ಬುದ್ಧನ ಶಾಂತಿಮಂತ್ರ ಜಗತ್ತಿಗೆ ಅನಿವಾರ್ಯ: ಸಚಿವ ಎಚ್.ಕೆ. ಪಾಟೀಲ

KannadaprabhaNewsNetwork |  
Published : May 02, 2026, 02:15 AM IST
 | Kannada Prabha

ಸಾರಾಂಶ

ಬುದ್ಧನ ತತ್ವಗಳು ಕೇವಲ ಒಂದು ಧರ್ಮ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ಅವು ಇಡೀ ಜಗತ್ತಿನ ಆಸ್ತಿ.

ಗದಗ: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡಗಳು ಕವಿದಿರುವ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಭಗವಾನ್ ಬುದ್ಧನ ಶಾಂತಿ ಮತ್ತು ಸಹಬಾಳ್ವೆಯ ಸಂದೇಶಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿವೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಕೆ. ಪಾಟೀಲ ತಿಳಿಸಿದರು.

ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಅಡಿಟೋರಿಯಂ ಸಭಾಂಗಣದಲ್ಲಿ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬುದ್ಧನ ತತ್ವಗಳು ಕೇವಲ ಒಂದು ಧರ್ಮ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ಅವು ಇಡೀ ಜಗತ್ತಿನ ಆಸ್ತಿ. ಅಮೆರಿಕಕ್ಕೆ ಕೋಟ್ಯಂತರ ಡಾಲರ್ ನಷ್ಟ ಇಂದಿನ ಜಾಗತಿಕ ರಾಜಕೀಯ ವಿದ್ಯಮಾನಗಳ ಕುರಿತು ರಷ್ಯಾ- ಉಕ್ರೇನ್ ಹಾಗೂ ಇಸ್ರೇಲ್- ಇರಾನ್ ನಡುವಿನ ಯುದ್ಧಗಳಿಂದಾಗಿ ಜಗತ್ತು ಭಾರೀ ಬೆಲೆ ತೆರುತ್ತಿದೆ.

ಕೇವಲ ಯುದ್ಧದ ಕಾರಣದಿಂದಾಗಿ ಅಮೆರಿಕದಂತಹ ದೊಡ್ಡ ರಾಷ್ಟ್ರವು ₹40 ಲಕ್ಷ ಕೋಟಿ ಡಾಲರ್‌ನಷ್ಟು ಆರ್ಥಿಕ ನಷ್ಟ ಅನುಭವಿಸಿದೆ ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬಹುದು. ಈ ಸಾವು- ನೋವು ಮತ್ತು ವಿನಾಶದ ಹಾದಿಯು ಮನುಕುಲಕ್ಕೆ ಮಾರಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬುದ್ಧ ಎಂದರೆ ಕಣ್ಣು ಮುಚ್ಚಿ ಕುಳಿತ ಶಾಂತಿಮೂರ್ತಿ ಮಾತ್ರವಲ್ಲ, ಆತ ಜಗತ್ತಿಗೆ ಏಕಾಗ್ರತೆ ಮತ್ತು ಸಮಾನತೆಯ ಪಾಠ ಕಲಿಸಿದ ಮಹಾಗುರು. ಸಮಾಜದಲ್ಲಿ ಗಂಡು, ಹೆಣ್ಣು, ಶ್ರೀಮಂತ, ಬಡವ ಎಂಬ ಭೇದವಿಲ್ಲದೆ ಎಲ್ಲರೂ ಒಂದೇ ಎಂಬ ಸಮಸಮಾಜದ ಕನಸನ್ನು ಬುದ್ಧ ಅಂದೇ ಕಂಡಿದ್ದರು. ಇಂದಿನ ರಾಜಕೀಯ ನಾಯಕರು ಒಬ್ಬರನ್ನೊಬ್ಬರು ಕೊಲ್ಲುವ, ದ್ವೇಷಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಆದರೆ, ಭಾರತವು ವಿವಿಧ ಜಾತಿ, ಧರ್ಮ ಮತ್ತು ಪಂಥಗಳ ನಡುವೆಯೂ ಬುದ್ಧನ ಶಾಂತಿ ಮಂತ್ರದ ಅಡಿಯಲ್ಲಿ ಒಗ್ಗಟ್ಟಿನಿಂದ ಸಾಗುತ್ತಿದೆ ಎಂದರು.

ನಗರದಲ್ಲಿ ಬೌದ್ಧ ಸಂಸ್ಕತಿ ಮತ್ತು ವಿಚಾರಧಾರೆಗಳನ್ನು ಪಸರಿಸುವ ನಿಟ್ಟಿನಲ್ಲಿ ₹10 ಕೋಟಿ ವೆಚ್ಚದಲ್ಲಿ ಭವ್ಯ ಬುದ್ಧ ವಿಹಾರ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈಗಾಗಲೇ ₹10 ಕೋಟಿಗಳ ಅನುದಾನ ಮಂಜೂರಾಗಿದ್ದು, ಆ ಪೈಕಿ ₹3 ಕೋಟಿ ಬಿಡುಗಡೆಯಾಗಿ ಜಿಲ್ಲಾಧಿಕಾರಿಗಳ ವ್ಯಾಪ್ತಿಗೆ ತಲುಪಿವೆ. ನಗರದ ಮೆಡಿಕಲ್ ಕಾಲೇಜು ಸಮೀಪವಿರುವ ಗುಡ್ಡದ ಮೇಲಿನ ಆಯಕಟ್ಟಿನ ಜಾಗದಲ್ಲಿ ವಿಹಾರ ತಲೆ ಎತ್ತಲಿದೆ. ಇದಕ್ಕೆ ಸಂಬಂಧಿಸಿದ ನಕ್ಷೆ ಮತ್ತು ಯೋಜನಾ ವರದಿ ಸಿದ್ಧವಾಗಿದ್ದು, ಒಂದು ತಿಂಗಳ ಒಳಗಾಗಿ ಕಾಮಗಾರಿ ಆರಂಭವಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಡಿ. ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಸಮಾಜದ ಗಣ್ಯರು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಿವೃತ್ತ ಉಪನ್ಯಾಸಕ ಸತೀಶ ಪಾಶಿ ಮಾತನಾಡಿದರು. ಜೇನುಗೂಡು ಕಲಾತಂಡದ ಬಸವರಾಜ ಅಂಗಡಿ ಮತ್ತು ಸಂಗಡಿಗರಿಂದ ಭಗವಾನ ಬುದ್ಧರ ಗಾಯನ ಪ್ರಸ್ತುತ ಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಕಾಂಗ್ರೆಸ್‌ ವಿರುದ್ಧ ನಿರಂತರ ಹೋರಾಟ: ವಿಜಯೇಂದ್ರ
ಮಸೂದೆಗೆ ಸೋಲಾಗಿದೆ ಎಂದು ಧೃತಿಗೆಡಬೇಡಿ: ವಿಜಯೇಂದ್ರ