ಸಿಎಂ ಮಾತಿಗೂ ಬೆಲೆ ನೀಡದ ಬಿಎಸ್‌ಪಿಎಲ್ ಕಂಪನಿ

KannadaprabhaNewsNetwork | Published : May 5, 2025 12:46 AM

ಸಾರಾಂಶ

ಸಿದ್ದರಾಮಯ್ಯ ಎಸ್‌ಪಿ, ಡಿಸಿ ಅವರಿಗೆ ಖುದ್ದು ಕರೆ ಮಾಡಿ ಕೂಡಲೇ ಕಾಮಗಾರಿ ಸ್ಥಗಿತ ಮಾಡಿಸಿ ಎಂದು ಆದೇಶಿಸಿದ್ದರು.

ಕೊಪ್ಪಳ: ಕೊಪ್ಪಳ ಬಳಿ ತಲೆ ಎತ್ತಲಿರುವ ₹ 54 ಸಾವಿರ ಕೋಟಿ ವೆಚ್ಚದ ಬೃಹತ್ ಕಾರ್ಖಾನೆ ಸ್ಥಾಪಿಸುವುದಕ್ಕೆ ಸದ್ಯಕ್ಕೆ ಬ್ರೇಕ್ ಹಾಕಿ, ಸಿಎಂ ಸಿದ್ದರಾಮಯ್ಯ ಮೌಖಿಕ ಆದೇಶದ ಮೇಲೆ ಅಪರ ಜಿಲ್ಲಾಧಿಕಾರಿ ಲಿಖಿತ ಆದೇಶ ಮಾಡಿದ್ದರೂ ಬಿಎಸ್‌ಪಿಎಲ್ ಕಂಪನಿ ಸದ್ದಿಲ್ಲದೆ ಕಾಮಗಾರಿ ನಡೆಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಗವಿಸಿದ್ಧೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆದ ಹೋರಾಟದ ವೇಳೆಯಲ್ಲಿ ಶಾಸಕರು, ಸಚಿವರಿಗೆ ತಾಕೀತು ಮಾಡಿ, ಬಿಎಸ್‌ಪಿಎಲ್ ಕಾರ್ಖಾನೆ ಕೊಪ್ಪಳ ಬಳಿ ತಲೆ ಎತ್ತದಂತೆ ಮಾಡಿ ಎಂದಿದ್ದರು.

ಅದರಂತೆ ಜಿಲ್ಲೆಯ ಜನಪ್ರತಿನಿಧಿಗಳು ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವೊಲಿಸಿತ್ತು. ಈ ವೇಳೆಯಲ್ಲಿ ಸಿದ್ದರಾಮಯ್ಯ ಎಸ್‌ಪಿ, ಡಿಸಿ ಅವರಿಗೆ ಖುದ್ದು ಕರೆ ಮಾಡಿ ಕೂಡಲೇ ಕಾಮಗಾರಿ ಸ್ಥಗಿತ ಮಾಡಿಸಿ ಎಂದು ಆದೇಶಿಸಿದ್ದರು.

ಇದಾದ ಮೇಲೆಯೂ ಕಾಮಗಾರಿ ಮುಂದುವರಿಸಿದ ಪರಿಣಾಮ ಮಾಧ್ಯಮಗಳಲ್ಲಿ ವರದಿಯಾದ ಮೇಲೆ ಅಪರ ಜಿಲ್ಲಾಧಿಕಾರಿ ಬಿಎಸ್‌ಪಿಎಲ್ ಕಾರ್ಖಾನೆ ಕಾಮಗಾರಿ ಸ್ಥಗಿತ ಮಾಡುವಂತೆ ಲಿಖಿತ ಆದೇಶ ಮಾಡಿದ್ದರಲ್ಲದೆ, ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು.

ಆದರೆ, ಈಗ ಪುನಃ ಬಿಎಸ್‌ಪಿಎಲ್ ಕಂಪನಿ ಕಾರ್ಖಾನೆಯ ನಿಗದಿತ ಸ್ಥಳದಲ್ಲಿ ಕಾಮಗಾರಿ ಪ್ರಾರಂಭಿಸಿದೆ. ಅದರಲ್ಲೂ ತಡರಾತ್ರಿಯಲ್ಲಿಯೇ ಹೆಚ್ಚು ಕಾಮಗಾರಿ ಕೈಗೊಳ್ಳುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕೇಂದ್ರ ಸರ್ಕಾರದ ಪರಿಸರ ಇಲಾಖೆಯ ಅನುಮತಿ ನೀಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬಿಎಸ್‌ಪಿಎಲ್ ಕಂಪನಿ ಅಧಿಕಾರಿಗಳು ಹೇಳಿದ್ದರು. ಆದರೂ ಸರ್ಕಾರ ಮಾತ್ರ ಸ್ಪಷ್ಟನೆ ನೀಡಿಲ್ಲ. ಇದು ಸ್ಥಳೀಯರ ಅಸಮಧಾನ ಹೆಚ್ಚಿಸಿದೆ.

ಮುಖ್ಯಮಂತ್ರಿ ಆದೇಶ ಪಾಲನೆ ಮಾಡಬೇಕಾದ ಜಿಲ್ಲಾಡಳಿತ, ತನಗೂ ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದೆ. ಜಿಲ್ಲಾಡಳಿತ ಭವನದ ಪಕ್ಕದಲ್ಲಿಯೇ ತಾವೇ ಮಾಡಿದ ಆದೇಶವನ್ನು ಉದ್ಧಟತನದಿಂದ ಉಲ್ಲಂಘನೆ ಮಾಡುತ್ತಿದ್ದರೂ, ಕಾರ್ಖಾನೆ ಸ್ಥಾಪಿಸುವ ಕಾಮಗಾರಿ ತಡೆಯುವ ಪ್ರಯತ್ನ ಮಾಡದೆ ಇರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಬಾರದ ಸಚಿವರು:

ವಿಧಾನಸಭೆ ಮತ್ತು ವಿಧಾನಪರಿಷತ್ ಸದನದಲ್ಲಿಯೇ ಬಿಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಎಂ.ಬಿ. ಪಾಟೀಲ್, ಸ್ಥಳೀಯರ ಸಮ್ಮತಿ ಮತ್ತು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಒಪ್ಪಿಗೆ ಇಲ್ಲದೆ ಕಾರ್ಖಾನೆ ಪ್ರಾರಂಭಿಸುವುದಕ್ಕೆ ಅವಕಾಶ ನೀಡುವುದಿಲ್ಲ. ಈ ಕುರಿತು ಕೊಪ್ಪಳಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚೆ ಮಾಡುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಸಚಿವ ಎಂ.ಬಿ. ಪಾಟೀಲ್ ಕೊಪ್ಪಳ ಜಿಲ್ಲೆಗೆ ಬಂದಿಲ್ಲ.

ಈ ನಡುವೆ ಹೋರಾಟ ತೀವ್ರಗೊಳಿಸಲು ಕೊಪ್ಪಳ ಬಚಾವೋ ಆಂದೋಲನ ಸಮಿತಿ ನಿರ್ಧರಿಸಿದೆ. ಯಾವುದೇ ಕಾರಣಕ್ಕೂ ನಾವು ಕೊಪ್ಪಳ ಬಳಿ ಕಾರ್ಖಾನೆ ಸ್ಥಾಪಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

Share this article