ಬಿಎಸ್‌ವೈ, ಮಕ್ಕಳು, ರಾಷ್ಟ್ರ ನಾಯಕರ ವಿರುದ್ಧ ಮಾತಾಡಿಲ್ಲ ಅಂತ ಗಂಟೆ ಹೊಡೀರಿ

KannadaprabhaNewsNetwork |  
Published : Oct 04, 2024, 01:05 AM ISTUpdated : Oct 04, 2024, 01:06 AM IST
ಕ್ಯಾಪ್ಷನಃ3ಕೆಡಿವಿಜಿ46ಃದಾವಣಗೆರೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ನಮ್ಮ ಪಕ್ಷದ ಯಡಿಯೂರಪ್ಪ, ಅವರ ಮಕ್ಕಳ ವಿರುದ್ಧ ಹಾಗೂ ರಾಷ್ಟ್ರ ನಾಯಕರ ವಿರುದ್ಧ ಮಾತನಾಡಿಲ್ಲ ಎನ್ನುವುದಾದರೆ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನಕ್ಕೆ ಬಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಗಂಟೆ ಹೊಡೆಯಲಿ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ದಾವಣಗೆರೆಯಲ್ಲಿ ಸವಾಲು ಹಾಕಿದ್ದಾರೆ.

- ರೇಣುಕಾಚಾರ್ಯಗೆ ಮುಖಂಡ ಯಶವಂತ ರಾವ್‌ ಜಾಧವ್‌ ಸವಾಲು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ನಮ್ಮ ಪಕ್ಷದ ಯಡಿಯೂರಪ್ಪ, ಅವರ ಮಕ್ಕಳ ವಿರುದ್ಧ ಹಾಗೂ ರಾಷ್ಟ್ರ ನಾಯಕರ ವಿರುದ್ಧ ಮಾತನಾಡಿಲ್ಲ ಎನ್ನುವುದಾದರೆ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನಕ್ಕೆ ಬಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಗಂಟೆ ಹೊಡೆಯಲಿ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಸವಾಲು ಹಾಕಿದರು.

ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಅವರ ದಾವಣಗೆರೆ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಒಂದು ಕಾಲದಲ್ಲಿ ನಾನು ಯಡಿಯೂರಪ್ಪ ಮಾನಸ ಪುತ್ರ ಎಂದು ತಾವೇ ಹೇಳಿಕೊಳ್ಳುತ್ತಿದ್ದಿರಿ. ಆದರೆ, ನಿಮಗೆ ಅಧಿಕಾರ ಸಿಗದ ಕಾರಣ ಯಡಿಯೂರಪ್ಪರ ವಿರುದ್ಧವೇ ತಿರುಗಿಬಿದ್ದು, ಅಪ್ಪ-ಮಕ್ಕಳ ಬಂಡವಾಳ ಬಯಲು ಮಾಡುತ್ತೇನೆ ಎಂದು ಹೇಳಿಕೆ ಕೊಟ್ಟಿದಿರಿ. ರಾಷ್ಟ್ರ ನಾಯಕರಾದ ನರೇಂದ್ರ ಮೋದಿ, ಬಿ.ಎಲ್.ಸಂತೋಷ್ ಸೇರಿದಂತೆ ಇತರರ ವಿರುದ್ಧವೂ ಮಾತನಾಡಿದ್ದೀರಿ. ಇದು ಸುಳ್ಳು ಎನ್ನುವುದಾದರೆ ನಗರದೇವತೆ ದುರ್ಗಾಂಬಿಕಾ ದೇವಸ್ಥಾನಕ್ಕೆ ಬಂದು ಗಂಟೆ ಹೊಡೆಯಿರಿ. ಜಿ.ಎಂ. ಸಿದ್ದೇಶ್ವರ ವಿರುದ್ಧ ಮಾತನಾಡುವ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಶಿವಯೋಗಿ ಸ್ವಾಮಿ ಎರಡು ವರ್ಷ ಪಕ್ಷದ ಕಚೇರಿಗೇ ಬರಲಿಲ್ಲ. ಯಡಿಯೂರಪ್ಪ ವಿರುದ್ಧವೇ ರಾಯಣ್ಣ ಬ್ರಿಗೇಡ್ ಕಟ್ಟಲು ಮುಂದಾದವರು ನೀವು ಟೀಕಿಸಿದರು.

ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರು ಹಿರಿಯ ಮುತ್ಸದ್ಧಿ ರಾಜಕಾರಣಿ. ಅವರು ಯೋಚನೆ ಮಾಡಿ ಮಾತನಾಡುತ್ತಾರೆ. ಆದರೆ, ಈ ರೆಬಲ್ ಟೀಂ ಅವರ ಮನೆಗೆ ಹೋಗಿ ಅವರನ್ನು ಮುಂದೆ ಇಟ್ಟುಕೊಂಡು ಅವರಿಂದ ಬಲವಂತವಾಗಿ ಜಿ.ಎಂ. ಸಿದ್ದೇಶ್ವರ್ ವಿರುದ್ಧ ಮಾತನಾಡಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಪಕ್ಷದ ಮುಖಂಡರಾದ ಬಿ.ಎಸ್. ಜಗದೀಶ್, ರಾಜನಹಳ್ಳಿ ಶಿವಕುಮಾರ, ಎ.ವೈ.ಪ್ರಕಾಶ, ಶಿವಕುಮಾರ, ಹನುಮಂತಪ್ಪ ಇತರರು ಇದ್ದರು.

- - -

ಟಾಪ್‌ ಕೋಟ್‌ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ಅಭ್ಯರ್ಥಿ ಸೋಲಿಸಿದರು. ರೇಣುಕಾಚಾರ್ಯ ಮತ್ತು ಅವರ ಬಣವೇ ಸೋಲಿಗೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಚುನಾವಣೆಯಲ್ಲಿ ಗಾಯತ್ರಿ ಸಿದ್ದೇಶ್ವರ ಸೋತಿದ್ದಕ್ಕೆ ಬೇಸರ ಆಗುವುದಕ್ಕಿಂತ ನಮ್ಮವರೇ ಸೋಲಿಸಿದರು ಎಂಬ ಕಾರಣಕ್ಕೆ ಸಿದ್ದೇಶ್ವರ ಅವರಿಗೆ ನೋವು ತಂದಿದೆ. ಇದೇ ವಿಚಾರ ಅವರಿಗೆ ಕಾಡುತ್ತಿರಬಹುದು

- ಬಿ.ಪಿ.ಹರೀಶ್‌, ಶಾಸಕ, ಹರಿಹರ ಕ್ಷೇತ್ರ

- - -

-3ಕೆಡಿವಿಜಿ46ಃ:

ದಾವಣಗೆರೆಯಲ್ಲಿ ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ ನಿವಾಸದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್