ಬಜೆಟ್‌ನಲ್ಲಿ ಸೌಂದರ್ಯೀಕರಣ, ಮೂಲಸೌಲಭ್ಯ, ಸ್ವಚ್ಛತೆಗೆ ಒತ್ತು

KannadaprabhaNewsNetwork |  
Published : Mar 02, 2025, 01:18 AM IST
ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತಾರೂಢ ಬಿಜೆಪಿ 2025-26ನೇ ಸಾಲಿನ ಆರ್ಥಿಕ ವರ್ಷಕ್ಕೆ ₹ 441.99 ಕೋಟಿ ಗಾತ್ರದ ಬಜೆಟ್‌ನ್ನು ಶನಿವಾರ ಪಾಲಿಕೆ ಸಭಾಭವನದಲ್ಲಿ ಮಂಡಿಸಿತು. | Kannada Prabha

ಸಾರಾಂಶ

ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತಾರೂಢ ಬಿಜೆಪಿ 2025-26ನೇ ಸಾಲಿನ ಆರ್ಥಿಕ ವರ್ಷಕ್ಕೆ ₹441.99 ಕೋಟಿ ಗಾತ್ರದ ಬಜೆಟ್‌ ಅನ್ನು ಶನಿವಾರ ಪಾಲಿಕೆ ಸಭಾಭವನದಲ್ಲಿ ಮಂಡಿಸಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತಾರೂಢ ಬಿಜೆಪಿ 2025-26ನೇ ಸಾಲಿನ ಆರ್ಥಿಕ ವರ್ಷಕ್ಕೆ ₹441.99 ಕೋಟಿ ಗಾತ್ರದ ಬಜೆಟ್‌ ಅನ್ನು ಶನಿವಾರ ಪಾಲಿಕೆ ಸಭಾಭವನದಲ್ಲಿ ಮಂಡಿಸಿತು.

ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ನೇತ್ರಾವತಿ ಭಾಗವತ್ ಅವರು ₹10.35 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು. ₹441.99 ಕೋಟಿ ಅಂದಾಜು ಆದಾಯ ಹಾಗೂ ₹ 441.89 ಕೋಟಿ ಅಂದಾಜು ವೆಚ್ಚ ಭರಿಸಲು ನಿರೀಕ್ಷಿಸಲಾಗಿದೆ. ಬೆಳಗಾವಿಯನ್ನು ಸ್ವಚ್ಛ ಸುಂದರ ನಗರವಾಗಿಸಲು, ಉತ್ತಮ ಪರಿಸರವನ್ನು ಹೊಂದಲು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಖಾಲಿ ಸ್ಥಳಗಳನ್ನು ತಂಗುದಾಣಗಳಿಗಾಗಿ ಮತ್ತು ಮಾರುಕಟ್ಟೆಗಳಿಗಾಗಿ ಮಾರ್ಪಡಿಸಿ ಪಾಲಿಕೆಯ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ.ಎಲ್ಲೆಲ್ಲಿಂದ ಆದಾಯ ಸಂಗ್ರಹ ಬರುತ್ತೆ?:

ಆಸ್ತಿಗಳಿಂದ ಸಂಗ್ರಹಿಸುವ ಆಸ್ತಿ ತೆರಿಗೆ ಅಂದಾಜು ₹78 ಕೋಟಿ ನಿಗದಿಪಡಿಸಿದೆ. ಕಟ್ಟಡ ಪರವಾನಗಿಯಿಂದ ಅಭಿವೃದ್ಧಿ ಶುಲ್ಕ, ಸುಧಾರಣೆ ಶುಲ್ಕದಿಂದ ₹10.5 ಕೋಟಿ, ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನದಡಿಯಲ್ಲಿ ₹7.10 ಕೋಟಿ, ಎಸ್‌ಎಫ್‌ಸಿ ವಿದ್ಯುತ್‌ಶಕ್ತಿ ಅನುದಾನದಡಿ ₹52 ಕೋಟಿ ಅನುದಾನ ನಿರೀಕ್ಷಿಸಲಾಗಿದೆ. 16ನೇ ಹಣಕಾಸು ಆಯೋಗ ಅನುದಾನ ₹20 ಕೋಟಿ, ಹೆಸ್ಕಾಂ ಇಲಾಖೆಯಿಂದ ಕೇಬಲ್‌ ಹಾಕುವ ಶುಲ್ಕ ₹17 ಕೋಟಿ, ರಸ್ತೆ ಅಗೆತದಿಂದ ₹2.75 ಕೋಟಿ, ಘನತ್ಯಾಜ್ಯ ವಸ್ತು ನಿರ್ವಹಣೆ ಸಂಗ್ರಹಣೆಯಿಂದ ₹9.75 ಕೋಟಿ, ಸ್ಥಿರಾಸ್ತಿಗಳ ನೋಂದಣಿಯಿಂದ ಅದಿಭಾರ ಶುಲ್ಕ ₹1.10 ಕೋಟಿ ಹಾಗೂ ಆಸ್ತಿಗಳ ವರ್ಗಾವಣೆ ಶುಲ್ಕ, ದಂಡಗಳಿಂದ ಅಂದಾಜು ಸ್ವೀಕೃತಿ ಮೊತ್ತ ₹ 80 ಲಕ್ಷ ಹೀಗೆ ಒಟ್ಟು ₹ 441.99 ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ.ಅಂದಾಜು ವೆಚ್ಚಗಳು:

