ಕನ್ನಡ ನಾಡು-ನುಡಿ-ನೆಲ-ಜಲ ಜಾಗೃತಿಗೆ ಟೊಂಕ ಕಟ್ಟಿದ ಸಹೋದರರು!

KannadaprabhaNewsNetwork |  
Published : Dec 01, 2025, 02:45 AM IST
ಚಿತ್ರ : ನಟ ರವಿಚಂದ್ರನ್ ಅವರೊಂದಿಗೆ ಬಾರವಿ ಸಹೋದರರು.  | Kannada Prabha

ಸಾರಾಂಶ

ಪುಟ್ಟ ಜಿಲ್ಲೆ ಕೊಡಗಿನಲ್ಲಿ ಕನ್ನಡ ನಾಡು ನುಡಿ ನೆಲ ಜಲ ಸಂರಕ್ಷಣೆಗೆ ಮೂವರು ಸಹೋದರರು ಟೊಂಕ ಕಟ್ಟಿ ನಿಂತಿದ್ದಾರೆ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ, ಅರೆಭಾಷಿಕರು, ಕನ್ನಡ, ಮಲಯಾಳಂ, ತಮಿಳು, ತುಳು ಸೇರಿದಂತೆ ಬಹುಭಾಷಿಕರು ನೆಲೆವೀಡಾಗಿರುವ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಕನ್ನಡ ನಾಡು-ನುಡಿ-ನೆಲ-ಜಲ ಸಂರಕ್ಷಣೆಗೆ ಮೂವರು ಸಹೋದರರರು ಟೊಂಕ ಕಟ್ಟಿ ನಿಂತಿದ್ದಾರೆ.

ತಮ್ಮ ಶಾಲಾ ದಿನಗಳಿಂದಲೇ ‘ಇತರೆ ಭಾಷೆಗಳನ್ನು ಪ್ರೀತಿಸಿ, ಕನ್ನಡವನ್ನು ಪೋಷಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಕನ್ನಡದ ಪರ ಕೆಲಸ ಮಾಡುತ್ತಿದ್ದಾರೆ. ಸುಮಾರು 32 ವರ್ಷಗಳಿಂದ ಇವರ ಕನ್ನಡ ಸೇವೆ ನಿರಂತರವಾಗಿ ನಡೆಯುತ್ತಿದ್ದು, ಇದು ಕನ್ನಡಾಂಬೆಯ ಮೇಲಿಟ್ಟಿರುವ ಇವರ ಅಭಿಮಾನವನ್ನು ಎತ್ತಿ ತೋರಿಸುತ್ತಿದೆ.

ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್ ಹಾಗೂ ವಿಜೇಂದ್ರ ಪ್ರಸಾದ್ ಅವರೇ ಕನ್ನಡ ಪ್ರೀತಿಯ ಸಹೋದರರು. ಇವರು ಬಾರವಿ ಎಂಬ ಸಂಘವನ್ನು 1993ರಲ್ಲಿ ಸೋಮವಾರಪೇಟೆಯಲ್ಲಿ ಹುಟ್ಟುಹಾಕಿದ್ದು, ಜಿಲ್ಲೆಯಲ್ಲಿ ಕನ್ನಡ ನಾಡು, ನುಡಿ ರಕ್ಷಣೆಯೊಂದಿಗೆ ಅದರ ಹಿರಿಮೆಗಾಗಿ ಅಪಾರ ಕೊಡುಗೆ ನೀಡಿದ್ದಾರೆ.

