗ್ರಹಿಸಿ ಹಾಗೂ ಕಸ್ತೂರಿ ರಂಗನ್ ವರದಿ ವಿರೋಧಿಸಿ, ತಾಲೂಕು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸುವಂತೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದ್ದು, ಈ ಬಗ್ಗೆ ಎಚ್ಚರಿಸಲು ಹೋರಾಟ, ಪಾದಯಾತ್ರೆ, ಸತ್ಯಾಗ್ರಹ ಅನಿವಾರ್ಯವಾಗಿದೆ. ರೈತರು ಜನಸಾಮಾನ್ಯರ ನೆಮ್ಮದಿಗಾಗಿ ಸರ್ಕಾರವನ್ನು ಎಚ್ಚರಿಸಲು ಯಡಿಯೂರಪ್ಪನವರ ರೀತಿಯಲ್ಲಿ ಹೋರಾಟ ಸತ್ಯಾಗ್ರಹ ಪಾದಯಾತ್ರೆಯನ್ನು ಹಮ್ಮಿಕೊಂಡು ನ್ಯಾಯ ದೊರಕಿಸಿಕೊಡಲು ಸಿದ್ಧವಿರುವುದಾಗಿ ತಿಳಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಗಳಿಸಿದ ನಂತರದಲ್ಲಿ ಇದುವರೆಗೂ ಬಡವರಿಗೆ ಮನೆ, ಗಂಗಾಕಲ್ಯಾಣ, ವಿಕಲಚೇತನರಿಗೆ, ವೃದ್ಧರಿಗೆ ಪಿಂಚಣಿ, ಸಂಧ್ಯಾಸುರಕ್ಷಾ, ವಿಧವಾ ವೇತನ ಮತ್ತಿತರ ಎಲ್ಲ ಯೋಜನೆಯನ್ನು ಸ್ಥಗಿತಗೊಳಿಸಿ ದರಿದ್ರ ಸರ್ಕಾರ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಗ್ಯಾರಂಟಿ ನೆಪದಲ್ಲಿ ಅಬಕಾರಿ ಇಲಾಖೆ ಮೂಲಕ ಹಣ ಕಿತ್ತುಕೊಳ್ಳಲು ಕುಡುಕರ ರಾಜ್ಯ ಮಾಡಲು ಸಿದ್ಧತೆ ನಡೆದಿದೆ. ವಿಧಾನಸಭೆ ಚುನಾವಣೆಗೆ 2 ವರ್ಷ ಉಳಿದ ಹಿನ್ನೆಲೆಯಲ್ಲಿ ಇದೀಗ ಎಚ್ಚೆತ್ತು ಪ್ರಜಾಸೇವೆ ಎಂಬ ಕಪಟ ನಾಟಕದ ಮೂಲಕ ಜನತೆಗೆ ಮಂಕುಬೂದಿ ಎರಚಲು ಸಿದ್ಧವಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಪಾಪದ ಕೊಡ ಭರ್ತಿಯಾಗಿದ್ದು, ಯಡಿಯೂರಪ್ಪನವರ ರೀತಿಯಲ್ಲಿಯೇ ಜನಸಾಮಾನ್ಯರ ಸಮಸ್ಯೆಗಳಿಗೆ ಹೋರಾಟದ ಮೂಲಕ 2028 ಕ್ಕೆ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದ ಅವರು ನಂತರದಲ್ಲಿ ತಾಲೂಕು ಜಿಲ್ಲೆ ರಾಜ್ಯದಲ್ಲಿ ಅಭಿವೃದ್ಧಿಯ ಗತವೈಭವ ಪುನಃ ಆರಂಭಗೊಳ್ಳಲಿದ್ದು ತಡೆಯಲು ಯಾರಿಂದಲೂ ಸಾದ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಣ ಸಚಿವರಾಗಿ ಕಸ್ತೂರಿ ರಂಗನ್ ವರದಿ ಬಗ್ಗೆ ಅಧ್ಯಯನವಿಲ್ಲದೆ ಹೋರಾಟ, ಪಾದಯಾತ್ರೆಯಿಂದ ನಗೆಪಾಟಲಿಗೀಡಾಗಬೇಡಿ ಎಂದು ಸಲಹೆ ನೀಡಿದ ಅವರು ಕಾಡಂಚಿನ ರೈತರ ಬಗ್ಗೆ ಅಧ್ಯಯನ ಮಾಡಿ ಬನ್ನಿ. ಬರಗಾಲದ ಬಗ್ಗೆ ಎಚ್ಚರಿಸಲು ಕೈಗೊಂಡ ಪಾದಯಾತ್ರೆಗೆ ಬೆಚ್ಚಿಬಿದ್ದು ಸರ್ಕಾರ ವಿಶೇಷ ಅಧಿವೇಶನ ಹಮ್ಮಿಕೊಂಡಿದೆ. ಸದನದ ಒಳಗೆ ಹೊರಗೆ ನಿಮ್ಮ ಪರವಾಗಿರುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮನೆಯಲ್ಲಿ ಕೂರುವ ಪ್ರಶ್ನೆ ಇಲ್ಲ. ಜನವಿರೋಧಿ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುವುದಾಗಿ ತಿಳಿಸಿದರು.
