ಕನ್ನಡಪ್ರಭ ವಾರ್ತೆ ಮಂಗಳೂರು
ನಷ್ಟದಲ್ಲಿರುವ ಬಿಎಸ್ಸೆನ್ನೆಲ್ ಸಂಚಾರ ನಿಗಮ್ ಲಿಮಿಟೆಡ್ ಸಂಸ್ಥೆ ತನ್ನ ಆದಾಯ ಹೆಚ್ಚಿಸಿಕೊಳ್ಳಲು, ದಶಕಗಳ ಹಿಂದೆ ತಾನು ಖರೀದಿ ಮಾಡಿದ ಆಸ್ತಿಗಳ ಮಾರಾಟಕ್ಕೆ ಮುಂದಾಗಿದೆ.ಮೊದಲ ಹಂತದಲ್ಲಿ ನಗರದ ಕದ್ರಿ ಪಾರ್ಕ್ ಬಳಿ ಇರುವ ಬಿಎಸ್ಸೆನ್ನೆಲ್ ಸ್ಟೋರ್ ಯಾರ್ಡ್‌ನ 2 ಎಕರೆ ಜಾಗ ಮಾರಾಟ ಮಾಡಲು ಉದ್ದೇಶಿಸಿದ್ದು, ಅದಕ್ಕಾಗಿ ಬಿಡ್ ಆಹ್ವಾನಿಸಿದೆ. ಬಿಡ್ ಸಲ್ಲಿಕೆಗೆ ಜು.1 ಕೊನೆ ದಿನವಾಗಿದೆ ಎಂದು ಬಿಎಸ್ಸೆನ್ನೆಲ್ ಕರ್ನಾಟಕ ಸರ್ಕಲ್‌ನ ಸಿಜಿಎಂ ಉಜ್ವಲ್ ಗುಲ್ಹಾನೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
8094 ಚದರ ಮೀಟರ್ ವಿಸ್ತೀರ್ಣ ಇರುವ ಸ್ಟೋರ್ ಯಾರ್ಡ್ ಜಾಗದ ಮೀಸಲು ಬೆಲೆ 39 ಕೋಟಿ ರು. ಆಗಿದೆ ಎಂದು ಅವರು ಮಾಹಿತಿ ನೀಡಿದರು.ಇನ್ನಷ್ಟು ಆಸ್ತಿ ಮಾರಾಟ: ಎರಡನೇ ಹಂತದಲ್ಲಿ ಬಜಾಲ್‌ನಲ್ಲಿರುವ 30 ಸೆಂಟ್ಸ್ ವಿಸ್ತೀರ್ಣದ ಬಿಟಿಎಸ್ ಸೈಟ್, ಕುಂಜತ್ತಬೈಲ್‌ನಲ್ಲಿರುವ 20,592 ಚದರ ಮೀಟರ್ ವಿಸ್ತೀರ್ಣದ ಮೈಕ್ರೋವೇವ್ ಸ್ಟಾಫ್ ಕ್ವಾಟ್ರಸ್ ಜಾಗ, ಬೋಳಾರ ಟೆಲಿಫೋನ್ ಎಕ್ಸ್‌ಚೇಂಜ್ ಕಂಪೌಂಡ್ 13 ಸೆಂಟ್ಸ್ ಜಾಗ ಮಾರಾಟಕ್ಕೆ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದರು.ಕರಾವಳಿಯಾದ್ಯಂತ ಇನ್ಮುಂದೆ 4ಜಿ: ಭಾರತ ಸರ್ಕಾರದ 4ಜಿ ಸ್ಯಾಚುರೇಶನ್ ಯೋಜನೆಯನ್ನು ಬಿಎಸ್ಸೆನ್ನೆಲ್ ಕೈಗೆತ್ತಿಕೊಂಡಿದ್ದು, ಯಾವುದೇ ಮೊಬೈಲ್ ನೆಟ್ವರ್ಕ್ ಇಲ್ಲದ ಹಳ್ಳಿಗಳಲ್ಲೂ ಬಿಎಸ್ಸೆನ್ನೆಲ್ ಟವರ್ ಅಳವಡಿಸುವ ಯೋಜನೆ ಕಾರ್ಯಾರಂಭಗೊಂಡಿದೆ. ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೊಬೈಲ್ ಸಂಪರ್ಕವೇ ಇಲ್ಲದ 173 ಹಳ್ಳಿಗಳಿಗೆ ನೇರವಾಗಿ 4ಜಿ ಸಂಪರ್ಕ ನೀಡಲಾಗುವುದು. ದಕ್ಷಿಣ ಕನ್ನಡದ ಎಳನೀರು ಎಂಬ ಕೊನೇ ಗ್ರಾಮಕ್ಕೂ 4ಜಿ ಸಂಪರ್ಕ ನೀಡಲಾಗುತ್ತದೆ ಎಂದು ಉಜ್ವಲ್ ಗುಲ್ಹಾನೆ ತಿಳಿಸಿದರು.
ಬಿಎಸ್ಸೆನ್ನೆಲ್ ಇಡೀ ಭಾರತದಲ್ಲಿ 4ಜಿ ನೆಟ್ವರ್ಕ್ ಅನುಷ್ಠಾನಗೊಳಿಸಲು ಯೋಜಿಸಿದ್ದು, ಮಂಗಳೂರು ವೃತ್ತ (ದ.ಕ., ಉಡುಪಿ, ಉ.ಕ.)ದಲ್ಲಿ ಈಗಾಗಲೇ ಕೆಲಸ ಆರಂಭಿಸಿದೆ. ಮಂಗಳೂರು ಕಾರ್ಯಕ್ಷೇತ್ರದಲ್ಲಿ ಒಟ್ಟು 610 ಟವರ್‌ಗಳನ್ನು ಅಳವಡಿಸಲು ಯೋಜಿಸಲಾಗಿದೆ. ಇದರಲ್ಲಿ ದ.ಕ. ಜಿಲ್ಲೆಯಲ್ಲಿ 412, ಉಡುಪಿಯಲ್ಲಿ 198 ಟವರ್‌ಗಳನ್ನು ಅಳವಡಿಸಲಾಗುವುದು ಎಂದರು.ಬಿಎಸ್ಸೆನ್ನೆಲ್ ನವದೆಹಲಿಯ ಸಿಜಿಎಂ ಪರಮೇಶ್ವರಿ ದಯಾಳ್, ಮಂಗಳೂರಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಎಸ್.ಜಿ. ದೇವಾಡಿಗ ಇದ್ದರು.