ಬಜೆಟ್‌: ಕರ್ನಾಟಕ ರೈಲ್ವೆಗೆ ₹ 7559 ಕೋಟಿ ಹಂಚಿಕೆ

KannadaprabhaNewsNetwork |  
Published : Jul 25, 2024, 01:17 AM IST
544 | Kannada Prabha

ಸಾರಾಂಶ

ಈ ಅನುದಾನವು ಯುಪಿಎ ಅವಧಿಯಲ್ಲಿ ನೀಡಿದ್ದಕ್ಕಿಂತ 9 ಪಟ್ಟು ಹೆಚ್ಚಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ವರ್ಷ ಸರಾಸರಿ ₹ 835 ಕೋಟಿ ಕರ್ನಾಟಕಕ್ಕೆ ಬರುತ್ತಿತ್ತು ಎಂದು ತಿಳಿಸಿದರು. ಈ ಸಲ ಅನುದಾನವನ್ನು ಮೂಲಸೌಕರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಹುಬ್ಬಳ್ಳಿ:

ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ದೊರೆತ ₹ 2.62 ಲಕ್ಷ ಕೋಟಿಯಲ್ಲಿ ಕರ್ನಾಟಕಕ್ಕೆ ₹ 7559 ಕೋಟಿ ಒದಗಿಸಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನ ವೈಷ್ಣವ ತಿಳಿಸಿದ್ದಾರೆ.

ವರ್ಚುವಲ್‌ ಮೂಲಕ ಸುದ್ದಿಗೋಷ್ಠಿ ನಡೆಸಿದ ಸಚಿವರು, ಈ ಅನುದಾನವು ಯುಪಿಎ ಅವಧಿಯಲ್ಲಿ ನೀಡಿದ್ದಕ್ಕಿಂತ 9 ಪಟ್ಟು ಹೆಚ್ಚಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ವರ್ಷ ಸರಾಸರಿ ₹ 835 ಕೋಟಿ ಕರ್ನಾಟಕಕ್ಕೆ ಬರುತ್ತಿತ್ತು ಎಂದು ತಿಳಿಸಿದರು. ಈ ಸಲ ಅನುದಾನವನ್ನು ಮೂಲಸೌಕರ್ಯಕ್ಕೆ ಬಳಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

2023-24ನೇ ಸಾಲಿನಲ್ಲಿ ಕರ್ನಾಟಕಕ್ಕೆ ₹ 7561 ಕೋಟಿ ಅನುದಾನ ಒದಗಿಸಲಾಗಿತ್ತು ಎಂದಿರುವ ಸಚಿವರು, ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ₹ 47 ಸಾವಿರ ಕೋಟಿ ವೆಚ್ಚದ 31 ಯೋಜನೆಗಳು ಪ್ರಗತಿ ಹಂತದಲ್ಲಿವೆ. 59 ನಿಲ್ದಾಣಗಳನ್ನು ಅಮೃತ ಭಾರತ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಮೃತ ಯೋಜನೆಯಡಿ ನಿಲ್ದಾಣಗಳನ್ನೆಲ್ಲ ವಿಶ್ವದರ್ಜೆಯ ಮಟ್ಟಕ್ಕೆ ಏರಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

638 ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಿಸಲಾಗಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ 2500 ಬೋಗಿಗಳನ್ನು ಹೆಚ್ಚುವರಿಯಾಗಿ ಜೋಡಿಸಲಾಗಿದೆ ಎಂದು ತಿಳಿಸಿದರು.

ಲೋಕೋ ಪೈಲಟ್‌ಗಳ ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಪೈಲಟ್‌ಗಳ ಮೇಲಿನ ಒತ್ತಡ ತಗ್ಗಿಸಲು ವಾರದ ಒಟ್ಟು ಕರ್ತವ್ಯದ ಅವಧಿಯನ್ನು 54 ತಾಸುಗಳಿಂದ 52ಕ್ಕೆ ಇಳಿಸಲಾಗಿದೆ. ರನ್ನಿಂಗ್ ರೂಂಗಳನ್ನು ಸಹ ಹೆಚ್ಚಿಸಲಾಗಿದೆ. ಇದರಿಂದ ಪೈಲಟ್‌ಗಳಿಗೆ ಹೆಚ್ಚು ಅನುಕೂಲವಾಗಿದೆ ಎಂದು ಸಚಿವರು ಹೇಳಿದರು.

2014ರಿಂದ 2024ರ ವರೆಗೆ ಸರಾಸರಿ 163 ಕಿಮೀ ವಾರ್ಷಿಕವಾಗಿ ನೂತನ ಮಾರ್ಗ ಹೆಚ್ಚಾಗಿದೆ. 2009ರಿಂದ 2014ರ ವರೆಗೆ ವರ್ಷಕ್ಕೆ 113 ಕಿಮೀ ಇತ್ತು. ಇದರಿಂದಾಗಿ ಎನ್‌ಡಿಎ ಅವಧಿಯಲ್ಲಿ 1.4 ಪಟ್ಟು ಹೆಚ್ಚಳವಾದಂತಾಗಿದೆ. 2009-2014ರ ಅವಧಿಯಲ್ಲಿ ವಿದ್ಯುದ್ದೀಕರಣವು ವರ್ಷಕ್ಕೆ ಸರಾಸರಿ 18 ಕಿಮೀ ಆಗುತ್ತಿತ್ತು. 2014-2024ರ ಅವಧಿಯಲ್ಲಿ ಸರಾಸರಿ ವಿದ್ಯುದ್ದೀಕರಣವನ್ನು ವರ್ಷಕ್ಕೆ 317 ಕಿಮೀಗೆ ಹೆಚ್ಚಳವಾಗಿದೆ. 18 ಪಟ್ಟು ಹೆಚ್ಚಾಗಿದಂತಾಗಿದೆ ಎಂದರು.

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಸಂಬಂಧಿಸಿದ ರೈಲ್ವೆ ಮಾಹಿತಿಯನ್ನು ಕೆಲವೇ ನಿಮಿಷಗಳಲ್ಲಿ ಹೇಳಿ ಮುಕ್ತಾಯಗೊಳಿಸಿದರು. ಪತ್ರಕರ್ತರ ಒಂದೆರಡು ಪ್ರಶ್ನೆಗಳಿಗೆ ಉತ್ತರಿಸಿ ಹೊರಟು ಹೋದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಸಕ್ಕೆ ಬೆಂಕಿ: ಹೊಗೆಯಿಂದ ಮನೆಯಲ್ಲಿ ಉಸಿರಾಡಲು ಆಗುತ್ತಿಲ್ಲ:ನಟಿ ಐಂದ್ರಿತಾ
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