ಪಾಲಿಕೆಯ ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯೆ ₹2000 ಹಣವನ್ನು ಪ್ರತಿ ತಿಂಗಳಂತೆ ಒಟ್ಟು ₹2.50 ಕೋಟಿ ಹಾಗೂ ಉಪಹಾರ ಭತ್ಯೆ ₹35 ಪ್ರತಿದಿನದಂತೆ ಒಟ್ಟು ₹1.50 ಕೋಟಿ ಪಾಲಿಕೆ ಸ್ವಂತ ನಿಧಿಯಿಂದ ಭರಿಸಲು ಕ್ರಮಕೈಗೊಳ್ಳಲಾಗಿದೆ. ಬೆಳಗಾವಿಯನ್ನು ಸ್ವಚ್ಛ ನಗರವಾಗಿಡಲು ಹೊರಗುತ್ತಿಗೆ ಸ್ವಚ್ಛತಾ ವೆಚ್ಚಕ್ಕಾಗಿ ₹29.32 ಕೋಟಿ ವೆಚ್ಚ ಭರಿಸಲು ಕಾಯ್ದಿರಿಸಲಾಗಿದೆ. ನೇರ ನೇಮಕಾತಿ ಹೊಂದಿದ ಪೌರಕಾರ್ಮಿಕರ ವೇತನಕ್ಕಾಗಿ ₹10 ಕೋಟಿ ಕಾಯ್ದಿರಿಸಲಾಗಿದೆ.ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿಗೆ ₹4 ಕೋಟಿ ಮೀಸಲಿರಿಸಿದೆ. ಬೀದಿ ದೀಪಗಳ ನಿರ್ವಹಣೆಗಾಗಿ ₹2.50 ಕೋಟಿ, ರಸ್ತೆ, ಚರಂಡಿ, ಪಾದಚಾರಿ, ಮಳೆ ನೀರು ನಿರ್ವಹಣೆ, ರಸ್ತೆಗಳಿಗೆ ಮಾರ್ಗಸೂಚಿ ಅಳವಡಿಸಲು ₹9.25. ಕೋಟಿ ನಿಗದಿಪಡಿಸಲಾಗಿದೆ. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ನಿರ್ವಹಣೆಗಾಗಿ ₹ 75 ಲಕ್ಷ, ಪಾಲಿಕೆಯ ಆದಾಯದಲ್ಲಿ ಎಲ್ಲ ಜಮೆ ಮತ್ತು ಖರ್ಚುಗಳನ್ನು ಹೊರತುಪಡಿಸಿ ಲಭ್ಯವಾಗುವ ಶೇ.1 ರಷ್ಟು ಮೊತ್ತವನ್ನು ಅಂದಾಜು ಆಯವ್ಯಯದಲ್ಲಿ ₹3.75 ಲಕ್ಷ ಕ್ರೀಡೆಗಳಿಗಾಗಿ ಮೀಸಲಿರಿಸಿದೆ.

ಪತ್ರಕರ್ತರ ಕ್ಷೇಮನಿಧಿಗೆ ₹50 ಲಕ್ಷ:

ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗಾಗಿ ಪತ್ರಕರ್ತರ ಕ್ಷೇಮನಿಧಿ ಸಲುವಾಗಿ ₹50 ಲಕ್ಷ ನಿಗದಿಪಡಿಸಲಾಗಿದೆ. ₹75 ಲಕ್ಷ ಹಣವನ್ನು ಪಾಲಿಕೆ ವ್ಯಾಪ್ತಿಯಲ್ಲಿ ಒಳಪಡುವ ಸ್ಮಶಾನಗಳಲ್ಲಿ ದಹನ ಕ್ರಿಯೆ ನಡೆಸಲು ಹಾಗೂ ಅಭಿವೃದ್ಧಿಗಾಗಿ ನಿಗದಿಪಡಿಸಲಾಗಿದೆ. ಕುಡಿಯುವ ನೀರು ಸರಬರಾಜು, ತೆರೆದ ಭಾವಿ ಅಭಿವೃದ್ಧಿಗಾಗಿ ₹1.57 ಕೋಟಿ ಕಾಯ್ದಿರಿಸಿದೆ.