ಬಾಕ್ಸ್....ಮಧು ಬಂಗಾರಪ್ಪಗೆ ರಾಘವೇಂದ್ರ ನೇರ ಸವಾಲುಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಸಾಗುವಳಿದಾರರು, ಜೀತದಾಳುಗಳ ಪರವಾಗಿ ಸದನದಲ್ಲಿ ಕಣ್ಣೀರು ಹಾಕಿ ಹೋರಾಡಿದ ಯಡಿಯೂರಪ್ಪನವರ ಬಗ್ಗೆ ಜಿಲ್ಲಾ ಮಂತ್ರಿ ಅಸಹ್ಯವಾಗಿ ಟೀಕಿಸಿದ್ದು ಶಿಕಾರಿಪುರಕ್ಕೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯದ ಬಗ್ಗೆ ಪಟ್ಟಿ ತರುತ್ತೇನೆ. ನಿನ್ನ ತಂದೆ ಮುಖ್ಯಮಂತ್ರಿಯಾದ ಅವಧಿಯಲ್ಲಿ ಸೊರಬದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಪಟ್ಟಿ ತಂದು ಬಾ ಮಾತಾಡೋಣ ಎಂದು ಸವಾಲು ಹಾಕಿದರು.ಕೇವಲ ಆರಾಧನಾ ಜಪಬಿಟ್ಟು ನೀರಾವರಿ ಸಹಿತ ಅಭಿವೃದ್ಧಿ ಕಾರ್ಯದ ಬಗ್ಗೆ ಮಾತನಾಡಿ. ಈ ಬಾರಿ ಚುನಾವಣೆಯಲ್ಲಿ ಗೆದ್ದು ಬಾ ನೋಡೋಣ ಸೊರಬದಲ್ಲಿ ಮೂಡಿ ಕಚುವಾ ಏತ ನೀರಾವರಿ ಸಹಿತ ದಂಡಾವತಿ ಕೆರೆ ಉಳಿಸಲು ಯಡಿಯೂರಪ್ಪನವರ ಶ್ರಮವಿದ್ದು ಶಿಕಾರಿಪುರದ ಜಿಲ್ಲಾಸ್ಪತ್ರೆ ವಾಪಸ್ ಕಳುಹಿಸಲು ಸದನದಲ್ಲಿ ಭಾಷಣ ಮಾಡಿದ ನಿನಗೆ ತಾಲೂಕಿನಲ್ಲಿ ಮತ ಕೇಳುವ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ವಾಗ್ದಾಳಿ ನಡೆಸಿದರು. ನಂತರದಲ್ಲಿ ಪಂಪ್ ಸೆಟ್‌ಗೆ ಸಮರ್ಪಕ ವಿದ್ಯುತ್, ಏತ ನೀರಾವರಿಗೆ ವಿದ್ಯುತ್ ಸಹಿತ ಬರಗಾಲ ಪೀಡಿತ ತಾಲೂಕು ಎಂದು ಘೋಷಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಫೋಟೋ ಕಾಪ್ಟನ್— ಸಮರ್ಪಕ ವಿದ್ಯುತ್, ಬರಗಾಲ ಪೀಡಿತ ತಾಲೂಕು ಎಂದು ಘೋಷಿಸುವಂತೆ ಆಗ್ರಹಿಸಿ ಶುಕ್ರವಾರ ಶಿಕಾರಿಪುರ ತಹಸೀಲ್ದಾರ್ ಮೂಲಕ ಬಿಜೆಪಿ ರೈತ ಮೋರ್ಚಾ ವತಿಯಿಂದ ಮನವಿ ಸಲ್ಲಿಸಲಾಯಿತು.