ಕನ್ನಡಪ್ರಭ ವಾರ್ತೆ ತುಮಕೂರುರಾಜ ಸಿದ್ದಾರ್ಥ ಕಪಿಲ ವಸ್ತುವಿನಲ್ಲಿ ಹುಣ್ಣಿಮೆ ದಿನದಂದು ಮಾಯದೇವಿಯ ಗರ್ಭದಲ್ಲಿ ಜನಿಸಿದನು. ಮನುಷ್ಯನ ದುಖಃಕ್ಕೆ ಮತ್ತು ಸಾವಿಗೆ ಉತ್ತರ ಹುಡುಕಲು ರಾಜನಾದ ಸಿದ್ದಾರ್ಥನು ಸನ್ಯಾಸಿಯಾಗಿ ವೈರಾಗ್ಯವನ್ನು ಸ್ವೀಕರಿಸಿ, ಮನುಷ್ಯ ಜೀವನದ ಅವಸ್ಥೆಗಳನ್ನೆಲ್ಲಾ ತಿಳಿದು ಸಂಕಟಗಳಿಗೆ ಕಾರಣಗಳು ಮತ್ತು ಇದರಿಂದ ಹೊರಬರುವ ದಾರಿಗೆ ಜ್ಞಾನವನ್ನು ಪಡೆದ ದಿನವನ್ನು ಬುದ್ಧ ಪೂರ್ಣಿಮೆಯಾಗಿ ಆಚರಿಸಲಾಗುತ್ತದೆ ಎಂದು ಸ್ಲಂ ಜನಾಂದೋಲನ ಸಂಚಾಲಕ ಎ.ನರಸಿಂಹಮೂರ್ತಿ ಹೇಳಿದರು.
ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಆಯೋಜಿಸಿದ್ದ ತುಮಕೂರು ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಪೂರ್ವಭಾವಿ ಸಭೆ ಉದ್ದೇಶಿಸಿ ಸೋಮವಾರ ಮಾತನಾಡಿದರು. ಜಗತ್ತಿಗೆ ಪ್ರೀತಿ ಕರುಣೆ ಮತ್ತು ಮಮತೆಯನ್ನು ಪರಿಚಯಿಸಿದ 2,568ನೇ ಬುದ್ಧನ ಜನ್ಮ ದಿನವನ್ನು ಸ್ಲಂ ಭವನದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಈ ಪ್ರಪಂಚದಲ್ಲಿ ದುಖಃದಿಂದ ಹೊರಬರಲು ಪ್ರೀತಿಯನ್ನು ವಾಸ್ತವ ಜೀವನಕ್ಕೆ ತ್ಯಾಗವನ್ನು ಹೇಳಿದ ಪ್ರಪಂಚದ ಮೊದಲಿಗರು ಗೌತಮ ಬುದ್ಧ ಎಂದರು.ಸತ್ಯವನ್ನು ಕಾಣಲು ಜೀವನದಲ್ಲಿ ಶಾಂತಿಯ ಮಾರ್ಗವನ್ನು ಬೋಧಿಸಿ ಗುರುವಿಲ್ಲದೆ ಜ್ಞಾನ ದೊರೆಯದೆಂದು ಪ್ರತಿಪಾದಿಸಿದ್ದಾರೆ. ಬುದ್ಧನೂ ಮನುಷ್ಯನನ್ನು ಲೋಕ ಕಲ್ಯಾಣಕ್ಕಾಗಿ ಅಷ್ಟಾಂಗ ಮಾರ್ಗಗಳನ್ನು ಪ್ರತಿಪಾದಿಸಿ, ತಾಳ್ಮೆಯಿಂದ ಸಿಟ್ಟನ್ನು ಗೆಲ್ಲುವ ವಿಧಾನವನ್ನು ಪ್ರತಿಪಾದಿಸಿದ್ದಾರೆ. ಆಸೆಯಿಂದ ಮೌಢ್ಯವನ್ನು, ಮೌಢ್ಯದಿಂದ ದ್ವೇಷಕ್ಕೆ ಒಳಗಾಗಿ ಮಾನವೀಯತೆಯನ್ನು ಕಳೆದುಕೊಳ್ಳುವ ಮನುಷ್ಯ ಕುಲಕ್ಕೆ ಅಹಿಂಸೆಯನ್ನು ಪ್ರತಿಪಾದಿಸಿದ ಭಗವಾನ್ ಬುದ್ಧ ಹಿಂದಿನ ಆಧುನಿಕ ಜಗತ್ತು ಅಹಿಂಸೆಯ ಸಮಾಜವನ್ನು ಕೊಡುಗೆಯಾಗಿ ನೀಡಿದ್ದಾರೆ. ಹಾಗಾಗಿ ಭಾರತದಲ್ಲಿ ಅಷ್ಟೇ ಅಲ್ಲದೆ, ವಿಶ್ವದ ಮೊದಲ ದಾರ್ಶನಿಕನಾಗಿ ಗೌತಮ ಬುದ್ಧ ನಿಲ್ಲುತ್ತಾರೆ. ಅವರ ಈ ವಿಚಾರಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಲು ಬುದ್ಧಿಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ ಎಂದರು.
ನಗರ ಪಾಲಿಕೆ ಮಾಜಿ ಸದಸ್ಯ ಲಕ್ಷ್ಮೀನರಸಿಂಹರಾಜು, ಸ್ಲಂ ಸಮಿತಿ ಪದಾಧಿಕಾರಿಗಳಾದ ಶಂಕ್ರಯ್ಯ, ಜಾಬೀರ್‌ಖಾನ್, ಕಣ್ಣನ್, ತಿರುಮಲಯ್ಯ, ಕೃಷ್ಣಮೂರ್ತಿ, ಶಾರದಮ್ಮ, ಚಕ್ರಪಾಣಿ, ಧನಂಜಯ, ಅನುಪಮ, ಪೂರ್ಣಿಮ, ಸಂಧ್ಯ, ವಸಂತಮ್ಮ, ರಂಗನಾಥ್, ಗುಬ್ಬಿಯ ಮಾರಣ್ಣ, ವೆಂಕಟೇಶ್ ಮುತ್ತುಸ್ವಾಮಿ ಉಪಸ್ಥಿತರಿದ್ದರು.