ನಗರದ ಸೌಂದರ್ಯೀಕರಣಕ್ಕೆ ಆದ್ಯತೆ:

ನಗರದ ಸೌಂದರ್ಯೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ 58 ವಾರ್ಡ್‌ಗಳಲ್ಲಿ ಹೊಸ ರಸ್ತೆ ನಿರ್ಮಿಸಲು ₹5 ಕೋಟಿ, ಸಿಸಿ ರಸ್ತೆ ನಿರ್ಮಾಣಕ್ಕೆ ₹1 ಕೋಟಿ, ಚರಂಡಿ ನಿರ್ಮಾಣಕ್ಕೆ ₹4 ಕೋಟಿ, ಪಾಲಿಕೆಯ ಖುಲ್ಲಾ ಜಾಗಗಳನ್ನು ಸಂರಕ್ಷಿಸಲು ₹ 1 ಕೋಟಿ, ನಗರದ ವರ್ತುಲಗಳ ಸೌಂದರ್ಯೀಣಕ್ಕಾಗಿ ₹50 ಲಕ್ಷ ಹೀಗೆ ಒಟ್ಟಾರೆ ಮೂಲಭೂತ ಸೌಕರ್ಯಕ್ಕಾಗಿ ಹಾಗೂ ನಗರದ 58 ವಾರ್ಡ್‌ಗಳಲ್ಲಿ ವಿವಿಧ ಮೂಲ ಸೌಕರ್ಯಕ್ಕಾಗಿ ₹27 ಕೋಟಿ ನಿಗದಿಪಡಿಸಿದೆ. ಹೊಸದಾಗಿ ಗಣಕೀಕರಣಕ್ಕಾಗಿ ಯಂತ್ರೋಪಕರಣ ಖರೀದಿ ₹1 ಕೋಟಿ, ಪಾಲಿಕೆಯಲ್ಲಿ ಇ ಆಫೀಸ್‌ ನಿರ್ಮಾಣಕ್ಕೆ ₹ 25 ಲಕ್ಷ ಕಾಯ್ದಿರಿಸಲಾಗಿದೆ.ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉದ್ಯಾನಗಳ ಅಭಿವೃದ್ಧಿಗೆ ₹3.20 ಕೋಟಿ ನಿಗದಿಪಡಿಸಿದೆ. ನಾಯಿಗಳ ಆಶ್ರಯಕ್ಕೆ ₹20 ಲಕ್ಷ ಕಾಯ್ದಿರಿಸಿದೆ. 2 ಹೊಸ ಶವ ವಾಹನ ಖರೀದಿಗಾಗಿ ₹40 ಲಕ್ಷ, ಒಳಚರಂಡಿ ದುರಸ್ತಿ ಮತ್ತು ಹೊಸ ಒಳಚರಂಡಿ ನಿರ್ಮಾಣಕ್ಕಾಗಿ ಹಾಗೂ ಸಮುದಾಯ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕಾಗಿ ₹ 6 ಕೋಟಿ ನಿಗದಿಪಡಿಸಿದೆ. ಪಾಲಿಕೆಯಿಂದ ನಿವ್ವಳವಾಗಿ ಸ್ವೀಕೃತವಾಗುವ ಕಂದಾಯ ವಸೂಲಾತಿಯ ಆಧಾರದ ಮೇಲೆ ಸರ್ಕಾರದ ಸುತ್ತೋಲೆಯ ಮಾರ್ಗಸೂಚಿಗಳ ಪ್ರಕಾರ ಉಳಿತಾಯವಾಗುವ ಅಂದಾಜು ಮೊತ್ತದ ಮೇಲೆ ಶೇ.24.10, ಶೇ.7.2 ಮತ್ತು ಶೇ.5 ರಷ್ಟು ಮೊತ್ತವನ್ನು ಪಾಲಿಕೆ ಅನುದಾನದಿಂದ ಅಂದಾಜು ಮೊತ್ತ ₹3.28 ಕೋಟಿ ಕಾಯ್ದಿರಿಸಲು ಕ್ರಮ ಜರುಗಿಸಲಾಗುವುದು. ಅದರಂತೆ ಎಸ್.ಎಫ್.ಸಿ ನಿಧಿಯಿಂದ ಬಿಡುಗಡೆಯಾಗುವ ಶೇ.29 ರಷ್ಟು ಮೊತ್ತವನ್ನು ಸಂಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲು ಯೋಜನೆ ರೂಪಿಸಲಾಗಿದೆ. ಈ ವೇಳೆ ಮೇಯರ್‌ ಸವಿತಾ ಕಾಂಬಳೆ, ಉಪಮೇಯರ್‌ ಆನಂದ ಚೌಹಾಣ್, ಪಾಲಿಕೆ ಆಯುಕ್ತ ಶುಭ ಮೊದಲಾದವರು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