ಕೋಲಾರ : ಪ್ರತಿ ಬಾರಿಯೂ ರಾಜ್ಯ ಬಜೆಟ್‌ನಲ್ಲಿ ಕಡೆಗಣನೆಗೆ ಒಳಗಾಗುತ್ತಿದ್ದ ಕೋಲಾರ ಜಿಲ್ಲೆಗೆ 2025-26ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ೮ ಅಂಶಗಳ ಬಂಪರ್ ಕೊಡುಗೆಗಳನ್ನು ನೀಡಿದ್ದಾರೆ.ವೈದ್ಯಕೀಯ ಕಾಲೇಜು ಸ್ಥಾಪನೆ
ಕೋಲಾರದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ವೈದ್ಯಕೀಯ ಕಾಲೇಜನ್ನು ಆರಂಭಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಮಾಲೂರು ತಾಲೂಕು ಮಟ್ಟದ ಆಸ್ಪತ್ರೆಯ ನವೀಕರಣ. 3190 ಕೋಟಿ ರು.ಗಳ ವೆಚ್ಚದಲ್ಲಿ ದೇವನಹಳ್ಳಿ, ವಿಜಯಪುರ, ಎಚ್.ಕ್ರಾಸ್, ವೇಮಗಲ್, ಮಾಲೂರು, ತಮಿಳುನಾಡು ಗಡಿಯವರೆಗೆ ಕೈಗಾರಿಕಾ ಸಂಪರ್ಕ ಕಲ್ಪಿಸುವ 123 ಕಿ.ಮೀ ರಸ್ತೆಯನ್ನು ಪೂರ್ಣಗೊಳಿಸಲಾಗುವುದಾಗಿ ಹೇಳಿದ್ದಾರೆ.
ಕೈಗಾರಿಕಾ ಪಾರ್ಕ್ ಸ್ಥಾಪನೆ
ಮಾಲಿನ್ಯವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಶಿವಾರಪಟ್ಟಣ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷಿತ ಹಾಗೂ ಉತ್ತಮ ವಾತಾವರಣ ಕಲ್ಪಿಸಲು ಜಿಲ್ಲೆಯ ನರಸಾಪುರದಲ್ಲಿ 173 ಕೋಟಿ ರೂ. ವೆಚ್ಚದಲ್ಲಿ 6000 ಸಾಮರ್ಥ್ಯದ "ಮಹಿಳಾ ವಸತಿ ನಿಲಯ "ಗಳನ್ನು ನಿರ್ಮಿಸಲಾಗುವುದು.ಕೆಜಿಎಫ್‌ನಲ್ಲಿ ಮಾರುಕಟ್ಟೆ
ಕೆಜಿಎಫ್ ಬಳಿ ಭಾರತೀಯ ಮೀಸಲು ಪಡೆ ಸ್ಥಾಪಿಸಲು ೪೦ ಕೋಟಿ ರೂ. ಅನುದಾನ ಒದಗಿಸಲಗುವುದು. ರೈತರ ಆಧುನಿಕ ಮಾರುಕಟ್ಟೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು. ಕೋಲಾರದಲ್ಲಿ ಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.ಆದರೆ ಕೋಲಾರ ಜಿಲ್ಲೆಗೆ ಟೊಮೆಟೋ ಮಾರುಕಟ್ಟೆಗೆ ಜಾಗ, ರಿಂಗ್ ರಸ್ತೆ, ಕೆಸಿವ್ಯಾಲಿ ಮೂರನೇ ಹಂತದ ಶುದ್ಧೀಕರಣ, ಟೊಮೆಟೋ ಗುಣಮಟ್ಟ ಕಳೆದುಕೊಳ್ಳುತ್ತಿರುವುದಕ್ಕೆ ತಜ್ಞರ ಸಮಿತಿ ರಚನೆ, ಎತ್ತಿನಹೊಳೆ ಯೋಜನೆ ಚುರುಕಿಗೆ ಕ್ರಮ, ಮಾವು ಸಂಸ್ಕರಣಾ ಘಟಕ ಸೇರಿದಂತೆ ಅನೇಕ ಕೂಗುಗಳು ಜಿಲ್ಲೆಯಲ್ಲಿದ್ದು, ಅವುಗಳ ಕಡೆಗೆ ಜನಪ್ರತಿನಿಧಿಗಳು ಈ ಬಾರಿ ಮಂಡಿಸುವ ಬಜೆಟ್‌ನಲ್ಲಿ ಒತ್ತು ನೀಡದಿರುವುದು ಜಿಲ್ಲೆಯ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.