ಕನ್ನಡಪ್ರಭ ವಾರ್ತೆ ರಾಮನಗರ
ಆ ಅಭ್ಯರ್ಥಿ ಮತ್ಯಾರು ಅಲ್ಲ ಚಿನ್ನಪ್ಪ ವೈ.ಚಿಕ್ಕಹಾಗಡೆ. ಆನೆ ಗುರುತುಳ್ಳ ಬಹುಜನ ಸಮಾಜ ಪಾರ್ಟಿಯಿಂದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ. ಮೆರವಣಿಗೆಗೆ ಜೀವಂತ ಆನೆಯನ್ನು ಬಳಸಿಕೊಳ್ಳಲು ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ ಎಂಬ ಕಾರಣಕ್ಕೆ ಕೃತಕ ಆನೆ ಮೇಲೇರಿ ಬಂದು ನಾಮಪತ್ರ ಸಲ್ಲಿಸಿ ತಮ್ಮ ಆಸೆ ಈಡೇರಿಸಿಕೊಂಡರು.
ಆನೆ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಚಿಹ್ನೆ. ನಗರದ ಪಿಡಬ್ಲ್ಯೂಡಿ ವೃತ್ತದಲ್ಲಿ ಕೃತಕ ಆನೆಯ ಮೇಲೇರಿದ ಚಿನ್ನಪ್ಪರವರು ಬೆಂಗಳೂರು - ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣಕ್ಕೆ ಆಗಮಿಸಿದರು.ಇವರಿಗೆ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ರಾಜ್ಯ ಕಾರ್ಯದರ್ಶಿ ಎಂ.ನಾಗೇಶ್ ಸೇರಿದಂತೆ ಹಲವರು ಸಾಥ್ ನೀಡಿದರು. ನೂರಾರು ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಕೃತಕ ಆನೆಯೊಂದಿಗೆ ಹೆಜ್ಜೆ ಹಾಕಿದರು. ಚಿನ್ನಪ್ಪರವರ ವಿಭಿನ್ನತೆ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿತ್ತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಿನ್ನಪ್ಪ ವೈ.ಚಿಕ್ಕಹಾಗಡೆ, ಈ ಭಾಗದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಅಧಿಕಾರ ನಡೆಸಿವೆ. ಆದರೆ, ಈ ಭಾಗದ ಜನತೆಗೆ ಕನಿಷ್ಠ ಮೂಲ ಸೌಕರ್ಯವನ್ನು ಒದಗಿಸುವಲ್ಲಿ ಮೂರು ಪಕ್ಷಗಳು ವಿಫಲವಾಗಿವೆ. ಕಳೆದ 10 ವರ್ಷದಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದ ಡಿ.ಕೆ.ಸುರೇಶ್ ಯಾವುದೇ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
ಎಲ್ಲೆಡೆ ಇರುವಂತೆ ಕುಟುಂಬ ರಾಜಕಾರಣ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿಯೂ ಇದೆ. ಕಾಂಗ್ರೆಸ್ ನಿಂದ ಉಪಮುಖ್ಯಮಂತ್ರಿ ಸಹೋದರ, ಜೆಡಿಎಸ್ - ಬಿಜೆಪಿ ಮೈತ್ರಿಕೂಟದಿಂದ ಮಾಜಿ ಪ್ರಧಾನಿಗಳ ಅಳಿಯ ಕಣದಲ್ಲಿದ್ದಾರೆ. ಈ ಕುಟುಂಬ ರಾಜಕಾರಣ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಕುಟುಂಬ ರಾಜಕಾರಣಗಳನ್ನು ಕೊನೆಗಾಣಿಸಲು ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಸೇವೆ ಮಾಡುವವರಿಗೆ ಅವಕಾಶ ಮಾಡಿಕೊಡಬೇಕು ಎಂದು ಚಿನ್ನಪ್ಪ ಮನವಿ ಮಾಡಿದರು.
ರಾಜ್ಯದಲ್ಲಿ 28 ಸಂಸದರಿದ್ದಾರೆ. ಆದರೆ, ರಾಜ್ಯದ ಜಲ್ವಂತ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಯಾರೊಬ್ಬರು ಧ್ವನಿ ಎತ್ತಲೇ ಇಲ್ಲ. ಅದರಲ್ಲೂ ಕಾವೇರಿ ಸಮಸ್ಯೆ, ಕೈಗಾರಿಕೆ, ಶಿಕ್ಷಣ ಸೇರಿದಂತೆ ಯಾವುದಕ್ಕೂ ಚಕಾರ ಎತ್ತುತ್ತಿಲ್ಲ. ಕಾಂಗ್ರೆಸ್ 55 ವರ್ಷ ಆಳ್ವಿಕೆ ಮಾಡಿದೆ. ಬಿಜೆಪಿ 10 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದೆ. ಆದರೂ, ದೇಶದ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಕಾಂಗ್ರೆಸ್, ಬಿಜೆಪಿ ಹಾಗೂ ಇತರೆ ಪಕ್ಷದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಯಾಯ ಪಕ್ಷದಿಂದ ಬಿ ಫಾರಂ ಪಡೆಯಲು ಕೋಟ್ಯಂತರ ರುಪಾಯಿ ಲಂಚ ಕೊಡಬೇಕು ಎಂದು ಆರೋಪಿಸಿದರು. ಈ ವೇಳೆ ಪಕ್ಷದ ಮುಖಂಡರಾದ ಅನ್ನದಾನಪ್ಪ, ಮುರುಗೇಶ್ ಇತರರಿದ್ದರು.ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಲಾಢ್ಯ ಕುಟುಂಬಗಳ ನಡುವೆ ಸಾಮಾನ್ಯ ಕಾರ್ಯಕರ್ತರೊಬ್ಬರು ಸ್ಪರ್ಧೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಹಣ ಬಲ ಮತ್ತು ಜಾತಿ ಬಲದ ಮೇಲೆ ಚುನಾವಣಾ ಆಯೋಗದ ಕಾನೂನು ಉಲ್ಲಂಘಿಸಿ ಮತದಾರರಿಗೆ ಆಮಿಷವೊಡ್ಡಿ ಎರಡು ಪಕ್ಷಗಳು ಚುನಾವಣೆ ನಡೆಸುತ್ತಿದ್ದಾರೆ.