ಸೋಮವಾರಪೇಟೆಯಲ್ಲಿ 1996ರಲ್ಲಿ ಕನ್ನಡಾಂಬೆಯ ಸುಂದರ ಪ್ರತಿಮೆ ನಿರ್ಮಿಸಿ, ನಟ ರವಿಚಂದ್ರನ್ ಅವರನ್ನು ಆಹ್ವಾನಿಸಿ ಅವರಿಂದ ಪ್ರತಿಮೆಯನ್ನು ಅನಾವರಣ ಮಾಡಿಸಿದ್ದಾರೆ. ಮಾರುಕಟ್ಟೆ ರಸ್ತೆ ಬಳಿ 2000ರಲ್ಲಿ ನಾಡಿನ‌ ವೀರ ಮಹಿಳೆ ಒನಕೆ ಓಬವ್ವ ಪ್ರತಿಮೆಯನ್ನು ನಿರ್ಮಾಣ ಮಾಡಿ ಆಗಿನ ಕಾನೂನು ಮಂತ್ರಿಯಾಗಿದ್ದ ಎಂ.ಸಿ.ನಾಣಯ್ಯ ಅವರಿಂದ ಅನಾವರಣಗೊಳಿಸಿದ‌ರು. ಪಂಚಾಯಿತಿ ರಸ್ತೆಯಲ್ಲಿ ಕಾವೇರಿ ಪ್ರತಿಮೆಯನ್ನು ಕೂಡ ಸ್ಥಾಪಿಸಿದ್ದಾರೆ. ಇವು ಇವರ ಕನ್ನಡ ಪ್ರೇಮವನ್ನು ಬಿಂಬಿಸುತ್ತಿದೆ.

ಈ ಸಹೋದರರು ಸೋಮವಾರಪೇಟೆಯ ಬಿ.ಪಿ.ನಾಣಯ್ಯ ಮತ್ತು ದಮಯಂತಿ ದಂಪತಿಯ ಪುತ್ರರು. ಅದೇ ಊರಿನ ತಮ್ಮ ದೊಡ್ಡಪ್ಪ ಹಾಗೂ ದೊಡ್ಡಮ್ಮ ಬಿ.ಟಿ.ಶೇಷಪ್ಪ ಮತ್ತು ಜಯಲಕ್ಷ್ಮೀ ಅವರ ಆಶ್ರಯದಲ್ಲಿ ಬೆಳೆದು, ಸಮಾಜ ಸೇವಕರಾಗಿ ಹಾಗೂ ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ನಂತರದಲ್ಲಿ ಕುಶಾಲನಗರಕ್ಕೆ ಬಂದು ತಮ್ಮ ವೈಯಕ್ತಿಕ ಹಣದೊಂದಿಗೆ ದಾನಿಗಳ ಸಹಕಾರ ಪಡೆದು ಹಲವಾರು ಕನ್ನಡಪರ ಕಾರ್ಯಕ್ರಮಗಳನ್ನು ನಡೆಸಿ ಜನಮನ್ನಣೆಗಳಿಸಿದ್ದಾರೆ.

ತಮ್ಮ ವೈಯಕ್ತಿಕ ಹಾಗೂ ದಾನಿಗಳ ಸಹಕಾರದೊಂದಿಗೆ 2013ರಲ್ಲಿ ಕೊಡಗಿನ ಹೆಬ್ಬಾಗಿಲು ಕುಶಾಲನಗರದ ಕೊಪ್ಪ ಬಳಿ ಕಾವೇರಿ ನದಿ ತಟದಲ್ಲಿ ಸುಮಾರು 50 ಲಕ್ಷ ರು. ವೆಚ್ಚದಲ್ಲಿ 11 ಅಡಿ ಎತ್ತರದ ಸುಂದರವಾದ ನಾಡಿನ‌ ಜೀವದಾತೆ ಕಾವೇರಿ ಪ್ರತಿಮೆ ನಿರ್ಮಿಸಿದ್ದಾರೆ. ಕಾವೇರಿ ತುಲಾ ಸಂಕ್ರಮಣ ಸಂದರ್ಭ ಕಾವೇರಿ ತೀರ್ಥವನ್ನು ತಲಕಾವೇರಿಯಿಂದ ತಂದು ಕಾವೇರಿ ಪ್ರತಿಮೆ ಬಳಿ ಇಟ್ಟು ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತದೆ. ಅಲ್ಲದೆ, ಆಗಮಿಸುವ ಭಕ್ತರಿಗೆ ಅನ್ನಸಂತರ್ಪಣೆ ಕೂಡ ನೆರವೇರಿಸಲಾಗುತ್ತದೆ.

