ಕನ್ನಡಪ್ರಭ ವಾರ್ತೆ ನಾಗಮಂಗಲ
ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ ಬಿಎಸ್‌ಎಫ್ ಯೋಧ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಬಿ.ಮಲ್ಲೇನಹಳ್ಳಿಯ ಲೇಟ್ ಪ್ರೇಮಮ್ಮ ಮತ್ತು ಎಸ್.ಎಚ್.ಸೋಮಶೇಖರಗೌಡ ದಂಪತಿಯ ಪುತ್ರ ಎಂ.ಎಸ್.ಗುಣೇಶ್ (40) ಹೃದಯಾಘಾತದಿಂದ ಸಾವನ್ನಪ್ಪಿರುವ ಯೋಧ.
ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ರಜೆ ಮೇಲೆ ಸ್ವಗ್ರಾಮಕ್ಕೆ ಬಂದಿದ್ದ ಗುಣೇಶ್, ಸೋಮವಾರ ಬೆಳಗ್ಗೆ ಕಾರ್ಯನಿಮಿತ್ತ ಸ್ನೇಹಿತರೊಂದಿಗೆ ತಮ್ಮದೇ ಕಾರಿನಲ್ಲಿ ಮಂಡ್ಯಕ್ಕೆ ಹೋಗಿ ವಾಪಸ್ ಬರುವಾಗ ರಾತ್ರಿಯಾಗಿದ್ದರಿಂದ ಬಿಂಡಿಗನವಿಲೆ ಗ್ರಾಮದ ನಾರಾಯಣಗೌಡರ ರಾಗಿಮಿಲ್ ಬಳಿ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದ ಸ್ನೇಹಿತರನ್ನೆಲ್ಲಾ ಬೀಳ್ಕೊಟ್ಟು ನಂತರ ಕೆಲ ಹೊತ್ತು ವಿಶ್ರಾಂತಿ ಪಡೆಯಲು ಕಾರಿನಲ್ಲಿಯೇ ನಿದ್ರೆಗೆ ಜಾರಿದ್ದರು ಎನ್ನಲಾಗಿದೆ.ಮಂಗಳವಾರ ಬೆಳಗ್ಗೆಯಾದರೂ ಕಾರಿನಲ್ಲಿಯೇ ಮಲಗಿದ್ದ ಸ್ಥಿತಿಯಲ್ಲಿ ಕಂಡುಬಂದ ಯೋಧ ಗುಣೇಶ್‌ನನ್ನು ನೋಡಿದ ಸ್ಥಳೀಯರು ಕಾರಿನ ಬಾಗಿಲು ತೆಗೆದು ಎಬ್ಬಿಸಲು ಪ್ರಯತ್ನಿಸಿದರಾದರೂ ಎಚ್ಚರಗೊಳ್ಳದ ಹಿನ್ನೆಲೆಯಲ್ಲಿ ತಕ್ಷಣ ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರಬಹುದೆಂದು ವೈದ್ಯರು ಹೇಳಿದ್ದಾರೆ.
ನಂತರ ಇದೇ ಆಸ್ಪತ್ರೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಗುಣೇಶ್ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು. ಮೃತ ಗುಣೇಶ್‌ಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆಂದು ತಿಳಿದುಬಂದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗೌರವ ವಂದನೆ :
ಯೋಧ ಗುಣೇಶ್ ಮೃತಪಟ್ಟಿರುವ ಮಾಹಿತಿ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಜಿ.ಆದರ್ಶ, ಸಿಪಿಐ ನಿರಂಜನ್ ಮತ್ತು ಬಿಎಸ್‌ಎಫ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿಕೊಟ್ಟು ಮೃತ ಗುಣೇಶ್ ಅವರ ಅಂತಿಮದರ್ಶನ ಪಡೆದು ಗೌರವ ನಮನ ಸಲ್ಲಿಸಿದರು.ಮೃತ ಯೋಧನ ಗೌರವಾರ್ಥ ಬಿಎಸ್‌ಎಫ್ ಯೋಧರು ಮತ್ತು ಸ್ಥಳೀಯ ಪೊಲೀಸರು ಕುಶಾಲ ತೋಪು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದ ಬಳಿಕ ಒಕ್ಕಲಿಗ ಸಂಪ್ರದಾಯದಂತೆ ಗ್ರಾಮದ ಹೊರವಲಯದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.