ಕನ್ನಡಪ್ರಭ ವಾರ್ತೆ ಮೈಸೂರು
ಬುದ್ಧರ ತತ್ವ, ಚಿಂತನೆ, ವಿಚಾರಧಾರೆಗಳನ್ನು ಕನ್ನಡದಲ್ಲಿ ಹೆಚ್ಚು ಪ್ರಚಾರ ಮಾಡುವ ಕೆಲಸವಾಗಬೇಕು. ಆಗ ಮಾತ್ರ ಬುದ್ಧರ ವಿಚಾರಧಾರೆಗಳು ಜನಮಾನಸದಲ್ಲಿ ಉಳಿದುಕೊಳ್ಳುತ್ತದೆ ಎಂದು ಹಂಪಿ ವಿವಿ ಪ್ರಾಧ್ಯಾಪಕ ಚಿನ್ನಸ್ವಾನಿ ಸೋಸಲೆ ತಿಳಿಸಿದರು.ಮಾನಸಿನಗರದ ಬೋಧಿಸತ್ವ ಧ್ಯಾನ ಮಂದಿರದಲ್ಲಿ ಬೆಸ್ಟ್- ಬೋಧಿಸತ್ವ ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಟ್ರಸ್ಟ್ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ವಿದೇಶಿ ಸಂಸ್ಕೃತಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಟ್ಟು ಸ್ವದೇಶಿಯ ಸಂಸ್ಕೃತಿಯನ್ನು ಮರೆತ್ತಿದ್ದೇವೆ. ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಬಸವಣ್ಣ ತಮ್ಮ ವಚನಗಳನ್ನು ಬರೆದು ಇಂದಿಗೂ ಜನರ ಮನದಲ್ಲಿ ಜೀವಂತವಾಗಿದ್ದಾರೆ ಎಂದರು.
1920 ರಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ‘ಮೂಕನಾಯಕ’ ಪತ್ರಿಕೆಯನ್ನು ಹೊರತಂದು ದಲಿತರು, ಅಸ್ಪೃಶ್ಯರು, ಧ್ವನಿ ಇಲ್ಲದವರಿಗೆ ಧ್ವನಿಯಾಗಿ, ದೇಶದ ಜನಸಾಮಾನ್ಯರ ಸಮಸ್ಯೆಗಳನ್ನು ಬೆಳಕಿಗೆ ತಂದರು. ಅವರು ಭಾರತದ ಪತ್ರಿಕೋದ್ಯಮಕ್ಕೆ ತಾಯಿ ಬೇರು ಇದ್ದಂತೆ ಎಂದು ಅವರು ಬಣ್ಣಿಸಿದರು.ಡಾ. ಅಂಬೇಡ್ಕರ್ ಅವರು ತಮ್ಮ ಜೀವಿತಾಧಿಯಲ್ಲಿ 33 ವರ್ಷಗಳ ಕಾಲ ಶೈಕ್ಷಣಿಕ ಕ್ಷೇತ್ರದಲ್ಲಿ ಸುದೀರ್ಘವಾಗಿ ಅಧ್ಯಯನ ಮಾಡಿ, ಜ್ಞಾನ ಬೆಳೆಸಿಕೊಂಡು ನೊಂದ ಸಮಾಜಕ್ಕೆ ಮಾರ್ಗದಾತರಾದರು. ಆದರೆ, ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಲು ಜನರು ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿ ಎಂದರು.
ಇತ್ತೀಚೆಗೆ ತನ್ನತನವನ್ನೂ ಹೇಳಿಕೊಳ್ಳಲು ಭಯದ ವಾತಾವರಣ ಸೃಷ್ಟಿಯಾಗಿದೆ. ದೇವರು, ಧರ್ಮದ ವಿಚಾರಧಾರೆಯಲ್ಲಿ ಆಂತರಿಕವಾಗಿ ದ್ವಂದ್ವದಲ್ಲಿದ್ದೇವೆ, ಸತ್ಯದ ಮಾರ್ಗವನ್ನು ಒಪ್ಪಿಕೊಳ್ಳಲು ಅಂಜಿಕೆ ಏಕೆ? ಅಸ್ಪೃಶ್ಯರು ನೆಲಮೂಲ ಸಂಸ್ಕೃತಿಯನ್ನು ಮರೆತ್ತಿದ್ದೇವೆ. ಏನೇ ಸಮಸ್ಯೆ ಎದುರಾದರೂ ಯಾವುದೇ ಕಾರಣಕ್ಕೂ ಸ್ವಾಭಿಮಾನವನ್ನು ಬಿಟ್ಟುಕೊಡಬಾರದು. ಬಾಬಾಸಾಹೇಬರು ತೋರಿಸಿದ ಧಮ್ಮದ ಮಾರ್ಗದಲ್ಲಿ ಬದುಕು ಸಾಗಬೇಕಿದೆ ಎಂದು ಅವರು ಹೇಳಿದರು.ಬುದ್ಧ ವಂದನೆಯನ್ನು ನೆರವೇರಿಸಿದ ಜೇತವನ ಬುದ್ಧವಿಹಾರದ ಮನೋರಖ್ಖಿತ ಬಂತೇಜಿ ಮಾತನಾಡಿ, ಡಾ. ಅಂಬೇಡ್ಕರ್ ಅವರು ತಾವು ಪಡೆದಿದ್ದ ಅಪಾರ ಜ್ಞಾನ ಸಂಪತ್ತು, ತ್ಯಾಗ, ವಿಚಾರಧಾರೆಯಲ್ಲಿ ಪರಿಪೂರ್ಣತೆ, ಶುದ್ಧ ಜೀವನ, ನುಡಿದಂತೆ ನಡೆಯುವುದು, ದೂರದೃಷ್ಟಿಯ ಆಲೋಚನೆಯನ್ನು ಹೊಂದಿದ್ದರಿಂದ ಅವರನ್ನು ‘ಬೋಧಿಸತ್ವ’ ಎಂದು ಕರೆಯಲಾಗುತ್ತದೆ. ಅಂಬೇಡ್ಕರ್ ಅವರಲ್ಲಿ ಪ್ರೀತಿ, ತ್ಯಾಗ, ಕರುಣೆ ಜೊತೆಗೆ ತಾಯ್ತನದ ಗುಣಗಳನ್ನು ಹೊಂದಿದ್ದರು. ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದರು ಎಂದು ತಿಳಿಸಿದರು.
ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಡಾ. ಜಗನ್ನಾಥ್, ನಿವೃತ್ತ ಪ್ರಾಂಶುಪಾಲ ಸ್ವಾಮಿ, ಉಪಾಸಕರಾದ ಪುಟ್ಟಸ್ವಾಮಿ, ನಿಸರ್ಗ ಸಿದ್ದರಾಜು, ಪುನೀತ್, ಅಹಿಂದ ಜವರಪ್ಪ, ನಂಜುಂಡಸ್ವಾಮಿ, ಶಿಕ್ಷಕ ಉತ್ತಂಬಳ್ಳಿ ನಾಗರಾಜು, ಬಿಎಸ್‌ಎನ್‌ಎಲ್ ರಾಮಚಂದ್ರ, ಪಿ. ನಿರಂಜನ್, ನಂಜುಂಡಯ್ಯ, ಡಾ. ಶ್ವೇತಾ, ಮಹಾಲಕ್ಷ್ಮಿ, ರಾಜಮ್ಮ, ಬಾಲು, ಶಶಿ, ಕಿರಣ್ ಮೊದಲಾದವರು ಇದ್ದರು.