ಕತ್ತಲೆ ತುಂಬಿದ ಸಂಸಾರಗಳಲ್ಲಿ ಬೆಳಕು ತಂದ ಧರ್ಮಸ್ಥಳ ಯೋಜನೆ: ಸದಾನಂದಾ ಬಂಗೇರ

KannadaprabhaNewsNetwork | Published : Nov 17, 2024 1:22 AM

ಸಾರಾಂಶ

ಚಿಕ್ಕಮಗಳೂರು, ಕತ್ತಲೆ ತುಂಬಿದ ಸಂಸಾರಗಳಲ್ಲಿ ಬೆಳಕು ನೀಡುವ ಮಹತ್ವದ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು ಮಾಡುತ್ತಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಹೇಳಿದ್ದಾರೆ.

ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕತ್ತಲೆ ತುಂಬಿದ ಸಂಸಾರಗಳಲ್ಲಿ ಬೆಳಕು ನೀಡುವ ಮಹತ್ವದ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು ಮಾಡುತ್ತಿವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಹೇಳಿದ್ದಾರೆ.

ನಗರದ ಬಸವನಹಳ್ಳಿಯ ಶ್ರೀ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ನಿಂದ ನಡೆದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಸೇವಾ ಕಾರ್ಯಕರ್ತರಿಗೆ ಏರ್ಪಡಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಸ್ಥಿತ್ವಕ್ಕೆ ಬಂದು 17 ವಸಂತಗಳು ಸಂದಿದ್ದು, ಜನರ ಸಹಕಾರದಿಂದ ಯಶಸ್ವಿಯಾಗಿ ಕೆಲಸ ಮಾಡುತ್ತಿವೆ. ಈ ಯೋಜನೆಯಿಂದ ಗ್ರಾಮೀಣ ಭಾಗದ ಮಹಿಳೆ ಯರಲ್ಲಿ ಉಳಿತಾಯದ ಮನೋಭಾವ ಜೊತೆಗೆ ಆತ್ಮಸ್ಥೈರ್ಯ ತುಂಬಿದ್ದು, ಈ ಯೋಜನೆಗಳು ಮಹಿಳೆಯರ ಸ್ವಾವಲಂಬಿ ಬದುಕಿಗೆ ಆಸರೆ ನೀಡಿವೆ ಎಂದರು.

ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಎಸ್. ಜಲಜಾಕ್ಷಿ ಸುಸ್ಥಿರ ಆರೋಗ್ಯ ಕಾಪಾಡು ವಲ್ಲಿ ಮಹಿಳೆಯರ ಪಾತ್ರ ಕುರಿತು ಮಾತನಾಡಿ, ಆರೋಗ್ಯ ಎನ್ನುವುದು ದಾನವೂ ಅಲ್ಲ, ಧರ್ಮವೂ ಅಲ್ಲ. ಆರೋಗ್ಯ ಕಾಪಾಡಲು ಯಾವುದೇ ಯೂನಿವರ್ಸಿಟಿಗಳಿಂದ ಪ್ರಮಾಣ ಪತ್ರವೂ ಬೇಕಾಗಿಲ್ಲ, ಸಾಮಾನ್ಯ ಜ್ಞಾನವಿದ್ದರೂ ಸಾಕು, ನಮ್ಮ ಆರೋಗ್ಯ ನಾವೇ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಡುವ ಬಿಪಿ, ಶುಗರ್, ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳನ್ನು ಆರಂಭದ ಹಂತದಲ್ಲೇ ಪತ್ತೆ ಹಚ್ಚಿ ಇವುಗಳ ಬಗ್ಗೆ ಎಚ್ಚರ ವಹಿಸಿದ್ದಲ್ಲಿ ಈ ಕಾಯಿಲೆ ತಡೆಗಟ್ಟಬಹುದು ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಲ್ಲವಿ ರವಿ ಅವರು, ಕುಟುಂಬಗಳ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳಲ್ಲಿ ಹೆಣ್ಣನ್ನು ವಿಲನ್‌ಗಳಾಗಿ ತೋರಿಸ ಲಾಗುತ್ತಿದೆ ಎಂದು ವಿಷಾದಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರು ಸಂಘಟಿತರಾಗಿ ಕೆಲಸ ಮಾಡುತ್ತಿದ್ದಾರೆಂದು ತಿಳಿಸಿದರು.

ಚಿಕ್ಕಮಗಳೂರಿನ ಮಹಿಳಾ ಉಪ ಆರಕ್ಷಕ ಠಾಣಾಧಿಕಾರಿ ಗಾಯಿತ್ರಿ ಮಾತನಾಡಿ, ಮಹಿಳೆಯರಿಗೆ ವಿವಿಧ ಆಮಿಷ ಒಡ್ಡಿ ಮೋಸ ಮಾಡುವಂತಹ ಜಾಲವೇ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುತ್ತಿದ್ದು, ಈ ಬಗ್ಗೆ ಮಹಿಳೆಯರು ಎಚ್ಚರ ವಹಿಸುವ ಜೊತೆಗೆ ಮೊಬೈಲ್ ಜಾಲಕ್ಕೆ ಒಳಗಾಗಿರುವ ಮಕ್ಕಳ ಚಲನ ವಲನಗಳ ಬಗ್ಗೆಯೂ ಪೋಷಕರು ಎಚ್ಚರ ವಹಿಸಬೇಕಾಗಿದೆ ಎಂದರು.ಶ್ರೀ ಬ್ರಹ್ಮಕುಮಾರಿ ಈಶ್ವರಿಯ ರಾಜಯೋಗಿ ಶಿಕ್ಷಕಿ ಬಿ.ಕೆ. ಭಾಗ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಜಾಗೃತಿ ವೇದಿಕೆ ಸದಸ್ಯೆ ನಜ್ಮಾ ಆಲಿ, ತಾಲೂಕು ಯೋಜನಾಧಿಕಾರಿ ಕೊರಗಪ್ಪ ಪೂಜಾರಿ ಸ್ವಾಗತಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮೇಲ್ವಿಚಾರಕರು ಸೇರಿದಂತೆ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. 16 ಕೆಸಿಕೆಎಂ 1ಚಿಕ್ಕಮಗಳೂರಿನ ಶ್ರೀ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಮಂದಿರದಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಯನ್ನು ಪಲ್ಲವಿ ರವಿ ಉದ್ಘಾಟಿಸಿದರು. ಸದಾನಂದ ಬಂಗೇರ, ಜಲಜಾಕ್ಷಿ, ಗಾಯತ್ರಿ, ಬಿ.ಕೆ. ಭಾಗ್ಯ ಇದ್ದರು.

Share this article