ಸಾಧಕರಿಗೆ ಸನ್ಮಾನ:

ಚಿತ್ರನಟರಾದ ಡಾ. ಶಿವರಾಜ್ ಕುಮಾರ್, ದೊಡ್ಡಣ್ಣ, ರವಿಚಂದ್ರನ್, ಮುಖ್ಯಮಂತ್ರಿ ಚಂದ್ರು, ಸೃಜನ್ ಲೋಕೇಶ್, ಯೋಗಿ ಸೇರಿ ಹಲವರಿಗೆ ಕುಶಾಲನಗರದ ಕೊಪ್ಪ ಬಳಿಯಲ್ಲಿ ನಿರ್ಮಿಸಲಾಗಿರುವ ಕಾವೇರಿ ಪ್ರತಿಮೆ ಬಳಿ ಕಾರ್ಯಕ್ರಮ ಆಯೋಜಿಸಿ ಕಾವೇರಿ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಕಾವೇರಿ ಜಾಗೃತಿ:

ಇತ್ತೀಚೆಗೆ ನಾನಾ ಕಾರಣದಿಂದಾಗಿ ಕನ್ನಡ ನಾಡಿನ ಜೀವ ನದಿ ಕಾವೇರಿ ತನ್ನ ಹುಟ್ಟೂರಾದ ಕೊಡಗಿನಲ್ಲೇ ಕಲುಷಿತವಾಗುತ್ತಿದೆ. ಇದರಿಂದ ಕಾವೇರಿ ನೀರು ಕುಡಿಯಲು ಆರೋಗ್ಯಕರವಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಬಾರವಿ ಸಹೋದರರು ಕಾವೇರಿ ನದಿ ಸಂರಕ್ಷಣೆಯ ಬಗ್ಗೆ ಕೂಡ ಕಾಳಜಿಯಿಂದ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಕನ್ನಡದ ಮೇಲೆ ನಮಗೆ ಅಪಾರ ಪ್ರೀತಿ. ಕನ್ನಡ ಬಾವುಟದ ಬಗ್ಗೆ ಕೊಡಗಿನವರಿಗೆ ಗೊತ್ತಿಲ್ಲದ ದಿನಗಳಲ್ಲೂ ಕನ್ನಡ ಬಾವುಟವನ್ನು ಹೊಲಿಗೆ ಮಾಡಿಸಿ ಹಾರಾಟ ಮಾಡಿದ ದಿನಗಳಿವೆ. ಕನ್ನಡಾಂಬೆ, ಒನಕೆ ಓಬವ್ವ, ಕಾವೇರಿ ಪ್ರತಿಮೆಯನ್ನು ನಿರ್ಮಿಸಿ ಸಣ್ಣ ಕೊಡುಗೆ ನೀಡಿದ್ದೇವೆ. ಇದಕ್ಕೆ ಸಾರ್ವಜನಿಕರು ಹಾಗೂ ದಾನಿಗಳು ಕೂಡ ಅಪಾರ ಸಹಕಾರ ನೀಡಿದ್ದಾರೆ. ಕನ್ನಡಕ್ಕೆ ಎಷ್ಟು ದುಡಿದರೂ ಸಾಲದು. ಕನ್ನಡ ಭಾಷೆ ಕಡ್ಡಾಯ ಬಳಕೆಯ ಬಗ್ಗೆ ಕರ್ನಾಟಕ ಸರ್ಕಾರ ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕು.

। ಬಾರವಿ ಸಹೋದರರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